ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಗುತ್ತಿಗೆ ಕೆಲಸ ಮಾಡುತ್ತಿರುವ ಚಾಲಕರು ಬೆಂಗಳೂರಿನ ಶಾಂತಿನಗರ ಡಿಪೋ 3ರ ಮುಂದೆ ಮಂಗಳವಾರ ಧರಣಿ ನಡೆಸಿದ್ದು, ವೇತನಕ್ಕಾಗಿ ಆಗ್ರಹಿಸಿದ್ದಾರೆ.
ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳು ಸರಿಯಾಗಿ ಸೇವೆ ನೀಡುತ್ತಿಲ್ಲ ಎಂಬ ಆರೋಪಗಳು ಇತ್ತೀಚೆಗೆ ಕೇಳಿಬಂದಿದ್ದವು. ಇದೀಗ ಚಾಲಕರು ತಮಗೆ ವೇತನ ನೀಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.
“ಮೊದಲಿಗೆ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವಾಗ ಟಾಟಾ ಕಂಪನಿಯಲ್ಲಿ ಕೆಲಸ ಎಂದು ಹೇಳಿದ್ದರು. ಇದೀಗ, ಆರ್ಯ ಕಂಪನಿಯಲ್ಲಿ ಕೆಲಸ ನೀಡಿದ್ದಾರೆ. ಅಲ್ಲದೇ, ತಿಂಗಳಿಗೆ ₹26 ಸಾವಿರ ವೇತನ ನೀಡುತ್ತೇವೆ ಎಂದಿದ್ದರು. ಆದರೀಗ, ಕೇವಲ ₹18 ಸಾವಿರ ನೀಡುತ್ತಿದ್ದಾರೆ. ಬರುವ ವೇತನದಲ್ಲಿ ಕಡಿತ ಮಾಡುತ್ತಿರುವ ಹಣ ಪಿಎಫ್ ಖಾತೆಗೂ ಜಮೆ ಆಗುತ್ತಿಲ್ಲ. ವಸತಿ ಸೌಲಭ್ಯ ನೀಡುತ್ತೇವೆ ಎಂದಿದ್ದರು. ಇದೀಗ ಅದೂ ಇಲ್ಲ” ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಮಗೆ ಸರಿಯಾಗಿ ತಿಂಗಳಿಗೆ ವೇತನ ಆಗುತ್ತಿಲ್ಲ. ಜತೆಗೆ ನಾವು ಡ್ಯೂಟಿ ಮತ್ತು ಓಟಿ ಸೇರಿ (8ಗಂಟೆ ಡ್ಯೂಟಿ ಮತ್ತು 8ಗಂಟೆ ಓಟಿ) ಅಂದರೆ ತಿಂಗಳಲ್ಲಿ 40-42 ಸಾವಿರ ರೂ. ವರೆಗೆ ದುಡಿದ್ದೇವೆ. ಆದರೆ, ನಮಗೆ ಸುಮಾರು 42 ಸಾವಿರ ರೂಪಾಯಿ ಕೊಡುವ ಬದಲಿಗೆ ಕೇವಲ 18-20 ಸಾವಿರ ರೂಪಾಯಿ ಮಾತ್ರ ಕೊಟ್ಟಿದ್ದಾರೆ. ಈ ಪುರುಷಾರ್ಥಕ್ಕೆ ನಾವು ಡ್ಯೂಟಿ ಏಕೆ ಮಾಡಬೇಕು” ಎಂದು ಪ್ರತಿಭಟನೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಪ್ರಜ್ವಲ್ ಲೈಂಗಿಕ ಹಗರಣ | ಸಂತ್ರಸ್ತೆಯರಿಗೆ ರಕ್ಷಣೆ ನ್ಯಾಯ ಹಾಗೂ ಅಪರಾಧಿಗಳಿಗೆ ಶಿಕ್ಷೆ ನೀಡಬೇಕೆಂದು ಆಗ್ರಹ ಸಮಾವೇಶ
“ಸುಮಾರು 180 ಮಂದಿ ಎಲೆಕ್ಟ್ರಿಕ್ ಬಸ್ ಚಾಲಕರು ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ನಿತ್ಯ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನು ನೇಮಕ ಮಾಡಿಕೊಳ್ಳುವಾಗ ತಿಂಗಳಿಗೆ 22 ಸಾವಿರ ರೂಪಾಯಿ ವೇತನ ಮತ್ತು ಇತರ ಭತ್ಯೆಗಳನ್ನು ಕೊಡಲಾಗುವುದು ಎಂದು ಹೇಳಿದ್ದರು. ಜತೆಗೆ ಓಟಿ ಮಾಡಿದರೆ ನೀವು ಡಬಲ್ ವೇತನ ಪಡೆಯಬಹುದು ಎಂದಿದ್ದರು. ಆದರೆ, ವೇತನವನ್ನೇ ಸರಿಯಾಗಿ ಕೊಡುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿಯಲ್ಲಿ ಒಟ್ಟು 6842 ಬಸ್ಗಳಿವೆ. ಅದರಲ್ಲಿ ಸಾಮಾನ್ಯ 5642 ಬಸ್ಗಳಿದ್ದರೆ, 600 ಎಸಿ ಬಸ್ಗಳಿವೆ. 600 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ಗಳಿವೆ. ಡಿಪೋ-3 ಒಂದರಲ್ಲೇ 113 ಎಲೆಕ್ಟ್ರಿಕ್ ಬಸ್ಗಳು ಸಂಚರಿಸುತ್ತೇವೆ. ಇಲ್ಲಿ ಚಾಲಕರು ಮೂರು ಶಿಫ್ಟ್ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.