ಫುಡ್ ಡೆಲಿವರಿ ಆ್ಯಪ್ ಬಳಸಿ ಕಳೆದ ವರ್ಷ ಆರ್ಡರ್ ಮಾಡಿದ್ದ ಐಸ್ ಕ್ರೀಂ ಅನ್ನು ಗ್ರಾಹಕರಿಗೆ ಡೆಲಿವರಿ ಮಾಡದ ಸ್ವಿಗ್ಗಿಗೆ ₹5,000 ದಂಡ ವಿಧಿಸಿ ಬೆಂಗಳೂರಿನ ಗ್ರಾಹಕ ನ್ಯಾಯಾಲಯ ಆದೇಶಿಸಿದೆ ಎಂದು ‘ಬಾರ್ ಆಂಡ್ ಬೆಂಚ್’ ವರದಿ ಮಾಡಿದೆ.
2023ರ ಜನವರಿ 26 ರಂದು ಗ್ರಾಹಕರೊಬ್ಬರು ಬೆಂಗಳೂರಿನ ಕ್ರೀಮ್ ಸ್ಟೋನ್ ಐಸ್ ಕ್ರೀಮ್‌ನಿಂದ ಸ್ವಿಗ್ಗಿ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ‘ನಟ್ಟಿ ಡೆತ್ ಬೈ ಚಾಕೊಲೇಟ್’ (Nutty Death by Chocolate) ಎಂಬ ಐಸ್ ಕ್ರೀಮ್ ಅನ್ನು ಆರ್ಡರ್ ಮಾಡಿದ್ದರು. ಆದರೆ, ಐಸ್ ಕ್ರೀಂ ಅನ್ನು ಗ್ರಾಹಕರಿಗೆ ತಲುಪಿಸಿಲ್ಲ.
ಐಸ್ ಕ್ರೀಂ ಅನ್ನು ಡೆಲಿವರಿ ಮಾಡದಿದ್ದರೂ, ಡೆಲಿವರಿ ಏಜೆಂಟ್ ಡೆಲಿವರಿ ಮಾಡುವ ವಸ್ತುವನ್ನು ತೆಗೆದುಕೊಂಡ ನಂತರ ಸ್ವಿಗ್ಗಿ ಆ್ಯಪ್‌ನಲ್ಲಿ ಸ್ಟೇಟಸ್ ಅನ್ನು ‘ಡೆಲಿವರಿ ಮಾಡಲಾಗಿದೆ’ ಎಂದು ತೋರಿಸಲಾಗಿದೆ.
ಈ ಬಗ್ಗೆ ಗ್ರಾಹಕರು ಸ್ವಿಗ್ಗಿಗೆ ಕರೆ ಮಾಡಿ ಹಣ ಪಾವತಿ ಮಾಡುವಂತೆ ಹೇಳಿದ್ದಾರೆ. ಆದರೆ, ಮರುಪಾವತಿ ಮೊತ್ತವನ್ನು ಸ್ವಿಗ್ಗಿ ಪಾವತಿಸದ ಕಾರಣ ಗ್ರಾಹಕರು ಪರಿಹಾರಕ್ಕಾಗಿ ನಗರದ ಗ್ರಾಹಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
“ಆರ್ಡರ್ ಮಾಡಿದ ಉತ್ಪನ್ನವನ್ನು ತಲುಪಿಸದೇ, ಗ್ರಾಹಕರು ಪಾವತಿಸಿದ ಮೊತ್ತವನ್ನು ಸ್ವಿಗ್ಗಿ ಹಿಂತಿರುಗಿಸಿಲ್ಲ. ಇದು ಸ್ವಿಗ್ಗಿಯ ಸೇವಾ ಕೊರತೆ ಎಂದು ದೂರುದಾರರು ಸಾಬೀತುಪಡಿಸಿದ್ದಾರೆ. ಇದನ್ನು ನಾವು ಪರಿಗಣಿಸುತ್ತೇವೆ. ಇದು ಸೇವೆಯ ಕೊರತೆ ಮತ್ತು ಅನ್ಯಾಯದ ವ್ಯಾಪಾರದ ಅಭ್ಯಾಸಕ್ಕೆ ಸಮನಾಗಿದೆ” ಎಂದು ಗ್ರಾಹಕರ ವೇದಿಕೆ ಹೇಳಿದೆ.
ಬೆಂಗಳೂರು ನಗರ II ಹೆಚ್ಚುವರಿ ಜಿಲ್ಲಾ ಗ್ರಾಹಕ ಪರಿಹಾರ ಆಯೋಗ, ಐಸ್ ಕ್ರೀಮ್ ಅನ್ನು ಆರ್ಡರ್ ಮಾಡುವಾಗ ಗ್ರಾಹಕರು ಪಾವತಿಸಿದ ₹187 ಮರುಪಾವತಿಸುವಂತೆ ಸ್ವಿಗ್ಗಿಗೆ ತಿಳಿಸಿದೆ.
ಸ್ವಿಗ್ಗಿ ತನ್ನ ಡೆಲಿವರಿ ಏಜೆಂಟ್ ಮಾಡಿದ ಯಾವುದೇ ರೀತಿಯ ತಪ್ಪಿಗೆ ಜವಾಬ್ದಾರನಾಗಿರುವುದಿಲ್ಲ ಎಂದು ಹೇಳಿದೆ ವಿಶೇಷವಾಗಿ ಅಪ್ಲಿಕೇಶನ್‌ನಲ್ಲಿ ಡೆಲಿವರಿ ಎಂದು ಗುರುತಿಸಿದ ನಂತರ ಆರ್ಡರ್ ಅನ್ನು ಡೆಲಿವರಿ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವ ಸ್ಥಿತಿಯಲ್ಲಿಲ್ಲ ಎಂದು ಸಮರ್ಥಿಸಿಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಾರುಗಳ ನಡುವೆ ಢಿಕ್ಕಿ ಯುವತಿ ಸಜೀವ ದಹನ; ಗಾಯಗೊಂಡಿದ್ದ ಮೂವರು ಸಾವು
ಪ್ರಕರಣದ ವಿಚಾರಣೆ ವೇಳೆ, ಅಧ್ಯಕ್ಷ ವಿಜಯಕುಮಾರ್ ಎಂ ಪಾವಲೆ, ವಿ ಅನುರಾಧ ಮತ್ತು ರೇಣುಕಾದೇವಿ ದೇಶಪಾಂಡೆ ಅವರನ್ನೊಳಗೊಂಡ ಪೀಠವು ಮರುಪಾವತಿಗಾಗಿ ಗ್ರಾಹಕರು ನೀಡಿದ ಕಾನೂನು ನೋಟಿಸ್‌ಗೆ ಪ್ರತಿಕ್ರಿಯಿಸಲು ಸ್ವಿಗ್ಗಿ ವಿಫಲವಾಗಿದೆ ಎಂದು ಹೇಳಿದರು.
ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಸ್ವಿಗ್ಗಿಯ ವಾದವನ್ನು ಗ್ರಾಹಕ ನ್ಯಾಯಾಲಯವು ತಿರಸ್ಕರಿಸಿದೆ. ಈ ವಿನಾಯಿತಿಯು ಮಾಹಿತಿಯ ಪ್ರಸಾರಕ್ಕೆ ಸೀಮಿತವಾಗಿದೆ. ಇದು ಸರಕು ಮತ್ತು ಸೇವೆಗಳ ಮಾರಾಟಕ್ಕೆ ಅನ್ವಯಿಸುವುದಿಲ್ಲ ಎಂದು ಪೀಠವು ಹೇಳಿದೆ.
ಸೇವೆಯ ಕೊರತೆ ಮತ್ತು ಅನ್ಯಾಯದ ವ್ಯಾಪಾರ ಅಭ್ಯಾಸಗಳಿಗಾಗಿ ಸ್ವಿಗ್ಗಿ ವಿರುದ್ಧದ ಆರೋಪಗಳು ಸಾಬೀತಾಗಿದೆ ಎಂದು ಗ್ರಾಹಕ ನ್ಯಾಯಾಲಯವು ತೀರ್ಮಾನಿಸಿದೆ.
ಗ್ರಾಹಕರು ಪರಿಹಾರವಾಗಿ ₹ 10,000 ಮತ್ತು ವ್ಯಾಜ್ಯ ವೆಚ್ಚವಾಗಿ ₹ 7,500 ಪರಿಹಾರ ನೀಡುವಂತೆ ಮನವಿ ಮಾಡಿದ್ದರು. ಆದರೆ, ಗ್ರಾಹಕ ನ್ಯಾಯಾಲಯ ಗ್ರಾಹಕರಿಗೆ ₹187, ಪರಿಹಾರವಾಗಿ ₹3,000 ಮತ್ತು ₹2,000 ಹಣವನ್ನು ವ್ಯಾಜ್ಯ ಶುಲ್ಕವಾಗಿ ಮರುಪಾವತಿ ಮಾಡುವಂತೆ ಸ್ವಿಗ್ಗಿಗೆ ಆದೇಶಿಸಿದೆ.