“2011ರ ಜನಗಣತಿ ಪ್ರಕಾರ ಭಾರತದಲ್ಲಿ 19,569 ಮಾತೃಭಾಷೆಗಳಿವೆ. ಈ ಪೈಕಿ, ಸಂವಿಧಾನದಲ್ಲಿ 22 ಭಾಷೆಗಳನ್ನು ಅಧಿಕೃತಗೊಳಿಸಲಾಗಿದೆ. 10 ವರ್ಷಕ್ಕೊಮ್ಮೆ ನಡೆಯುವ ಜನಗಣತಿ, 2021ರಲ್ಲಿ ನಡೆಯಬೇಕಿತ್ತು. ಅದರೆ, ಕೊರೋನಾದಿಂದ ನಡೆಯಲಿಲ್ಲ. ಈಗ ಲೋಕಸಭಾ ಚುನಾವಣೆಯ ಕಾರಣದಿಂದಾಗಿ ಜನಗಣತಿ ಮತ್ತೆ ಮುಂದೆ ಹೋಗಬಹುದು” ಎಂದು ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಹೇಳಿದರು.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನಡೆದ ಎರಡನೇ ಭಾರತೀಯ ಗ್ರಂಥಾಲಯ ಅಧಿವೇಶನ ಆಯೋಜಿಸಿದ್ದ ‘ಗ್ರಂಥಾಲಯ ಚಳುವಳಿಗಾಗಿ ಅಖಿಲ ಭಾರತ ಅಧಿವೇಶನ’ ವಿಚಾರಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಯುನೆಸ್ಕೋ ಪ್ರಕಾರ ಈಗಾಗಲೇ 172 ಭಾಷೆಗಳು ಪತನಗೊಂಡಿವೆ. ರಾಜ್ಯದಲ್ಲಿ ಕೊಡವ ಭಾಷೆ ಮಾತನಾಡುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಅಂಡಮಾನ್‌ನಲ್ಲಿ ‘ಸೆರ’ ಎಂಬ ಭಾಷೆ ಕಣ್ಮರೆಯಾಗಿದೆ” ಎಂದು ತಿಳಿಸಿದರು.
“ಒಂದು ಬದಿಯ ಭಾಷೆಯು ಎಲ್ಲ ಭಾಷೆಗಳ ಮೇಲೆ ನಿಯಂತ್ರಣ ಸಾಧಿಸಿದಾಗ, ಜ್ಞಾನ ಸಂಪತ್ತಿಗೆ ಕೊರತೆಯಾಗುತ್ತದೆ. ಜಾಮಿಯಾ ವಿವಿ ಮತ್ತು ಜೆಎನ್‌ಯು ಗ್ರಂಥಾಲಯದಲ್ಲಿ ಮಡಿ, ಮೈಲಿಗೆ ಸೇರಿದಂತೆ ಎಲ್ಲ ವಿವರಗಳಿವೆ. ದಲಿತ ಸಮುದಾಯದ ಸಂಪ್ರದಾಯಗಳ ಬಗ್ಗೆ ತಿಳಿಯಬೇಕೆಂದರೆ ಅಲ್ಲಿಗೇ ಹೋಗಬೇಕು. ನಮ್ಮ ಪರಂಪರೆಯ ತಿಳುವಳಿಕೆಗಳು ನಮ್ಮ ಜ್ಞಾನಕ್ಕೆ ತೊಡಕಾಗುತ್ತಿವೆ. ಕರ್ನಾಟಕದಲ್ಲಿ ಸಂಶೋಧನೆ ಮಾಡುವವರ ಸಂಖ್ಯೆ 0.008% ಇದೆ” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ಗ್ರಂಥಾಲಯದ ರಮೇಶ್, “ತಕ್ಷಶಿಲಾ, ನಳಂದಾ ವಿಶ್ವವಿದ್ಯಾಲಯಗಳಲ್ಲಿ ಗ್ರಂಥಾಲಯಗಳು ಯಾವ ರೀತಿ ಎಂಬುದಕ್ಕೆ ಉದಾಹರಣೆಯಾಗಿವೆ. ಮೂರು ಅಂತಸ್ತಿನ ಈ ಕಟ್ಟಡದಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಗ್ರಂಥಾಲಯ ದಾರಿದೀಪವಾಗಿದೆ. ಈ ಗ್ರಂಥಾಲಯದಲ್ಲಿ ಸಾಂಸ್ಕ್ರತಿಕ, ಶಿಕ್ಷಣ, ಕಲೆ, ಶಿಕ್ಷಣ ಸೇರಿದಂತೆ ಎಲ್ಲಕ್ಕೂ ದಾರಿದೀಪವಾಗಿದೆ” ಎಂದರು.
“ಬ್ರಿಟಿಷರು, ರಾಜಾರಾಮ ಮೋಹನ್‌ರಾಯ್ ಅವರು ಸೇರಿದಂತೆ ಅನೇಕರು ಮೊದಲ ಗ್ರಂಥಾಲಯ ಚಳುವಳಿಯಲ್ಲಿ ತೊಡಗಿದ್ದರು. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಚಳುವಳಿಗಳು ಹೆಚ್ಚಳವಾಗುತ್ತವೆ. ಗ್ರಂಥಾಲಯ ಪಿತಾಮಹ ಎಸ್ ಆರ್ ರಂಗನಾಥ್ ಅವರು ಎತ್ತಿನಗಾಡಿಯಲ್ಲಿ ಬುಕ್‌ಗಳನ್ನು ತೆಗೆದುಕೊಂಡು ಓದುವವರಿಗೆ ಕೊಡಲು ಆರಂಭ ಮಾಡಿದರು” ಎಂದು ಮೆಲುಕು ಹಾಕಿದರು.
“ಸದ್ಯ ಈಗಿನ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೆ ಬರೋಬ್ಬರಿ 3 ಗಂಟೆ 45 ನಿಮಿಷ ಕಳೆಯುತ್ತಾರೆ. ಮಕ್ಕಳು ಅದೇ ಸಮಯವನ್ನು ಬಳಸಿಕೊಂಡು ಓದುವುದಕ್ಕೆ ಬಳಸಿಕೊಂಡರೆ ಒಳ್ಳೆಯದು. ಮಕ್ಕಳಲ್ಲಿ ಟೈಮ್‌ಪಾಸ್ ಮನೋಭಾವನೆ ಹೋಗಬೇಕು. ಅಲ್ಲದೇ, ಪ್ರತಿಯೊಂದು ಶಾಲೆಗಳಲ್ಲಿ ಗ್ರಂಥಾಲಯ ತೆರೆಯಬೇಕು. ಖಾಸಗಿ, ಸರ್ಕಾರಿ ಸೇರಿದಂತ ಪ್ರತಿಯೊಂದು ಶಾಲೆಗಳಲ್ಲಿ ಗ್ರಂಥಾಲಯ ತೆರೆಯುವುದು ಕಡ್ಡಾಯವಾಗಬೇಕು” ಎಂದರು.
“ಶಾಲೆಯನ್ನು ಮಂಜೂರು ಮಾಡುವಾಗಲೇ, ಗ್ರಂಥಾಲಯವನ್ನು ಕೂಡ ಮಂಜೂರು ಮಾಡಬೇಕು. ಜತೆಗೆ ಮಕ್ಕಳಲ್ಲಿ ಓದುವ ಜ್ಞಾನ ಬೆಳೆಸಬೇಕು. ಮೊಬೈಲ್‌ನಲ್ಲಿ ಗೇಮ್ ಆಡುವ ಹುಚ್ಚನ್ನು ಬಿಡಿಸಬೇಕು. ಈಗ ಪರೀಕ್ಷೆಗಳಿಗಾಗಿ ಮಾತ್ರ ಓದುವುದಾಗಿದೆ. ಓದುವ ಸಂಸ್ಕ್ರತಿಯನ್ನು ನಮ್ಮ ಮನೆಯಿಂದಲೇ ಆರಂಭಿಸಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೆಸಿ ವ್ಯಾಲಿ-ಎಚ್‌ಎನ್ ವ್ಯಾಲಿ ನೀರಿನ 3ನೇ ಹಂತದ ಸಂಸ್ಕರಣೆಗೆ ಆಗ್ರಹ; ಮಧ್ಯಸ್ಥಿಕೆಗೆ ರಾಜ್ಯಪಾಲರಿಗೆ ಮನವಿ
ಗ್ರಂಥಾಲಯ ಮತ್ತು ಸಂಶೋಧನೆ ಒಂದು ನಾಣ್ಯದ ಎರಡು ಮುಖಗಳು
ತುಮಕೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಸಂಪತ್ ಕುಮಾರ್ ಬಿ ಟಿ ಮಾತನಾಡಿ, “ಗ್ರಂಥಾಲಯಗಳು ಜ್ಞಾನದ ಪ್ರತೀಕ. ಕೇವಲ ಪುಸ್ತಕಗಳನ್ನು ಶೇಖರಣೆ ಮಾಡಿ ಇಡುವ ಗೋಡೆಗಳಲ್ಲ. ಬದಲಾಗಿ ಜ್ಞಾನದ ಅಭಿವೃದ್ಧಿ ಮಾಡುವುದು. ನಮಗೆ ಬೇಕಾದ ಗ್ರಂಥವನ್ನು ಗ್ರಂಥಾಲಯದಲ್ಲಿಯೇ ಹುಡುಕಿ ಅಲ್ಲೇ ಓದುವುದು ಅಥವಾ ಆ ಪುಸ್ತಕವನ್ನು ಮನೆಗೆ ತೆಗೆದುಕೊಂಡು ಬಂದು ಓದುವ ಪ್ರಕ್ರಿಯೆ ಬಂತು. ಈ ಹಿಂದೆ ಪಿಕ್ ಆಂಡ್ ರೀಡ್ ಇತ್ತು. ಇದೀಗ ಕ್ಲಿಕ್ ಆಂಡ್ ರೀಡ್ ಆಗಿದೆ. ಈಗ ಮನೆಯಲ್ಲಿಯೇ ಮೊಬೈಲ್‌ನಲ್ಲಿ ಕ್ಲಿಕ್ ಮಾಡಿ ಓದಬಹುದು. ಇದು ಗ್ರಂಥಾಲಯದ ರೂಪಾಂತರ” ಎಂದರು.
“ಗ್ರಂಥಾಲಯ ಮತ್ತು ಸಂಶೋಧನೆಯು ತಾಯಿ ಹಾಗೂ ಮಕ್ಕಳ ಸಂಬಂಧ ಇದ್ದಂತೆ. ಸಂಶೋಧಕ ಸಂಶೋಧನೆ ಮಾಡಲೇಬೇಕು ಎಂದು ಗ್ರಂಥಾಲಯದ ಪುಸ್ತಕಕಗಳನ್ನು ಓದಲೇಬೇಕು. ಇದೀಗ ಗೂಗಲ್ ಕೂಡ ಮಾಹಿತಿ ಕೊಡುತ್ತದೆ. ಆದರೆ, ಮೌಲ್ಯಮಾಪನ ಹೊಂದಿರುವುದಿಲ್ಲ. ಅದೇ, ಗ್ರಂಥಾಲಯ ಮೌಲ್ಯಮಾಪನ ಮಾಡಲು ಮಾಹಿತಿ ಒದಗಿಸುತ್ತದೆ. ಇದು ಗ್ರಂಥಾಲಯದ ಸೌಂದರ್ಯ. ಇದೀಗ ಎಲ್ಲದಕ್ಕೂ ವಿಕಿಪೀಡಿಯಾ ಎಂದು ಸರ್ಚ್ ಮಾಡುತ್ತೇವೆ. ಆದರೆ, ವಿಕಿಪೀಡಿಯಾದಲ್ಲಿ ಸುಮಾರು ತಪ್ಪು ಮಾಹಿತಿಗಳು ಸಿಗುತ್ತವೆ. ಹಾಗಾಗಿ, ವಿಕಿಪೀಡಿಯಾ ಬಳಕೆ ಅಷ್ಟು ಒಳ್ಳೆಯದಲ್ಲ” ಎಂದು ಸಲಹೆ ನೀಡಿದರು.
“ಗ್ರಂಥಾಲಯಕ್ಕೆ ಹೋದಾಗ ಅನೇಕ ಮಾಹಿತಿಗಳು ಸಿಗುತ್ತವೆ. ಗ್ರಂಥಾಲಯವು ಕಲಿಕೆಗೆ ಒಳ್ಳೆಯ ವೇದಿಕೆ. ಸಂಶೋಧಕ ಸಂಶೋಧನೆ ಮಾಡಬೇಕು ಎಂದರೆ, ಗ್ರಂಥಾಲಯದ ಪಾತ್ರ ಬಹುಮುಖ್ಯವಾಗಿದೆ. ಗ್ರಂಥಾಲಯ ಮತ್ತು ಸಂಶೋಧನೆ ಒಂದು ನಾಣ್ಯದ ಎರಡು ಮುಖಗಳು. ಗ್ರಂಥಾಲಯವು ಕ್ಯಾಂಪಸ್‌ನ ಐಕಾನ್ ಆಗಿದೆ”ಎಂದರು.
ಚಿಕ್ಕಮಗಳೂರಿನ ಕುವೆಂಪು ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಕೆ.ಸಿ.ಶಂಕರ್ ಅವರು ಮಾತನಾಡಿದರು.