ದಲಿತ ವಿದ್ಯಾರ್ಥಿಯೊಬ್ಬನನ್ನು ದಲಿತ ಸಮುದಾಯಕ್ಕೇ ಸೇರಿದ ಕೆಲವು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ. ಈ ದುರ್ಘಟನೆಯಿಂದಾಗಿ ವಿಶಾಲ ದಲಿತ ಸಮುದಾಯದೊಳಗೆ ಜೀವಂತವಾಗಿರುವ ಜಾತಿ ವ್ಯವಸ್ಥೆಯ ಕರಾಳತೆ ಮುನ್ನೆಲೆಗೆ ಬಂದಂತಾಗಿದೆ.
ಚಲ್ದಿಗಾನಹಳ್ಳಿ ಗ್ರಾಮದ ರಾಕೇಶ್ ಕೊಲೆಯಾದ ಯುವಕ. ಈ ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯಾದ ವಿದ್ಯಾರ್ಥಿಯ ತಂದೆ ಕ್ರಾಂತಿಕುಮಾರ್ (ಚಿಕ್ಕನರಸಿಂಹಪ್ಪ) ಅವರು ನೀಡಿದ ದೂರನ್ನು ಆಧರಿಸಿ ಶ್ರೀನಿವಾರಪುರದ ಜಗಜೀವನಪಾಳ್ಯದ ಸೋಮಶೇಖರ, ನವೀನ, ನಾಗೇಶ್, ದಾಸಪ್ಪ ಎಂಬವರ ವಿರುದ್ಧ ಐಪಿಸಿ ಸೆಕ್ಷನ್ 302, 201, 363, 342, 34 ಅಡಿಯಲ್ಲಿ ಎಫ್ಐಆರ್ ಆಗಿದೆ.
ರಾಕೇಶ್ ತಂದೆ ನೀಡಿರುವ ದೂರಿನಲ್ಲಿ ಏನಿದೆ?
“ನನ್ನ ಮಗನಾದ ರಾಕೇಶ್ ದಿನಾಂಕ 17-07-2023ರಂದು ಬೆಳಿಗ್ಗೆ 7.30 ಗಂಟೆ ಸಮಯದಲ್ಲಿ ಮನೆಯಿಂದ ಹೊರಟು ಕಾಲೇಜಿಗೆ ಹೋಗಿದ್ದನು. ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಈ ಸಲುವಾಗಿ ಊರಿನಲ್ಲಿ, ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದೆವು. 17ನೇ ತಾರೀಖಿನಂದು ಬೆಳಿಗ್ಗೆ ತನ್ನ ಕ್ಲಾಸ್ ಮೇಟ್ ವೇದಾಂತ್ ಎನ್ನುವವನ ಜೊತೆಯಲ್ಲಿ ಶ್ರೀನಿವಾಸಪುರದ ಸಾಗರ್ ಚಾಟ್ಸ್‌ನಲ್ಲಿ ನನ್ನ ಮಗ ಕುಳಿತ್ತಿದ್ದನು. ಆಗ ಶ್ರೀನಿವಾಸಪುರದ ಜಗಜೀವನಪಾಳ್ಯದ ನಿವಾಸಿಗಳಾದ ಸೋಮಶೇಖರ, ನವೀನ್, ನಾಗೇಶ್, ದಾಸಪ್ಪ ಎಂಬುವವರು ಕರೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.
ಪೊಲೀಸರಿಗೆ ದೂರು ನೀಡುವುದಕ್ಕಾಗಿ ಮಾರನೇ ದಿನ ಬೆಳಿಗ್ಗೆ 10 ಗಂಟೆ ಸಮಯಕ್ಕೆ ಶ್ರೀನಿವಾಸಪುರಕ್ಕೆ ಬಂದಾಗ, ಊರಿನಿಂದ ಪೋನ್ ಕರೆ ಬಂದಿದೆ. ರಾಕೇಶ್‍ನ ಮೃತದೇಹ ಚಲ್ದಿಗಾನಹಳ್ಳಿ ಗ್ರಾಮದ ಗೋಪಾಲಕೃಷ್ಣ ಅವರ ಕೃಷಿ ಹೊಂಡದಲ್ಲಿ ಪತ್ತೆಯಾಗಿದೆ ಎಂದು ಮಾಹಿತಿ ಬಂದಿದೆ.ʼʼʻʻಈ ನಾಲ್ವರು ಆರೋಪಿಗಳು ನನ್ನ ಮಗನನ್ನು ಇಡೀ ರಾತ್ರಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಬಾಯಿ, ಮೂಗಲ್ಲಿ ರಕ್ತ ಬರುವಂತೆ ಹೊಡೆದು, ಕೈಕಾಲುಗಳ ಮೇಲೆ ದೊಣ್ಣೆಯಿಂದ ಥಳಿಸಿ ಸಾಯಿಸಿದ್ದಾರೆ. ಬಳಿಕ ಗ್ರಾಮದ ಕೃಷಿ ಹೊಂಡದಲ್ಲಿ ಬಿಸಾಡಿದ್ದಾರೆʼʼ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ʻಈದಿನ.ಕಾಂʼ ಜೊತೆ ಮಾತನಾಡಿದ ಮೃತನ ಚಿಕ್ಕಪ್ಪ ನಿರಂಜನ್, ʼʼರಾಕೇಶ್ ತನ್ನ ಕ್ಲಾಸ್‍ಮೇಟ್ ಸ್ನೇಹಿತೆಯೊಂದಿಗೆ ಪಾನಿಪುರಿ ತಿನ್ನಲು ಹೋಗಿದ್ದ. ಜೊತೆಯಲ್ಲಿ ಸ್ನೇಹಿತ ವೇದಾಂತ್ ಕೂಡ ಇದ್ದನು. ಯುವತಿ ಮತ್ತು ರಾಕೇಶ್ ಸ್ನೇಹಿತರಾಗಿದ್ದರು. ಆದರೆ ಯುವತಿಯ ಕಡೆಯವರು ರಾಕೇಶ್‍ನನ್ನು ಕರೆದೊಯ್ದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದವರು ಮತ್ತು ಕೊಲೆಯಾದ ಯುವಕನ ಕುಟುಂಬದ ನಡುವೆ ಯಾವುದೇ ಕಲಹವಿರಲಿಲ್ಲ. ಆರೋಪಿಗಳು ಹೊಲೆಯ ಸಮುದಾಯದವರಾಗಿದ್ದು, ಕೊಲೆಯಾದ ಯುವಕ ಮಾದಿಗ ಸಮುದಾಯದವನಾಗಿದ್ದಾನೆʼʼ ಎಂದು ಮಾಹಿತಿ ನೀಡಿದ್ದಾರೆ.
ʻಈದಿನ.ಕಾಂʼಗೆ ಪ್ರತಿಕ್ರಿಯಿಸಿದ ಶ್ರೀನಿವಾಸಪುರ ಠಾಣೆ ಪೊಲೀಸರು, ʼʼಆರೋಪಿಗಳಾದ ಸೋಮಶೇಖರ್, ದಾಸಪ್ಪನನ್ನು ಬಂಧಿಸಲಾಗಿದೆ. ಇನ್ನಿಬ್ಬರ ಬಂಧನಕ್ಕಾಗಿ ಹುಡುಕಾಟ ನಡೆಸಿದ್ದೇವೆ. ತನಿಖೆಯ ಬಳಿಕ ಹೆಚ್ಚಿನ ವಿವರಗಳು ಲಭ್ಯವಾಗಲಿವೆʼʼ ಎಂದು ತಿಳಿಸಿದರು.ಕೊಲೆಯಾದ ವಿದ್ಯಾರ್ಥಿ ರಾಕೇಶ್ ಮಾದಿಗ ಜಾತಿಗೆ ಸೇರಿದವನಾಗಿದ್ದು ಆತನ ಸ್ನೇಹಿತೆ ಹೊಲೆಯ ಜಾತಿಗೆ ಸೇರಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ. ಅವರಿಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಈ ಕೊಲೆಗೆ ಅಂತರ್ಜಾತಿ ಪ್ರೇಮವೇ ಕಾರಣ ಎಂಬುದು ಮೇಲುನೋಟಕ್ಕೆ ಕಂಡು ಬಂದಿದೆ. ಸತ್ಯಾಸತ್ಯತೆ ಸರಿಯಾದ ತನಿಖೆಯಿಂದ ಹೊರಬರಬೇಕಿದೆ. ಈ ದುರ್ಘಟನೆಯು ದಲಿತ ಸಮುದಾಯಗಳ ಒಳಗಡೆಯೇ ಇರುವ ಜಾತೀಯತೆಯ ಕರಾಳ ಮುಖವನ್ನು ಬೆಳಕಿಗೆ ತಂದಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.