ಗೋವಾದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ತಮ್ಮ ನಾಲ್ಕು ವರ್ಷದ ಮಗನನ್ನು ಕೊಂದ ಬೆಂಗಳೂರಿನ ಕಂಪೆನಿಯೊಂದರ ಮಹಿಳಾ ಸಿಇಒ ಸುಚನಾ ಸೇಠ್ ಅವರ ಮಾನಸಿಕ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಲು ಗೋವಾ ನ್ಯಾಯಾಲಯವು ಅನುಮತಿ ನೀಡಿದೆ.
ಸುಚನಾ ಸೇಠ್ ಅವರ ತಂದೆ ಮಾನಸಿಕ ಆರೋಗ್ಯ ಕಾಯಿದೆಯಡಿ ವೈದ್ಯರ ಮಂಡಳಿಯಿಂದ ಆಕೆಯ ಮಾನಸಿಕ ಸ್ಥಿತಿಯನ್ನು ಪರೀಕ್ಷಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ಸಮಯದಲ್ಲಿ ಆಕೆಯ ಮಾನಸಿಕ ಆರೋಗ್ಯದ ಸ್ಥಿತಿಯನ್ನು ಮೌಲ್ಯಮಾಪನ ಮಾಡುವಾಗ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಕಂಡಿಲ್ಲ ಎಂದು ಪೊಲೀಸರು ತಿಳಿಸಿ, ಈ ಮನವಿಯನ್ನು ತಿರಸ್ಕಾರ ಮಾಡಿ ವಿರೋಧಿಸಿದ್ದರು.
ಸೋಮವಾರ ನ್ಯಾಯಾಲಯವೂ ಅರ್ಜಿಯನ್ನು ಅನುಮತಿಸಿದೆ. ಸುಚನಾ ಸೇಠ್ ಅವರ ಮಾನಸಿಕ ಸ್ಥಿತಿಯ ಹೊಸ ಪರೀಕ್ಷೆಗಾಗಿ ಪೊಲೀಸರು ವೈದ್ಯಕೀಯ ಮಂಡಳಿಯ ಮುಂದೆ ಹಾಜರುಪಡಿಸಬೇಕಾಗುತ್ತದೆ ಎಂದು ಸುಚನಾ ಸೇಠ್ ತಂದೆ ಪರ ವಕೀಲರು ತಿಳಿಸಿದ್ದಾರೆ.
ಜನವರಿಯಲ್ಲಿ ಆಕೆ ಬಂಧನದಲ್ಲಿದ್ದ ಅವಧಿಯಲ್ಲಿ ಆಕೆಯ ಮಾನಸಿಕ ಆರೋಗ್ಯದ ಮೌಲ್ಯಮಾಪನ ಸೇರಿದಂತೆ ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ಈ ವೇಳೆ, ಅವರು ತಮ್ಮ ಮೌಲ್ಯಮಾಪನಗಳಲ್ಲಿ ಸ್ಪಷ್ಟ ಮತ್ತು ತರ್ಕಬದ್ಧ ಉತ್ತರಗಳನ್ನು ನೀಡಿದ್ದಾರೆ. ಯಾವುದೇ ರೀತಿಯ ಸಕ್ರಿಯ ಸಾವಿನ ಆಶಯ ಅಥವಾ ಆತ್ಮಹತ್ಯೆ ಪ್ರವೃತ್ತಿಯನ್ನು ವರದಿ ಮಾಡಿಲ್ಲ. ಆಕೆಯ ಪ್ರತಿಕ್ರಿಯೆಗಳಲ್ಲಿ ಯಾವುದೇ ವಿಕೃತ ಮನಸ್ಥಿತಿಯ ಲಕ್ಷಣಗಳು ಕಂಡುಬಂದಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ಸಾಲು ಸಾಲು ರಜೆ | ಕೆಎಸ್‌ಆರ್‌ಟಿಸಿಯಿಂದ 1,500 ವಿಶೇಷ ಬಸ್ ಸಂಚಾರ
ಏನಿದು ಘಟನೆ?
ಗೋವಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕ್ಯಾಂಡೋಲಿಮ್ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಸುಚನಾ ಸೇಠ್ ತಮ್ಮ ಮಗನನ್ನು ಕೊಂದ ಆರೋಪ ಹೊತ್ತಿದ್ದಾರೆ.
ಕೊಲ್ಕತ್ತಾ ಮೂಲದ ಸುಚನಾ ಸೇಠ್ 2008-09ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಇಲ್ಲಿ ಸ್ಟಾರ್ಟ್ಅಪ್ ಕಂಪನಿಯೊಂದು ಪ್ರಾರಂಭಿಸಿದ್ದರು. ಕಂಪನಿಯ ಸಿಇಒ ಆಗಿರುವ ಸುಚನಾ ಅವರು ಇಲ್ಲಿಯೇ ತಮಿಳುನಾಡು ಮೂಲದ ಟೆಕ್ಕಿ ವೆಂಕಟರಮಣ ಜೊತೆ ವಿವಾಹವಾಗಿದ್ದರು. ನಂತರ ದಂಪತಿ ನಡುವೆ ಮನಸ್ತಾಪವಾಗಿದೆ. ಬಳಿಕ, ಸುಚನಾ 2020ರಲ್ಲಿ ಪತಿಯಿಂದ ದೂರವಾಗಿ, ವಿಚ್ಛೇದನ ಪಡೆದಿದ್ದರು.
ಜನವರಿ 8 ರಂದು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಿಂದ ತನ್ನ ಮಗನ ದೇಹವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಅವರನ್ನು ಬಂಧಿಸಲಾಯಿತು.