ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶುರು ಮಾಡುವ ಬಗ್ಗೆ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಆದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಡಾ. ಪುರುಷೋತ್ತಮ ಬಿಳಿಮಲೆ ಅವರು ಈ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅದಕ್ಕೆ ಕಾರಣಗಳೇನು ಎಂದು ಈ ದಿನ.ಕಾಮ್‌ಗೆ ನೀಡಿದ ಈ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ
“ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಾಗಲೂ ಸರಿಯಾದ ತಯಾರಿ ಮಾಡದೆಯೇ ಜಾರಿಗೆ ತಂದರು. ಅದು ಪಾರ್ಷಿಕ ಯಶಸ್ಸನ್ನೂ ಕಂಡಿಲ್ಲ. 18,19ನೇ ಶಿಫಾರಸ್ಸುಗಳು ತೀರಾ ಕೆಟ್ಟದಾಗಿಲ್ಲ. ಉದಾ ಬಹುಭಾಷಾ ಪ್ರದೇಶದಲ್ಲಿ ರಾಜ್ಯ ಭಾಷೆಯಲ್ಲಿ ಹೇಳಿಕೊಡುವಾಗ ಪ್ರಾದೇಶಿಕ ಭಾಷೆ ಬಳಸಬೇಕು, ತೀರಾ ಅಗತ್ಯವಾದರೆ ಮನೆ ಭಾಷೆಯನ್ನು ಬಳಸಿಕೊಳ್ಳಬೇಕು ಎಂದಿದೆ. ಆದರೆ, ಎನ್‌ಇಪಿ ಜಾರಿಗೆ ತರುವಾಗ ಇದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೇ ಗಡಿಬಿಡಿಯಲ್ಲಿ ಅನುಷ್ಠಾನಕ್ಕೆ ತರಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಪ್ರಯೋಗ ಮಾಡುವಾಗ, ಹೊಸ ವಿಷಯವನ್ನು ಅನುಷ್ಠಾನ ಮಾಡುವಾಗ ಗಂಭೀರವಾದ, ಸಾಕಷ್ಟು ಸುದೀರ್ಘ ತಯಾರಿಯನ್ನು ಶಿಕ್ಷಣ ತಜ್ಞ ಅಥವಾ ಶಿಕ್ಷಕನಾಗಿ ನಾನು ನಿರೀಕ್ಷೆ ಮಾಡ್ತೇನೆ. ಹೊಸ ಶಿಕ್ಷಣ ನೀತಿಯಲ್ಲಿ ಮೂರು ವರ್ಷಗಳ ತಯಾರಿ ಮಾಡಬೇಕು ಎಂದಿದೆ. ಅದನ್ನು ಯಾರೂ ಗಮನಿಸಿಯೇ ಇಲ್ಲ. ಕನ್ನಡ ಶಾಲೆಗಳು ಉಳಿಯಬೇಕಿದ್ರೆ ಇಂಗ್ಲಿಷ್ ಮಾಧ್ಯಮ ಶುರು ಮಾಡಲೇಬೇಕು ಎಂಬುದು ಶಿಕ್ಷಣ ಸಚಿವರ ಕಳಕಳಿ. ಆದರೆ, ಜಗತ್ತಿನ ಯಾವುದೇ ಭಾಷಾ ಶಾಸ್ತ್ರಜ್ಞ ಇದುವರೆಗೆ “ತಾಯಿ ನುಡಿಯಲ್ಲಿ ಶಿಕ್ಷಣ ಕೊಡುವ ಅಗತ್ಯ ಇಲ್ಲ” ಎಂದು ಹೇಳಿರುವುದು ನನ್ನ ಗಮನಕ್ಕೆ ಬಂದಿಲ್ಲ. ಕೆಲವು ರಾಷ್ಟ್ರಗಳಲ್ಲಿ ನಾನು ಇದನ್ನು ಗಮನಿಸಿದ್ದೇನೆ. ಜಪಾನ್, ಚೀನಾದ ಕೆಲವು ಹಳ್ಳಿ, ದಕ್ಷಿಣ ಆಫ್ರಿಕ, ಅಮೆರಿಕದ ಕೆಲವು ಐಲ್ಯಾಂಡ್‌ಗಳಲ್ಲಿ ನೋಡಿದ್ದೇವೆ, ಅಲ್ಲಿನ ಬುಡಕಟ್ಟು ಭಾಷೆಯಲ್ಲಿಯೇ ಕಲಿಸುತ್ತಾರೆ. ಐದನೇ ತರಗತಿಯವರೆಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಲಾಗುತ್ತಿದೆ. ವಿಶ್ವಸಂಸ್ಥೆಯ ಶಿಫಾರಸುಗಳು ಅದೇ ಆಗಿವೆ.
ಮಾತೃಭಾಷೆ ಎಂದ ತಕ್ಷಣ ಇಲ್ಲೊಂದು ಸಮಸ್ಯೆ ಇದೆ. ಕರ್ನಾಟಕ ಒಂದರಲ್ಲಿಯೇ 230 ಮಾತೃಭಾಷೆಗಳಿವೆ. ಹಾಗಾಗಿ ಪ್ರಾಯೋಗಿಕವಾಗಿ ಅದು ಕಷ್ಟ. ಹಿಂದಿನ ವಿದ್ವಾಂಸರು ರಾಜ್ಯಭಾಷೆ ಅಂತ ಇಟ್ಟುಕೊಂಡರು. ಕರ್ನಾಟಕದ ಅಧಿಕೃತ ರಾಜ್ಯ ಭಾಷೆ ಕನ್ನಡ ಆಗಿರುವ ಕಾರಣ ಅದರಲ್ಲಿ ಶಿಕ್ಷಣ ನೀಡುವುದು ಸರಿಯಾದ ತೀರ್ಮಾನ. ಶಾಲೆ ಮನೆಯ ವಿಸ್ತರಣೆ. ಒಂದನೇ ಎರಡನೇ ತರಗತಿಯ ಅಧ್ಯಾಪಕ ಮನೆಯಲ್ಲಿರುವ ಅಮ್ಮನ ಇನ್ನೊಂದು ರೂಪವಾಗಿ ಕೆಲಸ ಮಾಡ್ತಾರೆ. ಇಷ್ಟೆಲ್ಲ ಇದ್ದಾಗ್ಯೂ ನಾವು ಐದನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಪಾಠ ಮಾಡುವ ವಿಧಾನ, ವಿದೇಶದಲ್ಲಿ ಮಾತೃ ಭಾಷೆಗಳನ್ನು ಕಲಿಸುವುದಕ್ಕೆ ಹೋಲಿಸಿದರೆ ಅರ್ಧ ಶತಮಾನ ಹಿಂದೆ ಇದ್ದೇವೆ.
ಕನ್ನಡ ಸಾಕಷ್ಟು ಬದಲಾಗಿದೆ. 21ನೇ ಶತಮಾನದ ಎರಡನೇ ದಶಕಕ್ಕೆ ಬರುವಾಗ ಕನ್ನಡ ಸಾಕಷ್ಟು ಬದಲಾಗಿದೆ. ಬದಲಾದ ಕನ್ನಡದ ಸಾಧ್ಯತೆಗಳನ್ನು ಪರಿಶೀಲಿಸಿ ಹೊಸ ಪಠ್ಯಕ್ರಮ ರೂಪಿಸಿ ತರಬೇಕು. ವಿದ್ವಾಂಸರು ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೂ ಕೂಡ ಅದನ್ನು ಶಾಲೆಗಳಲ್ಲಿ ಅನುಷ್ಠಾನಕ್ಕೆ ತರುವಾಗ ತರಬೇತಿ ಹೊಂದಿದ ಶಿಕ್ಷಕರಿಲ್ಲ, ಬಹುಭಾಷಿಕ ಪ್ರದೇಶಗಳಲ್ಲಿ ಒಂದು ಭಾಷೆಯನ್ನು ಹೇಳಿಕೊಡುವಾಗ ಇತರ ಭಾಷೆಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಶಿಕ್ಷಕರಿಗೆ ತಿಳಿವಳಿಕೆ ಇಲ್ಲ. ಇಂತಹ ನೂರಾರು ಸಮಸ್ಯೆಗಳಿವೆ. ಮೂಲಭೂತ ಸೌಕರ್ಯಗಳಿಲ್ಲ. ಕಟ್ಟಡ, ಬೆಂಚು, ನೀರು, ವಿದ್ಯುತ್, ಟಾಯ್ಲೆಟ್ ಇಲ್ಲ. ಒಂದು ರಾಜ್ಯ ಸರ್ಕಾರ ಮುಖ್ಯವಾಗಿ ಮಾಡಬೇಕಿರೋದು ರಾಜ್ಯ ಭಾಷೆಯಲ್ಲಿ ಶಿಕ್ಷಣ ನೀಡುವ ಶಾಲೆಗಳ ಅಭಿವೃದ್ಧಿ. ಮೂಲಸೌಕರ್ಯ ಇಲ್ಲದಿದ್ದರೆ, ಬೀಳುತ್ತಿರುವ ಶಾಲೆಗೆ ಯಾವ ಪೋಷಕರೂ ಮಕ್ಕಳನ್ನು ಕಳಿಸಲು ತಯಾರಿರುವುದಿಲ್ಲ. ಈ ಎಲ್ಲಾ ಸಮಸ್ಯೆಗಳ ಮಧ್ಯೆ ಕನ್ನಡ ಮಾಧ್ಯಮವೇ ಸೊರಗುತ್ತಿದೆ. ಇದರ ನಡುವೆ ಇಂಗ್ಲಿಷ್ ಮಾಧ್ಯಮ ತರಲು ಶಿಕ್ಷಣ ಸಚಿವರು ಹೊರಟಿದ್ದಾರೆ. ಅದಕ್ಕೆ ಎಷ್ಟು ತಯಾರಿ ಆಗಿದೆ ಎಂಬ ಬಗ್ಗೆ ನನಗೆ ಸ್ಪಷ್ಟ ತಿಳಿವಳಿಕೆ ಇಲ್ಲ. ಆದರೆ, ಇಂಗ್ಲಿಷ್ ಮಾಧ್ಯಮ ತರುವಾಗ ಸಾಮಾನ್ಯವಾಗಿ ಕನ್ನಡ ಮಾಧ್ಯಮ ಹೇಗೆ ನಡೆಯುತ್ತಿದೆ ಎಂದು ತೌಲನಿಕವಾಗಿ ನೋಡಿದರೆ ಸಾಕು; ಬಹಳ ಬೇಸರ ಕೊಡುವ ಚಿತ್ರಣ ಸಿಗುತ್ತದೆ.
ಕನ್ನಡವೇ ಅರ್ಧ ಶತಮಾನ ಹಿಂದಿದೆ. ಇನ್ನು ಇಂಗ್ಲಿಷ್ ಹೇಳಿಕೊಡುವವರು ಯಾರು? ಇಂಗ್ಲಿಷ್ ಹೇಳಿಕೊಡುವ ಅಧ್ಯಾಪಕರಿಗೆ ಯಾವ ತರಬೇತಿ ಯಾರು ಕೊಡುತ್ತೇವೆ? ಈಗ ಒಂದು ವಾದ ಏನೆಂದರೆ ಇಂಗ್ಲಿಷ್ ಕಲಿತ ತಕ್ಷಣ ನಮ್ಮವರಿಗೆ ಕೆಲಸ ಸಿಗುತ್ತದೆ. ಶೋಷಣೆಗಳಿಂದ ಪಾರಾಗುತ್ತೇವೆ ಎಂಬುದು ಸರಳವಾದ ವಾದ. ಇಂಗ್ಲಿಷ್ ಮೀಡಿಯಂನಲ್ಲಿ ಓದಿದವರಲ್ಲಿ ನಿರುದ್ಯೋಗ ಇಲ್ವಾ? 42% ಜನರಿಗೆ ಉದ್ಯೋಗ ಸಿಗುತ್ತಿಲ್ಲ. ಅದರಲ್ಲಿ 38% ಇಂಗ್ಲಿಷ್ ಮೀಡಿಯಂನಲ್ಲಿ ಓದಿದವರು.
ಇದನ್ನೂ ಓದಿ ಸಂದರ್ಶನ | ಜ್ಞಾನದ ಕಟ್ಟುವಿಕೆ, ಪಸರಿಸುವಿಕೆ ಎರಡೂ ಪರಿಣಾಮಕಾರಿಯಾಗಿ ಕನ್ನಡದಲ್ಲಿ ಆಗಬೇಕಾಗಿದೆ: ವಸಂತ ಶೆಟ್ಟಿ
ಇನ್ನು ಶೋಷಣೆಗಳಿಂದ ಪಾರಾಗುತ್ತೇವೆ ಎಂಬ ವಾದ ಇದ್ದಾಗ ಇಂಗ್ಲಿಷನ್ನು ಶೋಷಣಾ ರಹಿಕ ಭಾಷೆ ಎಂದು ಗ್ರಹಿಸುತ್ತೇವೆ. ಅಮೆರಿಕದಲ್ಲಿ ನೀಗ್ರೋಗಳೂ, ಬಿಳಿಯರೂ ಇಂಗ್ಲಿಷ್ ಮಾತಾಡುತ್ತಾರೆ. ಆದರೆ, ಅಬ್ರಹಾಂ ಲಿಂಕನ್ ಅಂತವರು ಹೋರಾಟ ನಡೆಸಿದ ನಂತರವೂ ಭಾಷಾ ತಾರತಮ್ಯ ಹೇಗಿದೆ ಎಂಬುದು ನಮಗೆ ಗೊತ್ತಿದೆ. ಪ್ಯಾರಿಸ್‌ನಲ್ಲಿ ನೈಜೀರಿಯಾದ ಕಪ್ಪು ಜನರು ಪ್ರೆಂಚ್ ಮಾತನಾಡುತ್ತಾರೆ. ಆದರೆ, ಫ್ರೆಂಚರು ಅವರನ್ನು ಸಮಾನವಾಗಿ ಸ್ವೀಕರಿಸುವುದಿಲ್ಲ. ಹಾಗಾಗಿ ಇಂಗ್ಲಿಷ್ ಎಂದ ತಕ್ಷಣ ಸಮಾನತೆ ಎಂಬುದು ಭ್ರಮೆ. ಇಂಗ್ಲಿಷಿನ ಒಳಗೆ ಕೂಡಾ ತಾರತಮ್ಯ ಇದೆ. ನಮ್ಮ ಮಕ್ಕಳು ಇಂಗ್ಲಿಷ್ ಕಲಿಯುವಾಗ, ನೂರಾರು ವರ್ಷಗಳಿಂದ ಇಂಗ್ಲಿಷ್ ಕಲಿತವರು ಎಲ್ಲಿರುತ್ತಾರೆ? ಬಹಳ ಮುಂದೆ ಹೋಗಿರುತ್ತಾರೆ. ಶೋಷಣೆ ಹಾಗೇ ಮುಂದುವರಿಯುತ್ತದೆ.ಶೋಷಣೆ ಬದಲಾಗಬೇಕಿದ್ದರೆ ಭಾಷಿಕ ಬದಲಾವಣೆಯಿಂದ ಅಸಾಧ್ಯ. ಅದಕ್ಕಾಗಿ ಅಂಬೇಡ್ಕರ್ ಹೇಳಿದಂತೆ ಆರ್ಥಿಕ -ಸಾಮಾಜಿಕ ಬದಲಾವಣೆಗೆ ಹೋರಾಟ ಮಾಡಬೇಕಿದೆ.
ಸರ್ಕಾರ ತೀರ್ಮಾನ ಮಾಡಿಯಾಗಿದೆ. ಅದನ್ನು ಈಡೇರಿಸಲು ಸಂಪೂರ್ಣ ತಯಾರಿ ಇಲ್ಲದಿರುವುದರಿಂದ ಮತ್ತು ಕರ್ನಾಟಕದ ಸಮಾಜ ಇನ್ನೂ ಅದಕ್ಕೆ ತಯಾರಾಗದೇ ಇರುವುದರಿಂದ ನಿರೀಕ್ಷಿತ ಫಲಿತಾಂಶ ಪಡೆಯಲು ಕಷ್ಟವಾಗಬಹುದು. ಅದು ಎರಡು, ಮೂರು ವರ್ಷಗಳಲ್ಲಿ ಸ್ಪಷ್ಟವಾಗಲಿದೆ”.
