ಲೋಕಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ದೇಶದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆ, ಪೊಲೀಸರು ಚುನಾವಣಾ ಅಕ್ರಮಗಳನ್ನು ತಡೆಯಲು ಚೆಕ್ಪೋಸ್ಟ್ಗಳನ್ನು ಹಾಕಿ ತಪಾಸಣೆ ನಡೆಸುತ್ತಿದ್ದಾರೆ. ಬೆಂಗಳೂರಿನ ಜಯನಗರದಲ್ಲಿ ನಿಲ್ಲಿಸಿದ್ದ ಐಷಾರಾಮಿ ಕಾರ್‌ಗಳಲ್ಲಿ ದಾಖಲೆಯಿಲ್ಲದ ಕೋಟಿ ಕೋಟಿ ಹಣ ಪತ್ತೆಯಾಗಿದೆ.
ಜಯನಗರದ 4ನೇ ಬ್ಲಾಕ್‌ನಲ್ಲಿ ಮಯ್ಯಾಸ್ ಹೋಟೆಲ್ ಎದುರು ನಿಲ್ಲಿಸಿದ್ದ ಕೆಂಪು ಬಣ್ಣದ ಐಷಾರಾಮಿ ಕಾರು ಹಾಗೂ ಬಿಳಿ ಬಣ್ಣದ ಮತ್ತೊಂದು ಐಷಾರಾಮಿ ಕಾರಿನಲ್ಲಿರುವ ಚೀಲವೊಂದರಲ್ಲಿ ₹10ಗೂ ಅಧಿಕ ಹಣ ಪತ್ತೆಯಾಗಿದೆ. ಸದ್ಯ ಹಣ ಮತ್ತು ಕಾರ್ ಅನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಎರಡು ಐಷಾರಾಮಿ ಕಾರುಗಳಲ್ಲಿ ಇರಿಸಿದ್ದ ಚೀಲಗಳಲ್ಲಿ ದಾಖಲೆ ಇಲ್ಲದ ಹಣ ತುಂಬಿಸಿ ಸಾಗಿಸಲಾಗುತ್ತಿತ್ತು. ಚೆಕ್‌ಪೋಸ್ಟ್‌ನಲ್ಲಿ ನೋಂದಣಿಯಾಗ ಹೊಚ್ಚ ಹೊಸ ಕಾರುಗಳನ್ನು ಪರಿಶೀಲನೆ ನಡೆಸಿದಾಗ ಭಾರೀ ಮೊತ್ತದ ಹಣ ಪತ್ತೆಯಾಗಿದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ, ಕಾರಿನಲ್ಲಿ ದಾಖಲೆಯಿಲ್ಲದ ಕೋಟಿ ಕೋಟಿ ಹಣ ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿದೆ.
ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ | ಶಂಕಿತರು ಹತ್ತು ದಿನ ಎನ್‌ಐಎ ವಶಕ್ಕೆ
ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿದ್ದು, ಹಣದ ಚೀಲ ಇರುವ ಕಾರನ್ನು ಪರೀಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಅಧಿಕಾರಿಗಳು ಇನ್ನೊಂದು ಕಾರಿನ ಗ್ಲಾಸ್ ಒಡೆದು ಹಣ ಇರುವ ಬ್ಯಾಗ್‍ನ್ನು ಹೊರಗೆ ತೆಗೆದು ಕಾರಿನ ಒಳಗಡೆ ಇದ್ದ ದಾಖಲಾತಿಗಳನ್ನ ವಶಕ್ಕೆ ಪಡೆದಿದ್ದಾರೆ. ಕಾರಿನ ಒಳಗಡೆ ಒಂದು ಮೊಬೈಲ್ ಪತ್ತೆಯಾಗಿದೆ. ಇದೀಗ ಎರಡು ಕೌಂಟಿಂಗ್ ಮಷಿನ್‍ಗಳನ್ನು ತರಿಸಿಕೊಂಡು ಅಧಿಕಾರಿಗಳು ಹಣ ಎಣಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಧಿಕಾರಿಗಳು ಬರುತ್ತಿದ್ದಂತೆ ಕಾರಿನಲ್ಲಿದ್ದ ಐವರು, ಚೀಲದಲ್ಲಿರುವುದು ಮಾವಿನ ಹಣ್ಣು ಇದೆ ಎಂದಿದ್ದಾರೆ. ಬಳಿಕ ಅಧಿಕಾರಿಗಳು ಪರಿಶೀಲನೆಗೆ ಮುಂದಾದಾಗ ಒಂದು ಕಾರಿನಲ್ಲಿದ್ದ ಐವರು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 9 ಗಂಟೆಯಿಂದ ಫೋಲೋ, ಬೆಂಜ್ ಮತ್ತು ಫಾರ್ಚೂನರ್ ಕಾರುಗಳು ಬಂದು ನಿಂತಿದ್ದವು. ಫೋಲೋ ಕಾರಿನಿಂದ ಬೈಕ್‍ಗೆ ಹಣ ತುಂಬಿಸುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೂಡಲೇ ಫಾರ್ಚೂನರ್ ಕಾರಿನಲ್ಲಿ ಐವರು ಪರಾರಿಯಾಗಿದ್ದಾರೆ. ಸದ್ಯ ಎರಡು ಕಾರು ಮಾತ್ರ ಉಳಿದಿವೆ. ಒಂದು ಬೈಕ್ ಹಾಗೂ ಎರಡು ಕಾರುಗಳಲ್ಲಿ ಮೂರು ಬ್ಯಾಗ್‍ನಲ್ಲಿ ಹಣ ಸಿಕ್ಕಿದೆ ಎಂದು ಎಂಸಿಸಿ ನೋಡಲ್ ಆಫೀಸರ್ ಮನೀಷ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ್ ಮತ್ತು ಮಾಜಿ ಕಾರ್ಪೋರೇಟರ್ ನಾಗರಾಜ್ ಜಯನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.