ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ, ಅಂತರ್ಜಲ ಮಟ್ಟ ಕುಸಿತದಿಂದ ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿವೆ. ಇನ್ನೊಂದೆಡೆ, ಕಾವೇರಿ ನೀರಿನ ಕೊರತೆಯಿಂದಾಗಿ ಬೆಂಗಳೂರು ಜಲಮಂಡಳಿಯಿಂದ ನಗರದಲ್ಲಿರುವ ಮನೆಗಳಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಈ ವರ್ಷ ಸಕಾಲಕ್ಕೆ ಮಳೆಯಾಗದೇ, ಜಲಾಶಯಗಳು ಬರ್ತಿಯಾಗದೇ ನೀರಿನ ಮಟ್ಟ ಕುಸಿದಿದೆ. ಇನ್ನು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವ ಸಾಧ್ಯತೆಯಿದೆ.
ಬೆಂಗಳೂರಿನ ಜನಸಂಖ್ಯೆ ಅಂದಾಜು 1.30 ಕೋಟಿ ದಾಟಿದೆ. ನಗರದ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವುದೇ ಸವಾಲಾಗಿ ಪರಿಣಮಿಸಿದೆ. ನೀರಿನ ಪೂರೈಕೆಯ ಮಹತ್ವದ ಜವಾಬ್ದಾರಿ ಹೊತ್ತಿರುವ ಬೆಂಗಳೂರು ಜಲಮಂಡಳಿ, ಕಾವೇರಿ ನೀರನ್ನೇ ಪ್ರಧಾನವಾಗಿ ಅವಲಂಬಿಸಿದೆ. ಜಲಮಂಡಳಿ ನಗರದಲ್ಲಿ 10.37 ಲಕ್ಷ ಕೊಳಾಯಿ ಸಂಪರ್ಕ ಕಲ್ಪಿಸಿದೆ.
ಕಾವೇರಿ ನೀರು ನಿತ್ಯ 100 ಕಿ.ಮೀ ದೂರದಿಂದ ಬೆಂಗಳೂರಿಗೆ ಬಂದು ತಲುಪುತ್ತದೆ. 1,450 ಎಂಎಲ್‌ಡಿ ನೀರನ್ನು ಜನರಿಗೆ ಒದಗಿಸಲಾಗುತ್ತಿದೆ. ನಗರದಲ್ಲಿರುವ 10,995 ಕೊಳವೆ ಬಾವಿಗಳಿಂದ 400 ಎಂಎಲ್‌ಡಿಯಷ್ಟು ನೀರು ಒದಗಿಸಲಾಗುತ್ತಿದೆ. ಒಟ್ಟಾರೆ 1,850 ಎಂಎಲ್‌ಡಿ ನೀರು ಪೂರೈಸುತ್ತಿದ್ದರೂ, ಎಲ್ಲ ಪ್ರದೇಶಗಳ ನೀರಿನ ಬೇಡಿಕೆ ನೀಗಿಸಲು ಸಾಧ್ಯವಾಗುತ್ತಿಲ್ಲ.
ಈಗ, ಎಲ್ ನಿನೋ ಕಾರಣದಿಂದಾಗಿ ಅವಧಿಗೂ ಮುನ್ನವೇ ಬೇಸಿಗೆ ಕಾಲ ದಾಪುಗಾಲಿಟ್ಟು ಬರುತ್ತಿದೆ. ಈಗಲೇ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ಇನ್ನು ಬೀರು ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ 257 ಪ್ರದೇಶಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತಿದೆ ಎಂದು ಬೆಂಗಳೂರು ಜಲಮಂಡಳಿ ಗುರುತಿಸಿದೆ. ಅಲ್ಲದೇ, ಜಲಮಂಡಳಿ ನಿರ್ವಹಣೆ ಮಾಡುತ್ತಿರುವ 10,995 ಕೊಳವೆ ಬಾವಿಗಳ ಪೈಕಿ 1,240 ಬೋರ್‌ವೆಲ್‌ಗಳು ಬೇಸಿಗೆ ಸಮಯದಲ್ಲಿ ಬತ್ತಿ ಹೋಗಬಹುದು ಎಂದು ಅಂದಾಜು ಮಾಡಲಾಗಿದೆ. ಇದೇ ಸಮಯದಲ್ಲಿ, ಪ್ರತಿ ತಿಂಗಳಿಗೆ ಹೆಚ್ಚುವರಿಯಾಗಿ 1,680 ದಶಲಕ್ಷ ಲೀಟರ್ (ಎಂಎಲ್‌ಡಿ) ನೀರು ಬೇಕಾಗಿದೆ ಎಂದು ಹೇಳಿದೆ.
ಸದ್ಯಕ್ಕೆ ನೀರಿನ ಅಭಾವ ಎದುರಿಸುತ್ತಿರುವ 257 ಪ್ರದೇಶಗಳಲ್ಲಿ ಅಭಾವನ ನೀಗಿಸಲು ಜಲಮಂಡಳಿ ಪ್ರತ್ಯೇಕ ಯೋಜನೆ ರೂಪಿಸಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ, ಕಾವೇರಿ ನೀರು ಪೂರೈಕೆ ಹೊರೆಯನ್ನು ತಗ್ಗಿಸಲು, ಕೈಗಾರಿಕಾ ಕೇಂದ್ರಗಳಿಗೆ ಸಂಸ್ಕರಿಸಿದ ನೀರನ್ನು ಮಾತ್ರ ಸರಬರಾಜು ಮಾಡಲು ನಿರ್ಧರಿಸಿದೆ. ಜೊತೆಗೆ, ನೀರಿನ ಸಂಪರ್ಕ ಪಡೆದಿರುವ ದೊಡ್ಡ ಗಾತ್ರದ ವಾಣಿಜ್ಯ ಮತ್ತು ಕೈಗಾರಿಕೆಗಳನ್ನು ಗುರುತಿಸಿ, ನೀರಿನ ಪೂರೈಕೆ ಪ್ರಮಾಣವನ್ನು ಕಡಿಮೆ ಮಾಡಲು ತೀರ್ಮಾನಿಸಿದೆ. ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ಕೈಗಾರಿಕೆಗಳಿಗೆ ಟ್ಯಾಂಕರ್ ಮೂಲಕ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಬೇಸಿಗೆಕಾಲ ಆರಂಭಕ್ಕೆ ಇನ್ನು ಒಂದು ತಿಂಗಳು ಬಾಕಿ ಇದೆ. ಆದರೆ, ಚಳಿಗಾಲದ ಸಮಯದಲ್ಲಿಯೇ ನೀರಿಗೆ ಹಾಹಾಕಾರ ಆರಂಭವಾಗಿದೆ. ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ಇದೇ ಪರಿಸ್ಥಿತಿ ಬೇಸಿಗೆ ಆರಂಭವಾದ ಬಳಿಕವೂ ಮುಂದುವರೆದರೇ ಜಲಕ್ಷಾಮ ಉಂಟಾಗುವ ಸಾಧ್ಯತೆಯಿದೆ. ನಗರದಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಒಂದು ಸಾವಿರ ಅಡಿ ಆಳದವರೆಗೂ ಕೊಳವೆ ಬಾವಿ ಕೊರೆದರೂ ನೀರು ಸಿಗದಂತಹ ಪರಿಸ್ಥಿತಿ ಉಂಟಾಗಿದೆ. ಬೆಂಗಳೂರಿನಲ್ಲಿ ಬಹುತೇಕ ಇದೇ ಪರಿಸ್ಥಿತಿ ಇದ್ದು, ಅಂತರ್ಜಲದ ಶೋಷಣೆಯಾಗುತ್ತಿದೆ.
ಬಾಪೂಜಿ ನಗರ, ಕವಿತಾ ಲೇಔಟ್, ರಾಜಾಜಿನಗರ 6ನೇ ಬ್ಲಾಕ್, ಕೆ. ಆರ್. ಪುರ, ಮಾರತ್ ಹಳ್ಳಿ, ರಾಮಮೂರ್ತಿ ನಗರ, ಡಿ. ಜೆ. ಹಳ್ಳಿ, ವೈಯಾಲಿಕಾವಲ್, ಎಚ್‌ಎಸ್‌ಆರ್ ಲೇಔಟ್, ಬೊಮ್ಮನಹಳ್ಳಿ ಸೇರಿದಂತೆ ಒಟ್ಟು 257 ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ತೀವ್ರ ಬರ ಎದುರಿಸಲಿರುವ ಪ್ರದೇಶಗಳು ಎಂದು ಗುರುತಿಸಲಾಗಿದೆ. ಈ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲು ಜಲಮಂಡಳಿ ಪರ್ಯಾಯ ಮಾರ್ಗ ಹುಡುಕಿಕೊಳ್ಳುತ್ತಿದೆ.
ಪ್ರಸ್ತುತ ಅಂತರ್ಜಲ ಕುಸಿತದಿಂದ ಈಗಾಗಲೇ ಸಾಕಷ್ಟು ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಹೀಗಾಗಿ ಮಾರ್ಚ್ನಲ್ಲಿ ಕುಡಿಯವ ನೀರಿನ ಬೇಡಿಕೆ ಇನ್ನಷ್ಟು ಹೆಚ್ಚಲಿದೆ. ಸದ್ಯ ನೀರಿನ ಅಭಾವವಿರುವ ಪ್ರದೇಶಗದ ನಿವಾಸಿಗಳು ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ.
ನೀರು ಉಳಿಸಲು ಸದ್ಯಕ್ಕೆ ಜಲಮಂಡಳಿ ಮುಂದಿರುವ ಕ್ರಮಗಳು
- ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲು ಗಾಲಿ ಮತ್ತು ಅಚ್ಚು ಕಾರ್ಖಾನೆ, ಕೆಲ ಐಟಿ ಕಂಪೆನಿ, ಖಾಸಗಿ ಹೋಟೆಲ್ನಲ್ಲಿ ನಿರ್ವಹಣೆಗಾಗಿ ಸಂಸ್ಕರಿಸಿದ ನೀರನ್ನು ಬಳಕೆ ಮಾಡಲಾಗುತ್ತಿದೆ. ಇದೆ ಮುಂದುವರೆಯಬೇಕು.
- ನಗರದ ನಾನಾ ಭಾಗಗಳಲ್ಲಿ ಸಾಕಷ್ಟು ಕೈಗಾರಿಕಾ ಕೇಂದ್ರಗಳಿದ್ದು, ಅಧಿಕ ಪ್ರಮಾಣದಲ್ಲಿ ನೀರನ್ನು ಬಳಕೆ ಮಾಡುತ್ತವೆ. ಅದನ್ನು ಕಡಿಮೆ ಮಾಡಬೇಕು.
- ನೀರಿನ ಕೊರತೆ ಹೆಚ್ಚುತ್ತಿರುವುದರಿಂದ, ಕೈಗಾರಿಕಾ ಕೇಂದ್ರಗಳಲ್ಲದೆ, ಸರ್ಕಾರಿ ಕಚೇರಿಗಳು, ಐಟಿ ಕಂಪೆನಿಗಳು, ಹೋಟೆಲ್ಗಳು, ನಾನಾ ಕಾಮಗಾರಿ ಸಂದರ್ಭದಲ್ಲಿ ಸಾಧ್ಯವಾದಷ್ಟು ಸಂಸ್ಕರಿಸಿದ ನೀರನ್ನು ಬಳಸಬೇಕು.
- ಪ್ರತಿಯೊಬ್ಬರೂ ನೀರಿನ ಮಿತಬಳಕೆಗೆ ಆದ್ಯತೆ ನೀಡಬೇಕು. ಇದರಿಂದ ಕುಡಿಯುವ ನೀರಿನ ಸಮಸ್ಯೆ ನಿಯಂತ್ರಿಸಬಹುದಾಗಿದೆ.
- ಕಾಮಗಾರಿಗಳಿಗೆ ಸಂಸ್ಕರಿಸಿದ ನೀರನ್ನು ಬಳಸುವುದರಿಂದ ನೀರು ಪೋಲಾಗುವುದನ್ನು ನಿಯಂತ್ರಿಸಬಹುದಾಗಿದೆ.
- ಕುಡಿಯುವ ನೀರಿಗೆ ಆದ್ಯತೆ ನೀಡಿ, ಗೃಹೋಪಯೋಗಿ ಕೆಲಸಗಳಿಗೆ ಅನಗತ್ಯವಾಗಿ ನೀರನ್ನು ವ್ಯಯ ಮಾಡಬೇಡಿ.
- ‘ನೀರನ್ನು ಉಳಿಸಿ, ಬೆಂಗಳೂರು ಉಳಿಸಿ’ ಎಂಬ ಜಾಗೃತಿ ಜಾಥಾ ಹಮ್ಮಿಕೊಳ್ಳಲು ಜಲಮಂಡಳಿ ತೀರ್ಮಾನಿಸಿದೆ.
“ಕಾಮಗಾರಿಗಳಿಗೆ ಸಂಸ್ಕರಿಸಿದ ನೀರನ್ನೇ ಬಳಕೆ ಮಾಡಬೇಕೆಂಬ ನಿಯಮವನ್ನು ಕೆಲ ಗುತ್ತಿಗೆದಾರರು ಪಾಲಿಸುತ್ತಿಲ್ಲ. ಬಹುತೇಕ ಸಂದರ್ಭಗಳಲ್ಲಿ ಟ್ಯಾಂಕರ್ ಮೂಲಕ ಬೋರ್ವೆಲ್ ಹಾಗೂ ಕೆರೆ ನೀರನ್ನೇ ತರಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೈಗಾರಿಕಾ ಕೇಂದ್ರಗಳಲ್ಲಿ ಅವಶ್ಯಕತೆಯಿರುವ ಕುಡಿಯುವ ನೀರಿಗೆ ಕಾವೇರಿ ನೀರನ್ನು ಸರಬರಾಜು ಮಾಡುತ್ತೇವೆ” ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಫೆಬ್ರುವರಿಯಲ್ಲಿಯೇ ಆವರಿಸಿದೆ ಏಪ್ರಿಲ್ ತಿಂಗಳಿನ ಬೇಸಿಗೆ ಬೇಗೆ
ಕಾವೇರಿ 6ನೇ ಹಂತದ ಯೋಜನೆ
ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಯ ಪಟ್ಟಣಗಳ ಕೇಂದ್ರ ಭಾಗಕ್ಕೆ ಪ್ರತಿನಿತ್ಯ 500 ದಶಲಕ್ಷ ಲೀಟರ್ ನೀರು ಪೂರೈಸಲು ಬೆಂಗಳೂರು ಜಲಮಂಡಳಿ ಕಾವೇರಿ 6ನೇ ಹಂತದ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಸಜ್ಜಾಗಿದೆ.
ಕಾವೇರಿ ನೀರು ಶಿವನಸಮುದ್ರದಿಂದ ತೊರೆಕಾಡನಹಳ್ಳಿಗೆ ಬರಲಿದ್ದು, ಅಲ್ಲಿ ಸಂಸ್ಕರಣೆಯಾಗುತ್ತದೆ. ಅಲ್ಲಿಂದ ಪಂಪಿಂಗ್ ಸ್ಟೇಷನ್ ಮೂಲಕ ಹೊರ ವರ್ತುಲ ರಸ್ತೆ, ನೈಸ್ ರಸ್ತೆಗಳ ಮೂಲಕ ಪಟ್ಟಣಗಳಿಗೆ 6ನೇ ಹಂತದಲ್ಲಿ ಕಾವೇರಿ ನೀರು ಪೂರೈಸಲು ಯೋಜಿಸಲಾಗಿದೆ.
ಕಾವೇರಿ 6ನೇ ಹಂತದ ಯೋಜನೆ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು, ಹಣದ ಹೊಂದಾಣಿಕೆಯಾಗಿ ಯೋಜನೆ ಆರಂಭವಾಗಲು ಇನ್ನೂ ಒಂದು ವರ್ಷ ಬೇಕಾಗುತ್ತದೆ. ಅದಾದ ಮೇಲೆ ಕನಿಷ್ಠ ಮೂರು ವರ್ಷ ಕಾಮಗಾರಿ ನಡೆಯುತ್ತದೆ ಎಂದು ಹೇಳಲಾಗಿದೆ.