ರಾಜ್ಯದಲ್ಲಿ ಸದ್ಯ ಹುಲಿ ಉಗುರು ವಿಚಾರ ಭಾರೀ ಸದ್ದು ಮಾಡುತ್ತಿದೆ. ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರ ಬಂಧನವಾಗಿತ್ತು. ಇದರ ಬೆನ್ನಲ್ಲೇ, ಈ ವಿಚಾರದಲ್ಲಿ ನಟರು, ನಿರ್ಮಾಪಕರು, ರಾಜಕಾರಣಿಗಳ ಹೆಸರು ತಳಕು ಹಾಕಿಕೊಂಡಿತ್ತು. ಅಷ್ಟೇ ಅಲ್ಲದೇ, ವನ್ಯಜೀವಿ ಕಾಯ್ದೆಯ ಬಗ್ಗೆ ಅರಿವು ಇರುವ ಅರಣ್ಯ ಅಧಿಕಾರಿಗಳ ಮೇಲೂ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಆರೋಪ ಕೇಳಿಬಂದಿತ್ತು.
ಚಿಕ್ಕಮಗಳೂರು ಜಿಲ್ಲೆಯ ಕಳಸದ ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಓ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ದರ್ಶನ್ ಹುಲಿ ಉಗುರು ಧರಿಸಿದ್ದ ಫೋಟೋ ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲೂ ಅಧಿಕಾರಿಗೆ ಅರಣ್ಯ ಇಲಾಖೆ ಸೂಚಿಸಿತ್ತು. ಆದರೆ, ಅವರು ತನಿಖೆಗೆ ಹಾಜರಾಗದ ಹಿನ್ನೆಲೆ, ಅವರನ್ನು ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಡಿ ಆರ್‌ಎಫ್‌ಓ ದರ್ಶನ್ ವಿರುದ್ಧದ ದೂರನ್ನು ಗಂಭೀರವಾಗಿ ಪರಿಗಣಿಸಿದ ಕೊಪ್ಪ ಡಿಎಫ್‌ಓ ನಂದೀಶ್ ಅವರು, ಈ ಸಂಬಂಧ ತನಿಖೆ ನಡೆಸಿ, ದರ್ಶನ್ ಅವರು ಹುಲಿ ಉಗುರು ಪೆಂಡೆಂಟ್ ಧರಿಸಿದ್ದು ಸಾಬೀತಾದ ಹಿನ್ನಲೆ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಅಧಿಕಾರಿ ವಿರುದ್ಧ ಹುಲಿ ಉಗುರು ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ ವನ್ಯಜೀವಿ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತೆ ಲಿಖಿತ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮದ್ಯದ ಅಮಲಿನಲ್ಲಿ ದುರ್ವರ್ತನೆ ಪ್ರದರ್ಶಿಸಿದ ಪ್ರಸಾದ್ ಬಿದ್ದಪ್ಪ ಪುತ್ರ, ಪ್ರಕರಣ ದಾಖಲು
ಅರೆನೂರು ಗ್ರಾಮದ ಸುಪ್ರೀತ್ ಹಾಗೂ ಅಬ್ದುಲ್ ಎಂಬವರು ಆಲ್ದೂರು ವಲಯ ಅರಣ್ಯಾಧಿಕಾರಿಗೆ ಈ ಸಂಬಂಧ ದೂರು ನೀಡಿದ್ದರು.