ಕರ್ನಾಟಕ ನೂತನ ಮುಖ್ಯಮಂತ್ರಿ ಆಯ್ಕೆಯಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿಗಧಿಯಾಗಿದೆ. ಜೂನ್ 3 ರಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ನಡುವೆ ತುಮಕೂರು ಜಿಲ್ಲೆಯ ಸಚಿವ ಸ್ಥಾನದ ಆಕಾಂಕ್ಷಿಗಳು ಬಿರುಸಿನ ಲಾಬಿ ಆರಂಭಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಪ್ರಮುಖವಾಗಿ ಡಾ. ಜಿ. ಪರಮೇಶ್ವರ್, ಕೆ. ಎನ್ ರಾಜಣ್ಣ, ಟಿ. ಬಿ. ಜಯಚಂದ್ರ, ಎಸ್.ಆರ್. ಶ್ರೀನಿವಾಸ್, ತಿಪಟೂರು ಶಾಸಕ ಷಡಕ್ಷರಿ ಅವರ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿವೆ. ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನೆ ಆರಂಭಿಸಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀಗಳಿಗೆ ಮನವಿಯನ್ನು ನೀಡಿ, ಡಿಕೆಶಿ ಅವರಿಗೆ ತಿಳಿಸುವಂತೆ ಮನವಿಯನ್ನು ಮಾಡಲಾಗಿದೆ. ಹಾಗೂ ಯಾರಿಗೆ ಸಚಿವ ಸ್ಥಾನ ಒಲೆಯುತ್ತೆ ಅದರ ಮೇಲೆ ಜಿಲ್ಲಾ ರಾಜಕಾರಣ ಬದಲಾಗುತ್ತೆ ಎಂಬ ಚರ್ಚೆಯೂ ಇದೆ.
ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಧೀರ್ಘ ಕಾಲ ಹಿಡಿತ ಸಾಧಿಸಿರುವ ಮಾಜಿ ಸಚಿವ ಡಾ. ಜಿ. ಪರಮೇಶ್ವರ್ ಮತ್ತೆ ಅಧಿಕಾರ ಸ್ಥಾನ ಭದ್ರಪಡಿಸಿಕೊಳ್ಳುವ ಮತ್ತು ಹಿಡಿತ ತಪ್ಪದಂತೆ ನೋಡಿಕೊಳ್ಳುವ ಯೋಜನೆಯಲ್ಲಿದ್ದಾರೆ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೆ ಈ ಬಾರಿಯ ಸಂಪುಟದಲ್ಲಿ ಶಾತಾಯ ಗತಾಯ ಸ್ಥಾನ ಗಿಟ್ಟಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಟಿ. ಬಿ. ಜಯಚಂದ್ರ, ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಪ್ರಯತ್ನದಲ್ಲಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಜಿಲ್ಲೆಯ ಇಬ್ಬರಿಗೆ ಸ್ಥಾನ ಕಲ್ಪಿಸಲಾಗಿತ್ತು.
“ಡಾ. ಜಿ. ಪರಮೇಶ್ವರ್ ಮೂರು ವರ್ಷ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ ಆದರೆ ಕೆ. ಎನ್ ರಾಜಣ್ಣ ಅರ್ಧಕ್ಕೆ ಸಚಿವ ಸ್ಥಾನ ಕಳೆದುಕೊಂಡರು. ಪ್ರಸ್ತುತ ರಾಜಕೀಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ರಾಜಣ್ಣ ಅವರ ಬೆನ್ನಿಗೆ ನಿಂತು ಸಚಿವ ಸ್ಥಾನ ಕೊಡಮಾಡಬೇಕು, ಸಿದ್ದರಾಮಯ್ಯ ಅವರ ಪರವಾಗಿಯೇ ಹೆಚ್ಚು ಬ್ಯಾಟ್ ಬೀಸುತ್ತಾ ಬಂದಿರುವ ರಾಜಣ್ಣ ಅವರ ಋಣ ಭಾರ ತೀರಿಸಿಕೊಳ್ಳಲು ಇದು ಉತ್ತಮ ಅವಕಾಶ” ಎಂದು ರಾಜಣ್ಣ ಅಭಿಮಾನಿಗಳು ಒತ್ತಾಯಿಸಿದ್ದಾರೆ.
“ತುಮುಲ್ (ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ) ಚುನಾವಣೆ ವಿವಾದ ಕಾಂಗ್ರೆಸ್ ಪಾಳಯದಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ. ಆ ಸಂದರ್ಭದಲ್ಲಿ ಕುಪಿತರಾಗಿದ್ದ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಸರ್ಕಾರಿ ಕಾರ್ಯಕ್ರಮಗಳಿಂದಲೇ ದೂರ ಉಳಿದಿದ್ದರು, ಡಿಕೆಶಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರಿಗೆ ಈ ಬಾರಿ ಸಚಿವ ಸ್ಥಾನ ಖಾತ್ರಿಯಲ್ಲಿದೆ. ಡಾ. ಜಿ ಪರಮೇಶ್ವರ್ ಅವರನ್ನು ಸಭಾಪತಿ ಮಾಡಿದರೆ ಜಿಲ್ಲೆಯ ಉಸ್ತುವಾರಿಯನ್ನು ಪಡೆಯುವ ಯೋಜನೆಯಲ್ಲಿದ್ದಾರೆ. ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣ ಕೖಗಾರಿಗೆ ಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಪರಿಗಣಿಸುವಂತೆ ಬೇಡಿಕೆ ಇಡುವ ಸಾಧ್ಯತೆ ಇದೆ. ಇನ್ನು ಶಿರಾ ಶಾಸಕ ಹಾಗೂ ಮಾಜಿ ಸಚಿವ ಟಿ. ಬಿ. ಜಯಚಂದ್ರ 2013ರಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದರು ಈ ಬಾರಿ ಹಿರಿತನ, ಅನುಭವ ಪರಿಗಣಿಸಿ ಸಚಿವ ಸ್ಥಾನ ಒಲಿಯಬಹುದು” ಎಂಬ ನಿರೀಕ್ಷೆಯಲ್ಲಿದ್ದಾರೆ.
“ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ ಪರಮೇಶ್ವರ 3 ಬಾರಿ ಗೃಹಮಂತ್ರಿಯಾಗಿ, ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ, 5 ವರ್ಷದ ಸುದೀರ್ಘ ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರೇ ಹೇಳಿಕೊಂಡಂತೆ ಈ ಬಾರಿಯೂ ಸೇರಿ 3 ಬಾರಿ ಸಿಎಂ ಸ್ಥಾನದ ಅವಕಾಶ ವಂಚಿತರಾಗಿದ್ದಾರೆ. ಹಾಗಾಗಿ ಹೈಕಮಾಂಡ್, ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಮಾಡುತ್ತದೆ” ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
“ಲಿಂಗಾಯತ ಸಮುದಾಯದ ಹಿರಿಯ ನಾಯಕ ಹಾಗೂ ತಿಪಟೂರು ಶಾಸಕ ಕೆ ಷಡಕ್ಷರಿ ಆವರಿಗೆ ಈ ಬಾರಿ ಸಹಕಾರಿ ಖಾತೆ ನೀಡಬೇಕು ಎಂಬ ಬೇಡಿಕೆಯೂ ಇದೆ. 3 ಬಾರಿ ಶಾಸಕರಾಗಿರುವ ಷಡಕ್ಷರಿ ಅವರು ಹಳೆ ಮೈಸೂರು ಭಾಗದ ಜಿಲ್ಲೆಗಳ ಕಾಂಗ್ರೆಸ್ ಪಕ್ಷದ ಏಕೈಕ ಶಾಸಕರಾಗಿದ್ದು, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಮಂತ್ರಿಸ್ಥಾನದ ಆಕಾಂಕ್ಷಿಯಾಗಿದ್ದರು. ಸಂಪುಟ ಪುನರ್ರಚನೆ ವೇಳೆ ನಿಮಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಅದರೆ ಸಾಧ್ಯವಾಗಿರಲ್ಲಿಲ್ಲ. ನಿಯೋಜಿತ ಸಿಎಂ ಡಿ.ಕೆ.ಶಿವಕುಮಾರ್ ಅವರು ಹೆಚ್ಚು ಭಕ್ತಿಯಿಂದ ನಡೆದುಕೊಳ್ಳುವ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀಗಳು ಷಡಕ್ಷರಿ ಅವರಿಗೆ ಮಂತ್ರಿ ಸ್ಥಾನ ನೀಡುವ ವಿಚಾರವಾಗಿ ಡಿಕೆ ಅವರ ಬಳಿ ಮಾತಾಡಿದ್ದು ತಿಪಟೂರು ಶಾಸಕರಿಗೆ ಮಂತ್ರಿ ಸ್ಥಾನ ಪಕ್ಕಾ, ಸಹಕಾರಿ ರಂಗದಲ್ಲಿರುವ ಕಾರಣ ಸಹಕಾರಿ ಸಚಿವರಾಗುತ್ತಾರೆ” ಎಂಬ ಮಾತುಗಳು ಕೇಳಿಬರುತ್ತಿದೆ.
ಈ ಮಾತಿಗೆ ಪೂರಕವಾಗಿ ಜಿಲ್ಲಾ ರೈತ ಸಂಘ, ಹಸಿರು ಸೇನೆ ಅಧ್ಯಕ್ಷ ಹೆಚ್.ಡಿ. ರಾಮಲಿಂಗಯ್ಯ ಅವರು ಕೆ.ಎನ್.ರಾಜಣ್ಣ, ಷಡಕ್ಷರಿ ಹಾಗೂ ಶ್ರೀನಿವಾಸ್ ಅವರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲು ನಿಯೋಜಿತ ಸಿಎಂಗೆ ಶಿಫಾರಸ್ಸು ಮಾಡಬೇಕೆಂದು ಶ್ರೀಗಳನ್ನು ಭಾನುವಾರ ಭೇಟಿಯಾಗಿ ಮನವಿ ಮಾಡಿದ್ದಾರೆ.
ತುಮಕೂರು ನಗರದ ಮಾಜಿ ಶಾಸಕ ಡಾ. ಎಸ್. ರಫೀಕ್ ಅಹಮದ್ ಅವರಿಗೆ ಪ್ರಮುಖ ನಿಗಮ ಮಂಡಳಿ ಹುದ್ದೆ ದೊರೆಯುವ ಸಾಧ್ಯತೆಗಳೂ ಚರ್ಚೆಯಾಗುತ್ತಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದ ಹಿನ್ನೆಲೆ ಯಲ್ಲಿ ಅವರ ಬೆಂಬಲಿಗರನ್ನು ಸಮಾಧಾನಪಡಿಸುವ ಉದ್ದೇಶ ದಿಂದ ಪಕ್ಷವು ಸೂಕ್ತ ಸ್ಥಾನಮಾನ ನೀಡಬಹುದು ಎನ್ನಲಾಗಿದೆ. ಒಟ್ಟಾರೆ ಜಿಲ್ಲೆಯ ಎಲ್ಲರ ಕಣ್ಣು ಸಚಿವ ಸಂಪುಟ ವಿಸ್ತರಣೆ ಮೇಲೆ ಇದೆ. ಯಾರಿಗೆ ಸಚಿವ ಸ್ಥಾನ ಒಲಿಯಲಿದೆ ಕಾದುನೋಡಬೇಕಿದೆ.




