ಜೆಡಿಎಸ್ ಕಾರ್ಯಕರ್ತನೊಬ್ಬನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನದಲ್ಲಿರುವ ಜೆಡಿಎಸ್ ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಜೂನ್ 23ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸೂರಜ್ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ ಅವರು ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಹಾಸನ ಎಸ್‌ಪಿ, ಸಿಐಡಿ ಡಿಜಿಪಿಗೆ ಪತ್ರ ಬರೆದಿದ್ದಾರೆ. ಖುದ್ದು ಸಿಐಡಿ ಕಚೇರಿಗೆ ತೆರಳಿ ಕೇಸ್ ಫೈಲ್ ನೀಡುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ, ತನಿಖೆಗೆ ತಯಾರಿ ಮಾಡಿಕೊಳ್ಳಲು ಸಿಐಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸೂರಜ್ ರೇವಣ್ಣ ವಿರುದ್ಧ ಹಾಸನ ಜಿಲ್ಲೆಯ ಹೊಳೆ ನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 377, 342, 506, 34ರ ಅಡಿ ಶನಿವಾರ ಪ್ರಕರಣ ದಾಖಲಾಗಿತ್ತು. ದೂರು ದಾಖಲಾದ ಬೆನ್ನಲ್ಲೇ, ಪೊಲೀಸರು ಸೂರಜ್ ಅವರನ್ನು ಬಂಧನ ಮಾಡಿದ್ದಾರೆ. ಸಕಲೇಶಪುರದ ಡಿವೈಎಸ್‌ಪಿ ಪ್ರಮೋದ್ ಸೂರಜ್ ಅವರನ್ನು ಬಂಧಿಸಿರುವ ಪೊಲೀಸ್ ಅಧಿಕಾರಿಯಾಗಿದ್ದಾರೆ. ಡಿಜಿಪಿ ಕಚೇರಿಯಲ್ಲಿ ದೂರು ನೀಡಿದ್ದ ಸಂತ್ರಸ್ತ ಹಾಸನ ಎಸ್‌ಪಿಗೂ ದೂರಿನ ಪ್ರತಿಯನ್ನ ಮೇಲ್ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ; ಕರಾವಳಿ ಜಿಲ್ಲೆಗೆ ‘ರೆಡ್ ಅಲರ್ಟ್’ ಘೋಷಿಸಿದ ಹವಾಮಾನ ಇಲಾಖೆ
ವೈದ್ಯಕೀಯ ಪರೀಕ್ಷೆಗಾಗಿ ಸೂರಜ್ ರೇವಣ್ಣ ಅವರನ್ನು ಇಂದು ಆಸ್ಪತ್ರೆಗೆ ಹಾಜರುಪಡಿಸಲಾಗಿದೆ. ಇಂದೇ ನ್ಯಾಯಾಧೀಶರ ಮುಂದೆ ಸೂರಜ್ ಅವರನ್ನು ಹಾಜರುಪಡಿಸುವ ಸಾಧ್ಯತೆ ಇದೆ.
“ದೂರು ಬಂದಿದೆ. ಎಫ್‌ಐಆರ್ ಕೂಡ ಆಗಿದೆ. ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡುತ್ತೇವೆ. ಇತರಹದ ಪ್ರಕರಣಗಳನ್ನು ಸಿಐಡಿಗೆ ನೀಡಬೇಕಾಗುತ್ತದೆ. ಮುಂದೆ ಏನು ಕ್ರಮ ತೆಗೆದುಕೊಳ್ಳಬೇಕೆಂಬ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ” ಎಂದು ಗೃಹ ಸಚಿವ ಡಾ ಜಿ.ಪರಮೇಶ್ವರ್ ಹೇಳಿದರು.
“ಇದು ಗಂಭೀರವಾದ ಆರೋಪ ಪ್ರಕರಣವಾಗಿರುವುದರಿಂದ ಕೂಲಂಕಷವಾಗಿ ತನಿಖೆ ಮಾಡುತ್ತೇವೆ. ಸೂರಜ್ ರೇವಣ್ಣ ದಾಖಲಿಸಿರುವ ರಿಟರ್ನ್ ದೂರಿನ ಬಗ್ಗೆ ಸಹ ಪೊಲೀಸರು ತನಿಖೆ ಮಾಡುತ್ತಾರೆ” ಎಂದರು.