ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊದಲನೇ ಬಾರಿಗೆ ನಡೆಯುತ್ತಿರುವ ಕಂಬಳ ವೀಕ್ಷಣೆ ಮಾಡಿ ವಾಪಸ್ ತೆರಳುವ ವೇಳೆ ಕಾರು ಮತ್ತು ಬೋರ್‌ವೆಲ್ ಲಾರಿ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾಗಿದೆ.
ರಾಜ್ಯ ಹೆದ್ದಾರಿ 33 ತಾಲೂಕಿನ ಕೊತ್ತಗೆರೆ ಹೋಬಳಿ ಚಿಗಣಿ ಪಾಳ್ಯ ಗ್ರಾಮದ ಬಳಿ ಭಾನುವಾರ (ನ.26 ರಂದು) ಮುಂಜಾನೆ ಈ ದುರಂತ ಸಂಭವಿಸಿದೆ.
ಮಂಗಳೂರಿನ ಬಜಪೆ ಮೂಲದ ಕಿಶನ್ ಶೆಟ್ಟಿ (20), ದಕ್ಷಿಣ ಕನ್ನಡ ಜಿಲ್ಲೆ ಭಟ್ಟರ ತೋಟ ಗ್ರಾಮದ ಫಿಲಿಪ್ ನೇರಿ ಲೋಬೋ(32) ಮೃತ ದುರ್ದೈವಿಗಳು. ನಿತೀಶ್ ಭಡಾರಿ, ಪ್ರೀತಿ ಲೋಬೋ, ಹರೀಶ್ ತೀವ್ರವಾಗಿ ಗಾಯಗೊಂಡು ಅದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನಿದು ಘಟನೆ?
ಕಂಬಳ ವೀಕ್ಷಿಸಲೆಂದೇ ಮಂಗಳೂರಿನಿಂದ ಐವರು ಸೇರಿ ಬೆಂಗಳೂರಿಗೆ ಕಾರಿನಲ್ಲಿ ಆಗಮಿಸಿದ್ದಾರೆ. ಕಂಬಳ ನೋಡಿಕೊಂಡು ತಮ್ಮ ಊರುಗಳಿಗೆ ವಾಪಸ್ ಆಗುವ ವೇಳೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೊಗುತ್ತಿದ್ದ ಬೋರ್‌ವೆಲ್ ಕೊರೆಯುವ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.
ಕಿಶನ್ ಶೆಟ್ಟಿ ಹಾಗೂ ಅವರ ಸ್ನೇಹಿತರು ನೆಲಮಂಗಲ ಹಾಗೂ ಕುಣಿಗಲ್ ಮಾರ್ಗವಾಗಿ ಮಂಗಳೂರಿಗೆ ಹೋಗಬೇಕಾಗಿತ್ತು. ಆದರೆ, ದಾರಿ ತಪ್ಪಿ ತುಮಕೂರಿಗೆ ಹೋಗಿ ಬಳಿಕ ಹೆಬ್ಬೂರು ಮಾರ್ಗವಾಗಿ ಕುಣಿಗಲ್ ನಿಂದ ಮಂಗಳೂರಿಗೆ ತೆರಳುತ್ತಿರಬೇಕಾದರೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಮೂಲಸೌಕರ್ಯ ಒದಗಿಸಿ: ನೈಜ ಹೋರಾಟಗಾರರ ವೇದಿಕೆ
ಲಾರಿ ಹಾಗೂ ಕಾರು ವೇಗವಾಗಿ ಚಲಿಸುತ್ತಿದ್ದ ಕಾರಣ ಕಾರು ನಜ್ಜುಗುಜ್ಜಾಗಿದೆ. ಅಪಘಾತ ಸಂಭವಿಸುತ್ತಲೇ ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.