- ಕೆಎಟಿ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್
- 1996-97ರಲ್ಲಿ ಆಯುಕ್ತರಾಗಿದ್ದ ರಾಮಪ್ಪ ಮೇಲೆ ಕೇಳಿಬಂದಿದ್ದ ಆರೋಪ
ಜಿಲ್ಲಾಧಿಕಾರಿಗಳ ಅನುಮತಿ ಪಡೆಯದೆ ಹಾಗೂ ಟೆಂಡರ್ ಪ್ರಕ್ರಿಯೆ ನಡೆಸದೆ ಕಾಮಗಾರಿ ನಡೆಸಿ ಸರ್ಕಾರದ ಬೊಕ್ಕಸಕ್ಕೆ 29 ಲಕ್ಷ ರೂಪಾಯಿ ನಷ್ಟ ಉಂಟು ಮಾಡಿದ್ದ ಪ್ರಕರಣವೊಂದನ್ನು 28 ವರ್ಷ ಕಳೆದರೂ ಪೂರ್ಣಗೊಳಿಸದ ಸರ್ಕಾರದ ನಡೆ ಬಗ್ಗೆ ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ.
1996-1997ರ ಅವಧಿಯಲ್ಲಿ ಬೆಂಗಳೂರಿನ ಕೆ.ಆರ್ ಪುರ ಪುರಸಭೆ ಆಯುಕ್ತರಾಗಿದ್ದ ರಾಮಪ್ಪ ಎಂಬುವವರು ಟೆಂಡರ್ ಕರೆಯದೆ ಕೆಲವು ಕಾಮಗಾರಿಗಳನ್ನು ನೀಡಿ, ಬಿಲ್ ಪಾವತಿಸಿದ್ದರು. ಹೀಗೆ ಮಾಡುವ ಮೂಲಕ ಆಯುಕ್ತ ರಾಮಪ್ಪ ಸರ್ಕಾರದ ಬೊಕ್ಕಸಕ್ಕೆ 29 ಲಕ್ಷ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪದ ಮೇಲೆ ನಗರಾಭಿವೃದ್ಧಿ ಇಲಾಖೆಯು 2006ರ ನ.10ರಂದು ವಿಚಾರಣೆಗೆ ಆದೇಶಿಸಿತ್ತು.
ಈ ವೇಳೆಗೆ ರಾಮಪ್ಪ ದೊಡ್ಡಬಳ್ಳಾಪುರ ಪುರಸಭೆಯ ಆಯುಕ್ತರಾಗಿ ವಗಾರ್ವಣೆಗೊಂಡಿದ್ದರು. ಹೀಗಾಗಿ, ಅಲ್ಲಿಂದಲೇ ನೋಟೀಸ್ಗೆ ಪ್ರತಿಕ್ರಿಯಿಸಬೇಕು ಎಂದು ಸರ್ಕಾರ ಸೂಚಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಆಯುಕ್ತರು ತಮ್ಮ ಮೇಲಿದ್ದ ಎಲ್ಲ ಆರೋಪಗಳನ್ನು ನಿರಾಕರಿಸಿದ್ದರು.
ಪ್ರಕರಣದ ವಿಚಾರಣೆ ನಡೆಯುವ ವೇಳೆ 2010 ಮೇ 31ರಂದು ರಾಮಪ್ಪ ತಮ್ಮ ಸೇವೆಯಿಂದ ನಿವೃತ್ತರಾಗಿದ್ದರು. ಅಷ್ಟೊತ್ತಿಗಾಗಲೇ ಪ್ರಕರಣ ನಡೆದು 14 ವರ್ಷಗಳಾಗಿದ್ದವು ಈ ಹಂತದಲ್ಲಿ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಪ್ರಕರಣದ ವಿಚಾರಣೆ ನಡೆಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ವಿಚಾರಣಾ ಅಧಿಕಾರಿಯಾಗಿ ನೇಮಿಸಿದ್ದರು.
ಪ್ರಕರಣ ಕೈಗೆತ್ತಿಕೊಂಡಿದ್ದ ನಿವೃತ್ತ ನ್ಯಾಯಾಧೀಶರು ಯಾವುದೇ ವಿಚಾರಣೆ, ಸಭೆ ನಡೆಸಿರಲಿಲ್ಲ. ಆದ್ದರಿಂದ 2019ರಲ್ಲಿ ಮತ್ತೊಬ್ಬ ವಿಚಾರಣಾಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ನಿವೃತ್ತ ಆಯುಕ್ತ ರಾಮಪ್ಪ ‘ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ’ (ಕೆಎಟಿ) ಮೊರೆ ಹೋಗಿದ್ದರು.
ಕೆಎಟಿಯು ಇಲಾಖಾ ವಿಚಾರಣೆಯನ್ನೇ ರದ್ದುಪಡಿಸಿತ್ತು. ಈ ವೇಳೆ ಸರ್ಕಾರವು ಹೈಕೋರ್ಟ್ಗೆ ತನ್ನ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿತ್ತು. ಹೈಕೋರ್ಟ್ ನ್ಯಾಯಮೂರ್ತಿ ಜಿ ನರೇಂದರ್ ನೇತೃತ್ವದ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತ್ತು. ಅಲ್ಲದೆ, ಸರ್ಕಾರದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಪೀಠವು ಕಿಡಿಕಾರಿದೆ. ಕೆಎಟಿ ಆದೇಶ ಪುರಸ್ಕರಿಸಿ ಸರ್ಕಾರದ ಮೇಲ್ಮನವಿ ವಜಾಗೊಳಿಸಿ ಪೀಠವು ಆದೇಶಿಸಿದೆ.
ಈ ಸುದ್ದಿ ಓದಿದ್ದೀರಾ? : ಮಾಸ್ತಿಗುಡಿ ಸಿನಿಮಾ ಪ್ರಕರಣ: ಸೇಫ್ಟಿ ಜಾಕೆಟ್ ಧರಿಸದಿರುವುದೇ ನಟರ ಸಾವಿಗೆ ಕಾರಣ
“ರಾಮಪ್ಪನವರ ಮೇಲೆ ಕೇಳಿ ಬಂದಿದ್ದ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಅವರು ಸೇವೆಯಿಂದ ನಿವೃತ್ತಿಗೊಂಡು 13 ವರ್ಷ ಕಳೆದ ನಂತರವೂ ನಗರಾಭಿವೃದ್ಧಿ ಇಲಾಖೆಯು ಅವರ ಮೇಲೆ ತನಿಖೆ ನಡೆಸಲು ಅಧಿಕಾರಿಗಳನ್ನು ನೇಮಿಸಿದೆ. ಆದರೆ, ಈ ಅಧಿಕಾರಿಗಳು ಇದುವರೆಗೂ ವಿಚಾರಣೆ ನಡೆಸಲು ಒಂದು ಸಭೆಯನ್ನೂ ನಡೆಸಿಲ್ಲ. ಈಗ ಮತ್ತೊಮ್ಮೆ ವಿಚಾರಣೆ ನಡೆಸಲು ಇನ್ನೋರ್ವ ಅಧಿಕಾರಿಯನ್ನು ನೇಮಿಸಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.
“ಈಗ ಈ ವಿಚಾರಣೆಯನ್ನು ಇಲಾಖೆಯು ಪೂರ್ಣಗೊಳಿಸಲು ಇನ್ನಷ್ಟು ವಿಳಂಬವಾಗುತ್ತದೆ. ಇದು ನ್ಯಾಯಸಮ್ಮತವಲ್ಲ. ಆದ್ದರಿಂದ ಅವರ ಮೇಲಿನ ಪ್ರಕರಣದ ಸುದೀರ್ಘ ವಿಳಂಬ ಪರಿಗಣಿಸಿರುವ ಕೆಎಟಿ ಕ್ರಮ ನ್ಯಾಯಸಮ್ಮತವಾಗಿದೆ. ಈ ತೀರ್ಮಾನಕ್ಕೆ ಮಧ್ಯಪ್ರವೇಶ ಮಾಡಲು ಮತ್ತು ಸರ್ಕಾರದ ಮೇಲ್ಮನವಿ ಪುರಸ್ಕರಿಸಲು ಯಾವುದೇ ಸಕಾರಣ ಕಂಡುಬರುತ್ತಿಲ್ಲ” ಎಂದು ಆದೇಶ ಹೊರಡಿಸಿದೆ.