ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು. ಬಿಸಿಲಿನಿಂದ ಬೇಸತ್ತಿದ್ದ ಜನತೆಯ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನೊಂದೆಡೆ ಧಾರಾಕಾರ ಮಳೆ ಅನೇಕ ಅವಾಂತರಗಳನ್ನು ಸೃಷ್ಟಿ ಮಾಡಿದೆ.
ಬೆಂಗಳೂರಿನ ಬಸವನಗುಡಿ, ಕಾರ್ಪೊರೇಷನ್, ಟೌನ್‌ಹಾಲ್, ಮೆಜೆಸ್ಟಿಕ್, ಗೊರಗುಂಟೆಪಾಳ್ಯ, ಜಾಲಹಳ್ಳಿ, ಸುಮನಹಳ್ಳಿ, ಯಶವಂತಪುರ, ಮಹಾಲಕ್ಷ್ಮಿಲೇಔಟ್, ವಿಜಯನಗರ, ನಾಗರಬಾವಿ, ಚಾಮರಾಜಪೇಟೆ ಸೇರಿದಂತೆ ಹಲವೆಡೆ ಸಂಜೆ ವೇಳೆಗೆ ಧಾರಾಕಾರವಾಗಿ ಮಳೆ ಸುರಿದಿದೆ.
ಮಳೆಗೆ ನಗರದ ರಸ್ತೆಗಳು ಜಲಾವೃತವಾಗಿದ್ದವು. ಒಕಳೀಪುರಂ ಅಂಡರ್‌ಪಾಸ್‌ನಲ್ಲಿ 2 ಅಡಿಯಷ್ಟು ನೀರು ನಿಂತು ಸವಾರರು ಪರದಾಡಿದರು. ಕಂಟೋನ್ಮೆಂಟ್ ರೈಲ್ವೆ ಅಂಡರ್ ಪಾಸ್‌ನಲ್ಲೂ ನೀರು ನಿಂತುಕೊಂಡಿತ್ತು. ಇನ್ನು ಮೈಸೂರು ರಸ್ತೆಯಲ್ಲಿ ನದಿಯಂತಾಗಿದ್ದ ರಸ್ತೆಯಲ್ಲಿ ವಾಹನ ಸವಾರರು ನಿಧಾನಗತಿಯಲ್ಲಿ ಚಲಿಸುತ್ತಿದ್ದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಏರ್‌ಪೋರ್ಟ್ ರಸ್ತೆ ಮಾರ್ಗದಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು.
ನೆಲಮಂಗಲ ಸುತ್ತಮುತ್ತ ಭಾರೀ ಮಳೆಯಾಗಿದೆ. ಅರಿಶಿನಕುಂಟೆ, ಮಾಕಳಿ, ಮಾದನಾಯಕನಹಳ್ಳಿ ಬಳಿ ಸಂಚಾರ ದಟ್ಟಣೆ ಉಂಟಾಗಿತ್ತು. ನೆಲಮಂಗಲದ ಭೈರವೇಶ್ವರ ಬಡಾವಣೆಯಲ್ಲಿ ರಾಜಕಾಲುವೆ ತುಂಬಿ ಮನೆಗಳಿಗೆ ಮಳೆನೀರು ನುಗ್ಗಿತ್ತು.
ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಗಾಳಿ ಮಳೆಗೆ ಸುಮಾರು 70 ಮರಗಳು ಧರೆಗೆ ಉರುಳಿವೆ. ಬೆಂಗಳೂರು ದಕ್ಷಿಣ ವಲಯದಲ್ಲಿ 10, ಆರ್ ಆರ್ ನಗರ ವಲಯದಲ್ಲಿ 32, ಬೊಮ್ಮನಹಳ್ಳಿಯಲ್ಲಿ 6, ಪಶ್ಚಿಮ ವಲಯದಲ್ಲಿ 10, ಮಹಾದೇವಪುರದಲ್ಲಿ 1, ಯಲಹಂಕದಲ್ಲಿ 3, ಪೂರ್ವ ವಲಯದಲ್ಲಿ 6, ದಾಸರಹಳ್ಳಿ ವಲಯದಲ್ಲಿ 2 ಸೇರಿ 70 ಮರಗಳು ಧರಾಶಾಯಿಯಾಗಿವೆ.
ಚಾಮರಾಜಪೇಟೆಯ ಜೆಜೆಆರ್ ನಗರದಲ್ಲಿರುವ ಮನೆಗಳಿಗೆ ಕೊಳಚೆ ನೀರು ನುಗ್ಗಿದೆ. ಬಿನ್ನಿಮಿಲ್ ಮುಖ್ಯರಸ್ತೆಯಲ್ಲಿರುವ ಸಲಾರ್ಪುರಿಯ ಸತ್ವ ರೆಸಿಡೆನ್ಷಿಯಲ್ ಅಪಾರ್ಟ್‌ಮೆಂಟ್ ಸಂಕೀರ್ಣದಿಂದ ಕೊಳಚೆ ನೀರು ಹರಿದು ಬಂದು ಹೊರಭಾಗದಲ್ಲಿರುವ ಮನೆಗಳೊಳಗೆ ಹರಿದಿದೆ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ.
ಟರ್ಮಿನಲ್ 2 ಮೇಲ್ಛಾವಣಿಯಿಂದ ಮಳೆ ನೀರು ಸೋರಿಕೆ
2022ರ ನವೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಮೇಲ್ಛಾವಣಿಯಿಂದ ಮಳೆ ನೀರು ಸೋರಿಕೆಯಾಗುತ್ತಿದೆ. ಟರ್ಮಿನಲ್ 2 ಒಳಗೆ ನೀರು ನುಗ್ಗಿದ್ದು, ಲಗೇಜ್ ಬೇ ಬಳಿ ನೀರು ಬಂದಿದೆ. ಇದರಿಂದಾಗಿ ಸಿಬ್ಬಂದಿ ಪರದಾಡುವಂತಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ತನ್ನ ಕಾರ್ಯಾಚರಣೆಯನ್ನು 2023ರ ಆಗಸ್ಟ್ 31ರಿಂದ ಆರಂಭ ಮಾಡಿತ್ತು.
ರಾಜರಾಜೇಶ್ವರಿ ನಗರದ ನೃಪತುಂಗ ರಸ್ತೆಯಲ್ಲಿ ಗಾಳಿ ಮಳೆಯಿಂದ ನಾಲ್ಕೈದು ಮರಗಳು ಧರೆಗುರುಳಿದ್ದು ಜನರಿಗೆ ಓಡಾಡಲು ಜಾಗವಿಲ್ಲದಂತಾಗಿದೆ. ನಾಗರಬಾವಿಯ ಎನ್ಜಿಎಫ್ ಲೇಔಟ್ನಲ್ಲಿ ಮರ ಮತ್ತು ವಿದ್ಯುತ್ ಕಂಬ ಶೆಡ್ ಮೇಲೆ ಬಿದ್ದಿದ್ದು, ರಾಯಚೂರಿನಿಂದ ಕೂಲಿ ಕೆಲಸಕ್ಕೆ ಬಂದಿದ್ದ ಕುಟುಂಬವನ್ನು ಕೂದಲೆಳೆ ಅಂತರದಲ್ಲಿ ಪಾರಾಗಿದೆ. ರಾಯಚೂರು ಮೂಲದ ಶಿವು, ಅವರ ಮಕ್ಕಳು ಮತ್ತು ಪತ್ನಿ ಇಲ್ಲಿ ವಾಸಿಸುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕರ್ನಾಟಕದಲ್ಲಿ ಕಾಡ್ಗಿಚ್ಚಿನ ಘಟನೆಗಳು ಕಡಿಮೆ
ಮುಂದಿನ 24 ಗಂಟೆಗಳಲ್ಲಿ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೋಲಾರ, ರಾಮನಗರ, ಶಿವಮೊಗ್ಗದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿಗೆ ಮಳೆಯ ಅಲರ್ಟ್ ಘೋಷಿಸಲಾಗಿದೆ. ಗಂಟೆಗೆ 50ಕಿ.ಮೀ ವೇಗದಲ್ಲಿ ಗಾಳಿ ಜೊತೆಗೆ ಮಳೆಯಾಗುವ ಸಾಧ್ಯತೆ ಇದೆ. ಇದೇ ರೀತಿ ಮುಂದಿನ 5 ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯಿಂದ ಮಾಹಿತಿ ನೀಡಿದೆ.