ಹುಲಿ ಉಗುರು ಧರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ವರ್ತೂರು ಸಂತೋಷ್ ಅವರನ್ನು 14 ದಿನ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಸದ್ಯ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಅಡಿ ತನಿಖೆ ಚುರುಕುಗೊಂಡಿದ್ದು, ಎಫ್‌ಎಸ್‌ಎಲ್ ವರದಿಯಲ್ಲಿ ಅವರು ಧರಿಸಿದ್ದ ಉಗುರು ಹುಲಿಯದ್ದೆ ಎಂಬುವುದು ಸಾಬೀತಾದರೆ ಸಂತೋಷ್ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ತನಿಖಾಧಿಕಾರಿ ಸುರೇಶ್ ಅವರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ವರ್ತೂರು ಸಂತೋಷ್ ಅವರು ಧರಿಸಿದ ಹುಲಿ ಉಗುರು ನಿಜವಾದದ್ದಾ? ಎಷ್ಟು ವರ್ಷದ ಹುಲಿ ಉಗುರು? ಅದು ಯಾವ ಜಾತಿಯ ಹುಲಿ? ಸೇರಿದಂತೆ ಇನ್ನು ಹಲವು ಮಾಹಿತಿ ಎಫ್‌ಎಸ್‌ಎಲ್ ವರದಿಯ ಮೂಲಕ ತಿಳಿದುಬರಬೇಕಿದೆ.
ಅದು ನಿಜವಾದ ಹುಲಿ ಉಗುರು ಎಂಬುದು ಸಾಬೀತಾದರೆ, ಹುಲಿ ಉಗುರನ್ನು ಸಂತೋಷ್‌ಗೆ ನೀಡಿದ್ದು ಯಾರು? ಅವರಿಗೆ ಯಾರು ಮಾರಿದರು? ಇದರ ಮೂಲ ಎಲ್ಲಿ? ಸೇರಿದಂತೆ ಇನ್ನು ಹಲವು ಮಾಹಿತಿಗಳನ್ನು ಕಗ್ಗಲಿಪುರ ಅರಣ್ಯಾಧಿಕಾರಿಗಳು ಕಲೆಹಾಕುತ್ತಿದ್ದಾರೆ.
ಎಫ್‌ಎಸ್‌ಎಲ್ ವರದಿ ಮತ್ತು ಕಗ್ಗಲಿಪುರ ಅರಣ್ಯಾಧಿಕಾರಿಗಳು ನಡೆಸಿದ ತನಿಖೆಯ ವರದಿಯನ್ನು ಕೇಂದ್ರ ಮತ್ತು ರಾಜ್ಯ ಹುಲಿ ಸಂರಕ್ಷಣಾ ಪ್ರಾಧಿಕಾರಗಳಿಗೆ ನೀಡಲಿದ್ದಾರೆ.
ಕೇಂದ್ರ ಮತ್ತು ರಾಜ್ಯ ಹುಲಿ ಸಂರಕ್ಷಣಾ ಪ್ರಾಧಿಕಾರ ಈ ವರದಿಗಳನ್ನು ಆಧರಿಸಿ, ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳ ದತ್ತಾಂಶವನ್ನು ಪರಿಶೀಲನೆ ಮಾಡಲಿದ್ದಾರೆ.
ಕರ್ನಾಟಕದ ನಾಗರಹೊಳೆ, ಭದ್ರಾ, ಕಾಳಿ ದಾಂಡೇಲಿಯ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳು, ತಮಿಳುನಾಡಿನ ಅಣ್ಣಾಮಲೈ, ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಐದು ವರ್ಷಗಳ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಐದು ವರ್ಷಗಳಲ್ಲಿ ಹುಲಿಗಳನ್ನ ಬೇಟೆಯಾಡಿರುವುದು, ಮೃತ ದೇಹಗಳ ಪತ್ತೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ.
ಜಾಮೀನು ಅರ್ಜಿ ವಿಚಾರಣೆ
ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅ.25ರಂದು 2ನೇ ಎಸಿಜೆಎಂ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ವರ್ತೂರ್ ಸಂತೋಷ್ ಹುಲಿ ಉಗುರು ಧರಿಸಿದ್ದಕ್ಕೆ ಬಂಧಿಸಲಾಗಿದೆ. ಬಿಗ್ ಬಾಸ್ ಮನೆಯೊಳಗೆ ಹೋದ 15 ದಿನಕ್ಕೆ ಸಂತೋಷ್‌ರನ್ನು ಅರಣ್ಯಾಧಿಕಾರಿಗಳು ಬಂಧಿಸಿ ಕರೆತಂದಿದ್ದರು. ಭಾನುವಾರ ಸಂಜೆ ಬಿಗ್ ಬಾಸ್ ಮನೆಗೆ ಹೋಗಿ, ಸಂತೋಷ್‌ರನ್ನು ವಶಕ್ಕೆ ಪಡೆಯಲಾಗಿತ್ತು. ನಂತರ ವಿಚಾರಣೆ ನಡೆಸಿ, ಬಂಧಿಸಲಾಗಿತ್ತು.
ಸೋಮವಾರ (ಅ.23) ಕೋರಮಂಗಲದ ಜಡ್ಜ್ ನಿವಾಸದಲ್ಲಿ ಸಂತೋಷ್‌ರನ್ನು ಅರಣ್ಯಾಧಿಕಾರಿಗಳು ಹಾಜರುಪಡಿಸಿದ್ದರು. ಆ ನಂತರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಆದೇಶ ನೀಡಲಾಗಿತ್ತು. ಇದೀಗ ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿರುವ ಸಂತೋಷ್‌ಗೆ ವಿಚಾರಣಾಧೀನ ಕೈದಿ ಸಂಖ್ಯೆ 10935 ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಉದ್ಯಮಿ ಅಪಹರಿಸಿ ₹50 ಲಕ್ಷಕ್ಕೆ ಬೇಡಿಕೆ; ನಾಲ್ವರ ಬಂಧನ
ಸೆಲೆಬ್ರೆಟಿಗಳಿಗೂ ಬಂದ ಹುಲಿ ಉಗುರು ಸಂಕಷ್ಟ
ವರ್ತೂರು ಸಂತೋಷ್ ಬಂಧನವಾದ ಬೆನ್ನಲ್ಲೆ, ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಹಲವು ನಟರು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ.
ಸೆಲಬ್ರೆಟಿಗಳು ಟಿವಿ ಸಂದರ್ಶನ ಸಂದರ್ಭಗಳಲ್ಲಿ ಹುಲಿ ಉಗುರು ಧರಿಸಿಕೊಂಡು ತೆಗೆಸಿಕೊಂಡ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.