ಈ ಹಿಂದೆ ಯಾವುದೇ ವಿಶ್ವವಿದ್ಯಾಲಯದ ಕುಲಪತಿ ಆಗುವವರು ಬೋಧಕರಾಗಿರಬೇಕಿತ್ತು. ಆದರೆ ಈಗ ಆ ನಿಯಮವೇ ಬದಲಾಗಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹೊಸ ನಿಯಮಾವಳಿಯನ್ನು ರೂಪಿಸಿದ್ದು ಕರಡು ಪ್ರಕಟಿಸಿದೆ. ಉನ್ನತ ಶಿಕ್ಷಣದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ರೂಪಿಸಿರುವ ಈ ಹೊಸ ನಿಯಮಾವಳಿಗೆ ಈಗಾಗಲೇ ತೀವ್ರ ವಿರೋಧ ವ್ಯಕ್ತವಾಗಿದೆ.
ಪ್ರಮುಖವಾಗಿ ವಿಪಕ್ಷಗಳ ಆಡಳಿತವಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಈ ನಿಯಮಾವಳಿಯನ್ನು ವಿರೋಧಿಸಿವೆ. ಅದರಲ್ಲೂ ಮುಖ್ಯವಾಗಿ ಸಿಪಿಐಎಂನ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ರಾಜ್ಯ ಸರ್ಕಾರದ ಹಕ್ಕನ್ನೂ ಕಸಿಯುವ ಈ ನಿಯಮಾವಳಿಗೆ ವಿರೋಧ ವ್ಯಕ್ತಪಡಿಸಿದೆ.
ಇದನ್ನು ಓದಿದ್ದೀರಾ? ರಾಷ್ಟ್ರಗೀತೆ ನುಡಿಸಲಿಲ್ಲ ಎಂದು ಭಾಷಣ ಮಾಡದೆ ವಿಧಾನಸಭೆಯಿಂದ ಹೊರ ನಡೆದ ತಮಿಳುನಾಡು ರಾಜ್ಯಪಾಲ
ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಗ್ರಂಥಪಾಲಕರು, ದೈಹಿಕ ಶಿಕ್ಷಣ ನಿರ್ದೇಶಕರು, ಇತರೆ ಬೋಧಕರನ್ನು ನೇಮಕ ಮಾಡಿಕೊಳ್ಳುವ ಮತ್ತು ಬಡ್ತಿ ನೀಡುವ ಕುರಿತಾಗಿ ಈ ಹಿಂದೆ ಜಾರಿಯಲ್ಲಿದ್ದ 2018ರ ನಿಯಮಗಳನ್ನು ಯುಜಿಸಿ ರದ್ದುಪಡಿಸಿದೆ. ಯುಜಿಸಿ ಕಾಯ್ದೆ-1956ರ ಅಡಿಯಲ್ಲಿ ಹೊಸ ನಿಯಮವನ್ನು ರೂಪಿಸಲು ಮುಂದಾಗಿದೆ. ನೇಮಕಾತಿಯ ಕೆಲವು ನಿಯಮ ಸಡಿಲಗೊಳಿಸಿದರೆ, ಬಡ್ತಿಯ ಕೆಲವು ನಿಯಮ ಬಿಗಿಗೊಳಿಸಲಾಗಿದೆ. 30 ದಿನದಲ್ಲಿ ಈ ಬಗ್ಗೆ ಅಭಿಪ್ರಾಯ ಸಲ್ಲಿಸಲು ಯುಜಿಸಿ ತಿಳಿಸಿದೆ.
ಈ ಕರಡು ನಿಯಮಾವಳಿಯು ಕುಲಪತಿ ನೇಮಕಾತಿಯ ವಿಚಾರದಲ್ಲಿ ರಾಜ್ಯ ಸರ್ಕಾರದ ಅಧಿಕಾರವನ್ನು ರಾಜ್ಯಪಾಲರಿಗೆ ಹಸ್ತಾಂತರಿಸುತ್ತದೆ. ಈ ನಿಯಮದಿಂದಾಗಿ, ರಾಜ್ಯಗಳ ಅಧೀನದಲ್ಲಿರುವ ವಿವಿಗಳಿಗೆ ಆ ರಾಜ್ಯದ ರಾಜ್ಯಪಾಲರೇ ಕುಲಾಧಿಪತಿ ಆಗಿರುತ್ತಾರೆ. ಜೊತೆಗೆ, ಈ ಹಿಂದೆ ರಾಜ್ಯ ಸರ್ಕಾರಕ್ಕಿದ್ದ ತಜ್ಞರ ಶೋಧನಾ ಸಮಿತಿ ನೇಮಿಸುವ ಅಧಿಕಾರವನ್ನೂ ಕೂಡ ಕುಲಾಧಿಪತಿ ಹಸ್ತಾಂತರಿಸಲಾಗಿದೆ.
ಕುಲಪತಿ ಆಯ್ಕೆಗಾಗಿ ಈವರೆಗೆ ರಾಜ್ಯ ಸರ್ಕಾರಗಳು ಮೂವರಿಂದ ಐವರು ತಜ್ಞರಿರುವ ಶೋಧನಾ ಸಮಿತಿಯನ್ನು ನೇಮಿಸಬೇಕಾಗಿತ್ತು. ಆದರೆ ಈ ಹೊಸ ನಿಯಮಾವಳಿ ರಾಜ್ಯ ಸರ್ಕಾರದ ಈ ಅಧಿಕಾರವನ್ನೇ ಕಿತ್ತುಕೊಂಡಿದೆ. ಮೂವರು ತಜ್ಞರುಗಳನ್ನು ನೇಮಿಸುವ ಅಧಿಕಾರವನ್ನು ಕುಲಾಧಿಪತಿ ಎಂದು ಕರೆಸಿಕೊಳ್ಳುವ ರಾಜ್ಯಪಾಲರಿಗೆ ನೀಡಿದೆ.
ಇದನ್ನು ಓದಿದ್ದೀರಾ? ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ವಿವಿಗೆ ರಾಜ್ಯಪಾಲರ ಬದಲು ಸಿಎಂ ಕುಲಪತಿ, ಬಿಜೆಪಿ ಆಕ್ಷೇಪ
ಇದರೊಂದಿಗೆ ಕುಲಪತಿಯ ಆಯ್ಕೆಯ ಅರ್ಹತಾ ಮಾನದಂಡವನ್ನೂ ಬದಲಾಯಿಸಲಾಗಿದೆ. ಈವರೆಗೆ ಒಂದು ವಿಶ್ವವಿದ್ಯಾಲಯದ ಕುಲಪತಿಯಾಗಬೇಕಾದರೆ ಮೊದಲು ಆ ವ್ಯಕ್ತಿ ಬೋಧಕರಾಗಿರಬೇಕಿತ್ತು. ಆದರೆ ಹೊಸ ನಿಯಮಾವಳಿ ಈ ಮಾನದಂಡವನ್ನು ಹೊಂದಿಲ್ಲ. ಬದಲಾಗಿ ಶೈಕ್ಷಣಿಕ ಕ್ಷೇತ್ರದಿಂದ ಹೊರಗಿನವರಿಗೂ ವಿಶ್ವವಿದ್ಯಾಲಯದ ಕುಲಪತಿಯಾಗುವ ಅವಕಾಶವನ್ನು ನೀಡಲಾಗಿದೆ! ಉನ್ನತ ಶಿಕ್ಷಣ ಸಂಸ್ಥೆಯಲ್ಲಿ 10 ವರ್ಷಗಳಿಂದ ಬೋಧಕರಾಗಿರುವವರು, ಇತರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಕುಲಪತಿ ಹುದ್ದೆಗೆ ಅರ್ಹರಾಗಿರುತ್ತಾರೆ ಎಂದು ಕರಡು ನಿಯಮಾವಳಿ ಹೇಳುತ್ತದೆ. ಜೊತೆಗೆ ಸಮಿತಿಯು ಪ್ರತಿಭಾ ಶೋಧ ಅಥವಾ ನಾಮನಿರ್ದೇಶನದ ಮೂಲಕವೂ ಅಭ್ಯರ್ಥಿಗಳ ಆಯ್ಕೆ ಮಾಡಬಹುದಾಗಿದೆ.
ವಿಶ್ವವಿದ್ಯಾಲಯಗಳ ನೇಮಕಾತಿಯಲ್ಲಿ ರಾಜ್ಯ ಸರ್ಕಾರಗಳ ಅಧಿಕಾರವನ್ನು ಕಿತ್ತುಕೊಳ್ಳುವ ಈ ಕರಡು ನಿಯಮಾವಳಿಯನ್ನು ಈಗಾಗಲೇ ಹಲವು ರಾಜ್ಯಗಳು ವಿರೋಧಿಸಿವೆ. ತಮಿಳುನಾಡು, ಕೇರಳ, ಕರ್ನಾಟಕ ಮೊದಲಾದ ದಕ್ಷಿಣ ಭಾರತದ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದೆ. ರಾಜ್ಯಪಾಲರ ಅಧಿಕಾರ ಮೊಟಕುಗಳಿಸುವ ಮಸೂದೆಯನ್ನು ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಅಂಗೀಕರಿಸಲಾಗಿದೆ. ಕುಲಾಧಿಪತಿ ಅಧಿಕಾರವನ್ನು ರಾಜ್ಯಪಾಲರಿಂದ ಮುಖ್ಯಮಂತ್ರಿಗೆ ಹಸ್ತಾಂತರಿಸುವ ‘ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ’ ಇತ್ತೀಚೆಗೆ ಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಲಾಗಿದೆ.
ಆದರೆ, ಯುಜಿಸಿಯ ಹೊಸ ಕರಡು ನಿಯಮಾವಳಿಯ ಪ್ರಕಾರ ವಿಶ್ವವಿದ್ಯಾಲಯಗಳಲ್ಲಿ ಸಹಾಯ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರ ನೇಮಕಾತಿ ಮಾಡುವ ಸಮಿತಿಗೆ ಕುಲಪತಿಯೇ ಅಧ್ಯಕ್ಷರಾಗಿರುತ್ತಾರೆ. ಮೂವರು ಬಾಹ್ಯ ವಿಷಯ ಪರಿಣಿತರನ್ನೂ ಕುಲಪತಿಯೇ ನೇಮಿಸುತ್ತಾರೆ. ಅಂದರೆ ಈ ಕರಡು ನಿಯಮಾವಳಿಯು ವಿಶ್ವವಿದ್ಯಾಲಯಗಳ ಬೋಧನಾ ಸಿಬ್ಬಂದಿ ನೇಮಕ ವಿಚಾರದಲ್ಲಿಯೂ ಕುಲಪತಿಗೆ ಅಧಿಕ ಅಧಿಕಾರ ನೀಡುತ್ತದೆ.
ಇದನ್ನು ಓದಿದ್ದೀರಾ? ಒಂದು ದೇಶ ಒಂದು ಚುನಾವಣೆ ; ಒಂದು ಉದ್ದೇಶ ಹಲವು ವೇಷ ಅಷ್ಟೇ…
ನಿಯಮ ಉಲ್ಲಂಘಿಸಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ
ಈ ನೂತನ ನಿಯಮಾವಳಿಯನ್ನು ಉಲ್ಲಂಘಿಸಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿದೆ. ನಿಯಮಾವಳಿಯನ್ನು ಉಲ್ಲಂಘಿಸಿರುವುದು ಗಮನಕ್ಕೆ ಬಂದರೆ ಅದನ್ನು ಪರಿಶೀಲಿಸಿ, ವರದಿ ನೀಡಲು ಯುಜಿಸಿ ಆಯೋಗವನ್ನು ನೇಮಿಸುತ್ತದೆ. ಸಂಸ್ಥೆಯು ನಿಯಮವನ್ನು ಉಲ್ಲಂಘಿಸಿರುವುದು ಸಾಬೀತಾದರೆ ಯುಜಿಸಿಯು ನಿಯಮ ಪ್ರಕಾರ ಕಠಿಣ ಕ್ರಮಕ್ಕೆ ಒಳಗಾಗಬೇಕಾಗುತ್ತದೆ.
ನಿಯಮ ಉಲ್ಲಂಘಿಸಿದ ಶಿಕ್ಷಣ ಸಂಸ್ಥೆಗಳಿಗೆ ದೂರ ಶಿಕ್ಷಣ (ಒಡಿಎಲ್) ಮತ್ತು ಆನ್‌ಲೈನ್ ಶಿಕ್ಷಣಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಹಾಗೆಯೇ ಪದವಿ ನೀಡದಂತೆ ಸಂಸ್ಥೆಗೆ ನಿಷೇಧ ಹೇರಲಾಗುತ್ತದೆ. ಯುಜಿಸಿ ಯೋಜನೆಗಳಲ್ಲಿ ಪಾಲ್ಗೊಳ್ಳದಂತೆಯೂ ನಿಷೇಧಿಸಲಾಗುತ್ತದೆ. ಯುಜಿಸಿ ಕಾಯ್ದೆ 1956ರ ಸೆಕ್ಷನ್ 2 (ಎಫ್) ಮತ್ತು 12 ಬಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಿಂದ ಸಂಸ್ಥೆಯನ್ನು ತೆಗೆದುಹಾಕಲಾಗುತ್ತದೆ.
ಈಗಾಗಲೇ ಕೇಂದ್ರ ಸರ್ಕಾರವು ಹಲವು ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರದ ಅಧಿಕಾರವನ್ನು ಕಿತ್ತುಕೊಳ್ಳುವ ಹುನ್ನಾರವನ್ನು ನಡೆಸಿದೆ. ಅದಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ‘ಒಂದು ದೇಶ, ಒಂದು ಚುನಾವಣೆ’ ಯೋಜನೆಯೂ ಕೂಡಾ ಸ್ಥಳೀಯವಾಗಿ ಚುನಾವಣೆಯನ್ನು ಕ್ರಮೇಣವಾಗಿ ಕೊನೆಗೊಳಿಸಿ ಒಂದು ಸರ್ವಾಧಿಕಾರ ಪ್ರಭುತ್ವ ಸಾಧಿಸುವ ಹಾದಿ ಎಂದರೆ ತಪ್ಪಾಗಲಾರದು.
