ಸ್ವಚ್ಛ ಸರ್ವೇಕ್ಷಣ್ –2023 ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಲ್ಲಿ ಭಾಗವಹಿಸಿದ 446 ನಗರಗಳ ಪೈಕಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಷ್ಟ್ರಮಟ್ಟದಲ್ಲಿ 125ನೇ ರ್‍ಯಾಂಕ್ ಪಡೆದಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಶೇ.25 ರಷ್ಟು ಹೆಚ್ಚು ಅಂಕ ಗಳಿಸಿದೆ.
‘ಸ್ವಚ್ಛ ಸರ್ವೇಕ್ಷಣ್ 2023’ ಪ್ರಶಸ್ತಿ ಪಟ್ಟಿಯನ್ನು ದೆಹಲಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಬಿಡುಗಡೆ ಮಾಡಿದ್ದು, ವಿಜೇತ ನಗರ ಆಡಳಿತಗಳಿಗೆ ಪ್ರಶಸ್ತಿ ನೀಡಿದ್ದಾರೆ. 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 446 ನಗರಗಳ ಪೈಕಿ ಬೆಂಗಳೂರು 125ನೇ ಸ್ಥಾನ ಗಳಿಸಿದೆ.
1 ಲಕ್ಷ ಜನಸಂಖ್ಯೆ ಮೇಲ್ಪಟ್ಟ ನಗರಗಳ ಮಾನದಂಡವನ್ನು 2017ನೇ ಸಾಲಿನಿಂದ 2020ನೇ ಸಾಲಿನ ವರೆಗೆ ಅನ್ವಯಿಸಲಾಗಿರುತ್ತದೆ. 2017ನೇ ಸಾಲಿನಲ್ಲಿ 210ನೇ ಸ್ಥಾನ, 2018ನೇ ಸಾಲಿನಲ್ಲಿ 216ನೇ ಸ್ಥಾನ, 2019ನೇ ಸಾಲಿನಲ್ಲಿ 194ನೇ ಸ್ಥಾನ ಮತ್ತು 2020ನೇ ಸಾಲಿನಲ್ಲಿ 214ನೇ ಸ್ಥಾನ ಪಡೆದಿದ್ದು, ಈ ಬಾರಿ ಬೆಂಗಳೂರು 125ನೇ ಸ್ಥಾನ ಗಳಿಸಿದೆ. ಮಧ್ಯಪ್ರದೇಶದ ಇಂದೋರ್ ಸತತ ಏಳನೇ ಬಾರಿಗೆ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುಜರಾತ್‌ನ ಸೂರತ್ ಕೂಡ ಇದೇ ಮೊದಲ ಬಾರಿಗೆ ಪ್ರಶಸ್ತಿಗೆ ಭಾಜನವಾಗಿದೆ.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆಯೋಜಿಸುವ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯಲ್ಲಿ ತ್ಯಾಜ್ಯ ಸಂಗ್ರಹ, ವಿಂಗಡಣೆ, ಸಂಸ್ಕರಣೆಯಲ್ಲಿ ಬಿಬಿಎಂಪಿ ಪ್ರಗತಿ ಸಾಧಿಸಿದ್ದರೂ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿದೆ. ಮೊದಲನೆಯ ಸ್ಥಾನದಲ್ಲಿ ಮೈಸೂರು ಮಹಾನಗರ ಪಾಲಿಕೆ ಮತ್ತು ಹೊಸದುರ್ಗ ಪುರಸಭೆಗಳಿವೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮತ್ತು ಬೈಲಹೊಂಗಲ ಪುರಸಭೆಯ ಎರಡನೇ ಸ್ಥಾನದಲ್ಲಿವೆ.
ಭಾರತದ ಟಾಪ್ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು ಸ್ಥಾನ ಪಡೆದಿಲ್ಲ. 2022ರಲ್ಲಿ ಮೈಸೂರು ಎಂಟನೇ ಸ್ಥಾನ ಪಡೆದಿತ್ತು. 2020ರಲ್ಲಿ ಮೈಸೂರು 5ನೇ ಸ್ಥಾನದಲ್ಲಿ ಇದ್ದಿದ್ದು, ಈಗ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದೆ.
2022ರಲ್ಲಿ 40 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿರುವ ಸ್ಥಳೀಯ ಸಂಸ್ಥೆಗಳ ವರ್ಗದಲ್ಲಿ 45 ನಗರಗಳ ಪೈಕಿ ಬಿಬಿಎಂಪಿ 43ನೇ ಸ್ಥಾನ ಗಳಿಸಿತ್ತು. 2021ರಲ್ಲಿ 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿರುವ ವರ್ಗದಲ್ಲಿ 48 ನಗರಗಳಲ್ಲಿ 28ನೇ ಸ್ಥಾನ ಗಳಿಸಿತ್ತು. 2023ರಲ್ಲಿ 1 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ವರ್ಗದಲ್ಲಿ 446 ಸ್ಥಳೀಯ ಸಂಸ್ಥೆಗಳಲ್ಲಿ 125ನೇ ಸ್ಥಾನವನ್ನು ಬಿಬಿಎಂಪಿ ಗಳಿಸಿದೆ.
ಬಿಬಿಎಂಪಿ ಪ್ರಥಮ ಬಾರಿಗೆ 2023ರಲ್ಲಿ ನೈರ್ಮಲ್ಯ ವರ್ಗದ ಸಮೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಿದೆ. ‘ಒಡಿಎಫ್++’ನಿಂದ ‘ವಾಟರ್ +’ ನಗರವೆಂಬ ಶ್ರೇಯಾಂಕ ಪಡೆದಿದೆ. ಜನರು ಸ್ವಚ್ಛತೆಯಲ್ಲಿ ಭಾಗವಹಿಸುವ ‘ನಾಗರಿಕರ ಧ್ವನಿ’ ವರ್ಗದಲ್ಲಿ 2022ಕ್ಕಿಂತ ಶೇ 30ರಷ್ಟು ಹೆಚ್ಚು ಅಂಕಗಳನ್ನು ಗಳಿಸಿದೆ.
ಈ ಸುದ್ದಿ ಓದಿದ್ದೀರಾ? ರ್‍ಯಾಂಕ್‌ವಿದ್ಯಾರ್ಥಿಗಳಿಗೆ ‘ಪೋಕ್ಸೋ ಕಾಯ್ದೆ’ ಕುರಿತು ಜಾಗೃತಿ ಮೂಡಿಸಲು ‘ತೆರೆದ ಮನೆ’ ಕಾರ್ಯಕ್ರಮ
2014ರಲ್ಲಿ ಸ್ವಚ್ಛ ಭಾರತ್ ಅಭಿಯಾನ ಪ್ರಾರಂಭವಾಯಿತು. ಅದರ ಒಂದು ಭಾಗವಾಗಿ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ ಆರಂಭವಾಯಿತು. ಈ ಸಮೀಕ್ಷೆ ನಾನಾ ಹಂತಗಳಲ್ಲಿ ನಡೆಯಲಿದೆ. 1 ಲಕ್ಷದಿಂದ 3 ಲಕ್ಷದವರೆಗಿನ ಜನಸಂಖ್ಯೆ ಇರುವ ನಗರಗಳು, 3 ಲಕ್ಷ ಮೇಲ್ಪಟ್ಟು, 10 ಲಕ್ಷದ ಕೆಳಗೆ ಜನಸಂಖ್ಯೆ ಇರುವ ನಗರಗಳು ಮತ್ತು 10 ಲಕ್ಷಕ್ಕೂ ಮೇಲ್ಪಟ್ಟು ಜನರು ಇರುವ ನಗರಗಳು ಎಂಬ ಮೂರು ವಿಭಾಗದಲ್ಲಿ ಸಮೀಕ್ಷೆ ನಡೆಯುತ್ತದೆ.
ದೇಶಾದ್ಯಂತ ಹಳ್ಳಿಗಳು, ನಗರಗಳು, ಪಟ್ಟಣಗಳು, ಪ್ರದೇಶಗಳ ಸ್ವಚ್ಛತೆಯನ್ನು ಸ್ಥಳೀಯ ಆಡಳಿತಗಳು ಎಷ್ಟರ ಮಟ್ಟಿಗೆ ಕಾಪಾಡಿಕೊಂಡಿವೆ ಎಂಬುದನ್ನು ಸಮೀಕ್ಷೆ ಮಾಡಲಾಗುತ್ತದೆ. ಇದು ಜನರನ್ನು ಮತ್ತು ಆಡಳಿತಗಳನ್ನು ಸ್ವಚ್ಛತೆಯೆಡೆಗೆ ಪ್ರೇರೇಪಿಸುವ ಸಮೀಕ್ಷೆಯೂ ಆಗಿದೆ.
125ನೇ ರ್‍ಯಾಂಕ್ ಗಳಿಸಿರುವುದು ಅತ್ಯಂತ ಹೆಮ್ಮೆಯ ವಿಷಯ
ಈ ಬಗ್ಗೆ ಟ್ವೀಟ್ ಮಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, “ಬಿಬಿಎಂಪಿ ಸ್ವಚ್ಛ ಸರ್ವೇಕ್ಷಣಾ-2023 ರ ಹಲವು ಪ್ರಮುಖ ವಿಭಾಗಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ 446 ನಗರಗಳಲ್ಲಿ 125 ನೇ ರ್‍ಯಾಂಕ್ ಗಳಿಸಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಸಾಧನೆಗಾಗಿ ನಮ್ಮ ಬೆಂಗಳೂರಿನ ನಾಗರಿಕರು ಮತ್ತು ಬಿಬಿಎಂಪಿಯ ಅಧಿಕಾರಿಗಳು ಮತ್ತು ಕಾರ್ಮಿಕರು ಎಲ್ಲರೂ ಪ್ರಶಂಸೆಗೆ ಅರ್ಹರು” ಎಂದಿದ್ದಾರೆ.
A matter of great pride that BBMP has performed extremely well in many prominent categories of Swachh Sarvekshan-2023, bagging 125th rank out of 446 cities with a population above 1 lakh.
Our Bengaluru citizens and the officials & workers of BBMP deserve all the accolades for… pic.twitter.com/sCNky2P9ZA
— DK Shivakumar (@DKShivakumar) January 11, 2024
“ಬಿಬಿಎಂಪಿ ಕರ್ನಾಟಕದಲ್ಲಿ 3ನೇ ಸ್ವಚ್ಛ ನಗರವಾಗಿದೆ. ಮೊದಲ ಬಾರಿಗೆ, ವಾಟರ್ ಪ್ಲಸ್ ಪ್ರಮಾಣೀಕರಣವನ್ನು ಪಡೆಯುವುದರ ಜೊತೆಗೆ ನೈರ್ಮಲ್ಯ ಸಮೀಕ್ಷೆಯಲ್ಲಿ ಬೆಂಗಳೂರಿಗೆ ಅಗ್ರಸ್ಥಾನವನ್ನು ನೀಡಲಾಗಿದೆ. ತನ್ನ ಅತ್ಯುತ್ತಮ ಕಾರ್ಯವನ್ನು ಮುಂದುವರೆಸುತ್ತಾ, ಬಿಬಿಎಂಪಿ ಸೇವಾ ಮಟ್ಟದ ಪ್ರಗತಿ ಮತ್ತು ನಾಗರಿಕರ ಧ್ವನಿ ವಿಭಾಗಗಳ ಅಡಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಉತ್ತಮ ಆಡಳಿತಕ್ಕಾಗಿ ಹೊಸ ಮಾನದಂಡ ಸ್ಥಾಪಿಸಿದೆ. ಈ ಸುವರ್ಣ ಓಟ ಮುಂದುವರಿಯಲಿ ಮತ್ತು ಮುಂಬರುವ ವರ್ಷಗಳಲ್ಲಿ ಆಡಳಿತ ಮತ್ತು ಸಾರ್ವಜನಿಕ ಸೇವೆಗೆ ಹೊಸ ಮಾನದಂಡಗಳನ್ನು ಹೊಂದಿಸಲಿ” ಎಂದು ಹೇಳಿದ್ದಾರೆ.