ʼದಿ ಫೈಲ್‌ʼನ ಸುಳ್ಳು ಆರೋಪ ಮತ್ತು ಮೊಂಡುವಾದದ ಹಿಂದಿನ ಉದ್ದೇಶ ಏನು?

Date:

Advertisements

‘ದಿ ಫೈಲ್‌’ ವೆಬ್‌ತಾಣವು ‘ಈದಿನ’ ಸಂಸ್ಥೆಯ ಕುರಿತಂತೆ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ನಮ್ಮ ಅಧಿಕೃತ ಫೇಸ್‌ಬುಕ್‌ ಪುಟದಲ್ಲಿ ಸ್ಪಷ್ಟೀಕರಣ ನೀಡಿದ್ದೆವು. ಆ ನಂತರವೂ ಅವರು ತಮ್ಮ ದುರುದ್ದೇಶದ ವರದಿಯನ್ನು ಸಮರ್ಥಿಸಿಕೊಂಡು ಬರೆದರು. ನಮ್ಮ ಓದುಗರಿಗೂ ಈ ಕುರಿತ ವಿವರಣೆಯನ್ನು ನೀಡುವುದು ಜವಾಬ್ದಾರಿಯಾದ್ದರಿಂದ, ಈದಿನ.ಕಾಮ್‌ ಪ್ರತಿಕ್ರಿಯೆಯನ್ನು ಇಲ್ಲಿ ನೀಡಲಾಗುತ್ತಿದೆ

ದಿ ಫೈಲ್‌ ವೆಬ್‌ಸೈಟಿನಲ್ಲಿ ನಮ್ಮ ಸಮೀಕ್ಷೆಗೆ ಸಂಬಂಧಿಸಿ ತಪ್ಪು ಮಾಹಿತಿ, ತಪ್ಪು ಗ್ರಹಿಕೆ ಮತ್ತು ಊಹಾಪೋಹಗಳ ಆಧಾರದಲ್ಲಿ ಕೆಸರೆರಚುವಂಥ ಸುದ್ದಿಯೊಂದನ್ನು ನ.7ರಂದು ಪ್ರಕಟಿಸಲಾಗಿತ್ತು. ನಾವು ಅದಕ್ಕೆ ವಿವರವಾದ ಸಾರ್ವಜನಿಕ ಸ್ಪಷ್ಟೀಕರಣ ಕೊಟ್ಟು ವಾಸ್ತವಾಂಶಗಳನ್ನು ಗೌರವಯುತವಾಗಿ ಮುಂದಿಟ್ಟಿದ್ದೆವು. ವಾಸ್ತವಾಂಶಗಳು ತಿಳಿದ ನಂತರ ತಮ್ಮ ವರದಿಯಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ನಿಜವಾದ ಮಾಧ್ಯಮ ಧರ್ಮ. ಆದರೆ ʼದಿ ಫೈಲ್‌ʼ ಅಂಥಾ ಯಾವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡದೆ ತನ್ನ ಪೂರ್ವಗ್ರಹ ಪೀಡಿತ ಆರೋಪಗಳಿಗೆ ತಾನು ಬದ್ಧ ಎಂದು ಮತ್ತೆ ಘೋಷಿಸಿಕೊಂಡಿದ್ದು ಅತ್ಯಂತ ಖಂಡನಾರ್ಹ ಸಂಗತಿ. ಹೀಗಾಗಿ ಮತ್ತೊಮ್ಮೆ ಬರೆಯಬೇಕಾಗಿ ಬಂದಿದೆ.

ತಾವು ಭಾರೀ ಹಗರಣವನ್ನು ಪತ್ತೆ ಹಚ್ಚಿದ್ದೇವೆ ಎಂಬಂತೆ ಬಿಂಬಿಸಿಕೊಂಡು ಈದಿನ.ಕಾಂ ಮೇಲೆ ಕೆಸರೆರಚುತ್ತಿರುವ ದಿ ಫೈಲ್‌ನ ವರದಿ ಮುಖ್ಯವಾಗಿ ಎರಡು ತಿರುಚಿದ ಸತ್ಯಗಳನ್ನು ಆಧರಿಸಿದೆ.

Advertisements
  1. ಈ ದಿನ.ಕಾಂ ಜುಲೈನಲ್ಲೇ ಸಮೀಕ್ಷೆಯ ಫಲಿತಾಂಶ ಪ್ರಕಟಿಸಿ ಅದೇ ವಿಷಯಕ್ಕೆ ಈಗ ಸರ್ಕಾರದಿಂದ ಹಣ ಪಡೆದುಕೊಳ್ಳುತ್ತಿದೆ ಎಂಬುದು ಮೊದಲ ವಾದ. ವಾಸ್ತವದಲ್ಲಿ ನಾವು ಜುಲೈನಲ್ಲಿ ಪ್ರಕಟಿಸಿದ್ದು ನಮ್ಮ ಯೋಜನೆಯ ಭಾಗವಾಗಿ ನಾವು ರೆಗ್ಯುಲರ್‌ ಆಗಿ ನಡೆಸುವ ಮಾಸಿಕ ಸಮೀಕ್ಷೆಯ ಭಾಗವಷ್ಟೆ. ಬಹುತೇಕ ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳು ಈಗಿನ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಭಾರೀ ಅಪಪ್ರಚಾರದ ಹುಯಿಲೆಬ್ಬಿಸಿ ಜನರು ಈ ಯೋಜನೆಯ ವಿರುದ್ಧ ಇದ್ದಾರೆ ಎಂಬಂತೆ ಬಿಂಬಿಸುತ್ತಿದ್ದ ಸಂದರ್ಭ ಅದು. ಕೆಲವೇ ತಿಂಗಳುಗಳ ಹಿಂದೆ ನಡೆದ ಇಂಥಾ ಜನವಿರೋಧಿ ಅಪಪ್ರಚಾರದ ನೆನಪು ಇನ್ನೂ ಹಸಿಯಾಗಿದೆ. ಆ ಸಂದರ್ಭದಲ್ಲಿ ಈ ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯದ ಜನತೆ, ಮುಖ್ಯವಾಗಿ ಫಲಾನುಭವಿಗಳಾದ ಬಡಜನತೆ ಯಾವ ರೀತಿಯ ಅಭಿಪ್ರಾಯ ಹೊಂದಿದ್ದಾರೆ, ನಿಜಕ್ಕೂ ಯೋಜನೆಗಳನ್ನು ವಿರೋಧಿಸುತ್ತಿದ್ದಾರಾ ಎಂಬುದನ್ನು ನೇರವಾಗಿ ಅರಿಯುವುದು ಸಮೀಕ್ಷೆಯ ಉದ್ದೇಶವಾಗಿತ್ತು. ಆಗಿನ್ನೂ ಯೋಜನೆಗಳು ಜಾರಿಯಾಗಿರಲಿಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು.

ಆದರೆ, ದಿ ಫೈಲ್ ನ ಮೊದಲ ವರದಿಯಲ್ಲಿ ಜುಲೈನಲ್ಲಿ ಈದಿನ.ಕಾಂ ನಡೆಸಿದ ಸಮೀಕ್ಷೆ ಸರ್ಕಾರಕ್ಕಾಗಿ ನಡೆಸಿದ್ದು ಅದನ್ನು ತಮ್ಮದೇ ಸ್ವಂತ ಸಮೀಕ್ಷೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂಬ ಕ್ಷುಲ್ಲಕ ಆಧಾರರಹಿತ ಆರೋಪ ಮಾಡಲಾಗಿದೆ. ಇನ್ನೂ ಮುಂದುವರೆದು ಸರ್ಕಾರದ ಅಧಿಸೂಚನೆಗೂ ಮೊದಲು ಜುಲೈನಲ್ಲಿ ಬಿಡುಗಡೆ ಮಾಡಿದ ಸಮೀಕ್ಷೆಗೆ ಸರ್ಕಾರದಿಂದ ಹಣ ಪಡೆದಿದ್ದನ್ನು ಈದಿನ.ಕಾಂ ಮುಚ್ಚಿಟ್ಟಿದೆ ಎಂದೂ ಆರೋಪಿಸಲಾಗಿದೆ.

ಸೆಪ್ಟೆಂಬರ್ 13 ರ ಸರ್ಕಾರದ ಅಧಿಸೂಚನೆಯಲ್ಲಿರುವ ಸಮೀಕ್ಷೆಯನ್ನು (ಇದು ಅನುಷ್ಠಾನ ಕುರಿತ ಸಮೀಕ್ಷೆ) ಜುಲೈನಲ್ಲಿ ನಡೆಸಲು (ಇದು ಗ್ಯಾರಂಟಿಗಳ ಬಗ್ಗೆ ಜನಾಭಿಪ್ರಾಯದ ಸಮೀಕ್ಷೆ) ಸಾಧ್ಯವೇ ಇಲ್ಲವೆಂಬುದು ಎಂಥವರಿಗೂ ಗೊತ್ತಾಗುವ ವಿಷಯ.

ಜುಲೈನಲ್ಲಿ ನಡೆದಿದ್ದು 3,000 ಸ್ಯಾಂಪಲ್‌ ಸೈಜಿನ, 45 ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ. ಅದರ ಸಂಪೂರ್ಣ ವಿವರವನ್ನು ಪ್ರಕಟಿಸಬೇಕೆಂದು ಸಂಪಾದಕೀಯ ಬಳಗದ ತೀರ್ಮಾನ ಆಯಿತು. ಅದರಂತೆ ಪ್ರಕಟಣೆಯನ್ನೂ ಮಾಡಿದ್ದೇವೆ. ಪತ್ರಿಕಾ ಹೇಳಿಕೆಯನ್ನೂ ಕೊಟ್ಟಿದ್ದೇವೆ.

ಹೀಗಿರುವಾಗ, ಜುಲೈನಲ್ಲಿ ಮಾಧ್ಯಮ ಜವಾಬ್ದಾರಿಯ ಮತ್ತು ಜನಪರತೆಯ ಭಾಗವಾಗಿ ನಾವು ನಡೆಸಿದ ನಮ್ಮದೇ ಸಮೀಕ್ಷೆಯ ಬಗ್ಗೆ ಹೀಗೆ ಅಪಪ್ರಚಾರ ಮಾಡಿರುವ ದಿ ಫೈಲ್ ನವರ ಉದ್ದೇಶ ಏನು?

ಸೆಪ್ಟೆಂಬರಿನಲ್ಲಿ ಮಾಡಿದ್ದು ನಾವು ತೆಗೆದುಕೊಂಡ ಒಂದು ವೃತ್ತಿಪರ ಕೆಲಸ ಮತ್ತು ಅದನ್ನು ಸರ್ಕಾರಕ್ಕಾಗಿ ಮಾಡಿದ್ದು, 25,000 ಸ್ಯಾಂಪಲ್‌ ಸೈಜ್‌ ಮತ್ತು 112 ವಿಧಾನಸಭಾ ಕ್ಷೇತ್ರಗಳದ್ದು. ಇದನ್ನು ಸಲ್ಲಿಸಬೇಕಿರೋದು ಸರ್ಕಾರಕ್ಕೆ, ಯಾವ ರೀತಿ ಒಪ್ಪಂದವಾಗಿದೆಯೋ ಆ ರೀತಿ.

ನಮ್ಮ ಸ್ಪಷ್ಟೀಕರಣ ನೋಡಿದ ಮೇಲೂ ನಮ್ಮ ವರದಿಗೆ ಬದ್ಧಎಂಬ ಶೀರ್ಷಿಕೆಯಲ್ಲಿ ನ. 7ರಂದು ಪ್ರಕಟವಾದ ಎರಡನೇ ವರದಿಯಲ್ಲಿ ನಾವು ಏನೂ ಆರೋಪಿಸಿಲ್ಲ, ಸರ್ಕಾರದ ಅಧಿಸೂಚನೆಗೂ ಮೊದಲೇ ಸಮೀಕ್ಷೆ ವರದಿ ಬಿಡುಗಡೆಯಾಗಿತ್ತು ಎಂದು ದಿನಾಂಕ ಸಹಿತ ಉಲ್ಲೇಖಿಸಿದ್ದೇವೆ ಅಷ್ಟೇಎಂದು ಬರೆದು ಸರ್ಕಾರ ಕೇಳಿರುವ ಸಮೀಕ್ಷೆ ಮತ್ತು ಜುಲೈ ತಿಂಗಳಿನ ನಮ್ಮದೇ ಸಮೀಕ್ಷೆ ಎರಡೂ ಒಂದೇ ಅನ್ನುವಂತೆ ಬಿಂಬಿಸಿ ಮತ್ತೆ ತಮ್ಮ ಅಜ್ಞಾನವನ್ನೂ, ದುರುದ್ದೇಶವನ್ನೂ ದಿ ಫೈಲ್ ನವರು ತೋರಿಸಿಕೊಂಡಿದ್ದಾರೆ.

ಹಾಗೆ ಹೇಳುವ ಅವರು ಜುಲೈ ತಿಂಗಳ ಸಮೀಕ್ಷೆ ಈದಿನ.ಕಾಂ ನ ಸ್ವಂತ ಸಮೀಕ್ಷೆ ಎಂದು ಅನಿವಾರ್ಯವಾಗಿ ಒಪ್ಪುತ್ತಾ ಆದರೆ ಸರ್ಕಾರದ ಪರವಾಗಿ ಸಮೀಕ್ಷೆ ಮಾಡುವ ಮುನ್ನವೇ ಸಮೀಕ್ಷೆಯು ಸರ್ಕಾರದ ಪರವಾಗಿತ್ತು. ಗ್ಯಾರಂಟಿಗಳು ಸರ್ಕಾರದ ಪರವಾಗಿ ಇವೆ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದಂತಾಗಲಿಲ್ಲವೆ? ಇದರಿಂದಾಗಿಯೇ ಸರ್ಕಾರ ಅತ್ಯುತ್ಸಾಹದಿಂದ ಸಮೀಕ್ಷೆ ಮಾಡಲು ಸ್ವಯಂಪ್ರೇರಿತವಾಗಿ ಒಂದು ಕೋಟಿ ರೂ ಬಿಡುಗಡೆ 4g ವಿನಾಯಿತಿ ನೀಡಿ ಕೊಟ್ಟಿದೆ ಎಂದು ಸಹಜವಾಗಿ ಸಾರ್ವಜನಿಕ ಅಭಿಪ್ರಾಯ ಮೂಡುತ್ತದೆಎಂಬ ಅತ್ಯಂತ ಕ್ಷುಲ್ಲಕವಾದ ವಾದವನ್ನು ದಿ ಫೈಲ್ ಮುಂದಿಟ್ಟಿದೆ. ಸಾರ್ವಜನಿಕರ ಮುಂದಿಡಲು ಒಂದು ವೇಳೆ ಸರ್ಕಾರವು ಸಮೀಕ್ಷೆ ಮಾಡಿಸುವುದಾದರೆ, ಅದನ್ನು ತನಗೆ ಬೇಕಾದಂತೆ ಮಾಡಿಕೊಡುವವರ ಮೂಲಕ ಮಾಡಿಸಿಕೊಳ್ಳುತ್ತದೆ ಎಂದೇ ಭಾವಿಸೋಣ. ಆದರೆ ತನ್ನ ಅನುಷ್ಠಾನದ ರೀತಿಯಲ್ಲಿ ಇರುವ ಸರಿತಪ್ಪುಗಳನ್ನು ನೋಡಿ ತಿದ್ದಿಕೊಳ್ಳಲು ಮಾಡುವ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡುವವರಿಗೆ ಕೊಡುತ್ತದೆಯಲ್ಲವೇ?

ಈದಿನ.ಕಾಂ ರಾಜ್ಯದ ಬಹುತೇಕ ಮಾಧ್ಯಮಗಳ ವಿರುದ್ದ ದಿಕ್ಕಿನಲ್ಲಿ ನಿಂತು ಗ್ಯಾರಂಟಿಗಳ ಬಗ್ಗೆ ಜನರ ವಿವೇಕ ಏನು ಹೇಳುತ್ತಿದೆ ಎಂಬ ವಾಸ್ತವವನ್ನು ಸಮಾಜದ ಮುಂದಿಟ್ಟಿದ್ದನ್ನು ಸರ್ಕಾರದಿಂದ ಪ್ರಾಜೆಕ್ಟ್ ಪಡೆಯಲು ಮಾಡಿದ ಕಸರತ್ತು ಎಂದು ಬಿಂಬಿಸಲು ಪ್ರಯತ್ನಿಸುವ ಮೂಲಕ ಈದಿನ.ಕಾಂ ನ ವಿಶ್ವಾಸಾರ್ಹತೆಗೆ ಧಕ್ಕೆ ತರಲು ತಾನು ಜನವಿರೋಧಿ ನಿಲುವನ್ನು ತಳೆಯಲೂ ಸಿದ್ಧ ಎಂಬ ಸಂದೇಶವನ್ನು ದಿ ಫೈಲ್ ಸ್ಪಷ್ಟವಾಗಿ ಕೊಟ್ಟಿದೆ.

ನಮ್ಮ ಸಮೀಕ್ಷೆಯಲ್ಲಿ ರಾಜ್ಯದ ನೂರಕ್ಕೆ ನೂರು ಜನ ಗ್ಯಾರಂಟಿಗಳನ್ನು ಒಪ್ಪಿದ್ದಾರೆಂದೇನೂ ಹೇಳಿರಲಿಲ್ಲ. ಯಾವುದೇ ಸಮೀಕ್ಷೆಗೂ ಜನರು ಆ ರೀತಿ ಪ್ರತಿಕ್ರಿಯಿಸುವುದಿಲ್ಲ. ವೈಜ್ಞಾನಿಕವಾದ ಸಮೀಕ್ಷೆಯಿಂದ ಅನುಷ್ಠಾನದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬಹುದೆಂದು ಭಾವಿಸಿದ ಅಧಿಕಾರಿಗಳು ನಮ್ಮೊಡನೆ ಮಾತಾಡಿದರು. ಈದಿನ.ಕಾಮ್‌ ಇಂತಹ ಸಮೀಕ್ಷೆಯನ್ನು ಅನುಷ್ಠಾನದ ಸಂದರ್ಭದಲ್ಲಿ ಮಾಡಿಕೊಡಬಹುದೇ, ಈ ಕುರಿತು ನೀವೊಂದು ಪ್ರಸ್ತಾಪ ಸಲ್ಲಿಸಲು ಸಾಧ್ಯವೇ ಎಂದು ಕೇಳಿದರು. ಅದಕ್ಕೆ ಪ್ರತಿಕ್ರಿಯೆಯಾಗಿ ಈದಿನ.ಕಾಮ್‌ ಒಂದು ಪ್ರಸ್ತಾಪವನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಿತು. ಅದರಾಚೆಗೆ ಸರ್ಕಾರದ ವತಿಯಿಂದಲೇ ಆದೇಶದ ಪ್ರತಿ ಬರುವವರೆಗೆ ಆ ಕಡೆಗೆ ತಲೆಯೂ ಹಾಕಲಿಲ್ಲ. ಇದನ್ನು ʼಸರ್ಕಾರದ ಬೆನ್ನು ಬಿದ್ದಿದ್ದ ಈದಿನ.ಕಾಮ್‌ʼ ಎಂದು ಫೈಲ್‌ ವರದಿ ಮಾಡುತ್ತದೆಂದರೆ, ಅವರ ದುರುದ್ದೇಶ ಸ್ಪಷ್ಟ.

ಒಂದು ಜನಪರ ಮಾಧ್ಯಮವಾಗಿ ಜನರ ಅಭಿಪ್ರಾಯ ಸಂಗ್ರಹಿಸಿ ಸಮಾಜದ ಮುಂದಿಡುವುದು ನಮ್ಮ ಆದ್ಯ ಕರ್ತವ್ಯ ಎಂದು ಭಾವಿಸುತ್ತೇವೆ. ಇಂಥಾ ಸಮೀಕ್ಷೆಗಳನ್ನು ಇನ್ನು ಮುಂದೆಯೂ ನಿರಂತರವಾಗಿ ನಡೆಸುತ್ತೇವೆ.

ಆದರೆ ಈಗ ನಡೆಸುತ್ತಿರುವ ಸಮೀಕ್ಷೆಯ ಸಂದರ್ಭ ಮತ್ತು ಉದ್ದೇಶ ತೀರಾ ಭಿನ್ನ. ಗ್ಯಾರಂಟಿ ಯೋಜನೆಗಳು ಜಾರಿಯಾಗುತ್ತಿರುವ ಸಂದರ್ಭದಲ್ಲಿನ ಸಾಧಕ ಬಾಧಕಗಳು ಮತ್ತು ಎಡರು ತೊಡರುಗಳನ್ನು ಅರಿಯುವುದು ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜನರ ಅಭಿಪ್ರಾಯಗಳನ್ನು ಸಂಗ್ರಹಿಸುವುದಾಗಿದೆ. ಈ ವಿಸ್ತೃತ ಸಮೀಕ್ಷೆಯ ಪ್ರಮಾಣ 25,000 ಅಭಿಪ್ರಾಯದ ಸ್ಯಾಂಪಲ್‌ಗಳು, ಎಲ್ಲಾ 112 ಕ್ಷೇತ್ರಗಳಲ್ಲಿ ತಲಾ 10 – 12 ಬೂತ್‌ಗಳಲ್ಲಿ ಸರಾಸರಿ 25 ಜನರ ಸಮೀಕ್ಷೆ ನಡೆಸಬೇಕು. ಅಂದರೆ ರಾಜ್ಯದ ಸುಮಾರು 2,500 ಸ್ಥಳಗಳಲ್ಲಿ ಸಮೀಕ್ಷೆ ನಡೆಯಬೇಕು. ಈ ಸಮೀಕ್ಷೆಗೆ ಸಾಫ್ಟ್‌ವೇರ್‌ ವೆಚ್ಚ, ಡಾಟಾ ಅನಲಿಸಿಸ್‌, ಸಿಬ್ಬಂದಿ ವೇತನ, ಸಾವಿರಾರು ಕಾರ್ಯಕರ್ತರು ಕ್ಷೇತ್ರಗಳಲ್ಲಿ ಓಡಾಡುವ ಖರ್ಚು, ಗೌರವಧನ ಭರಿಸಬೇಕಾಗುತ್ತದೆ. ಇದಕ್ಕಾಗಿ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ತಲಾ ರೂ. 25 ಲಕ್ಷ ನಿಗದಿಯಾಗಿದೆ.

ಈ ಸಮೀಕ್ಷೆಯನ್ನು ನಾಲ್ಕು ತಿಂಗಳಿನಲ್ಲಿ ಪೂರೈಸಬೇಕು. ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ, ಲಂಚ ಕೊಡಬೇಕಾದ ಒತ್ತಡಗಳಿಲ್ಲದೆ ನೇರವಾಗಿ ಫಲಾನುಭವಿಗಳಿಗೆ ತಲುಪುವ ಈ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕವಾಗಿ ನಡೆಯುತ್ತಿರುವ ಈ ಸಮೀಕ್ಷೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಈದಿನ ತಂಡ ಒಂದು ಸಾರ್ಥಕ ಕೆಲಸ ಮಾಡುತ್ತಿದೆ.

ಹೀಗೆ ಸರ್ಕಾರದ ಕೋರಿಕೆಯ ಮೇರೆಗೆ ನಡೆಸುತ್ತಿರುವ ಈ ಸಮೀಕ್ಷೆ ಬೇರೆಯೇ ಎಂಬುದನ್ನು ಸ್ಪಷ್ಟವಾಗಿ ತಿಳಿಯಪಡಿಸಿದ್ದಾಗ್ಯೂ ಇವೆರಡನ್ನು ಮಿಶ್ರಣ ಮಾಡಿ ಅಕ್ರಮ ಹಣ ಗಳಿಸುತ್ತಿದ್ದಾರೆ ಎಂಬಂತೆ ಆರೋಪ ಹೊರೆಸುತ್ತಿರುವುದಾದರೂ ಏಕೆ
? ಒಂದೋ ʼದಿ ಫೈಲ್‌ʼನವರಿಗೆ ಈ ಸಮೀಕ್ಷೆ ಎಂದರೇನು ಎಂಬುದರ ಗಂಧಗಾಳಿಯೂ ಗೊತ್ತಿಲ್ಲದಿರಬಹುದು, ಅಥವಾ ದುಷ್ಟ ಉದ್ದೇಶ ಹೊಂದಿರಬಹುದು.

  1. ಇನ್ನು ನಿಯಮಬಾಹಿರವಾಗಿ ಹಣ ಮಂಜೂರು ಮಾಡಲಾಗಿದೆ ಎಂಬ ಬಗ್ಗೆ. ಈ ಅಂಶದಲ್ಲಿ ದಿ ಫೈಲ್‌ನ ತಿರುಚುವಿಕೆಯಂತೂ ಹಸಿಹಸಿಯಾಗಿದೆ. ಸೆಕ್ಷನ್‌ 4 () ಮತ್ತು 4 (ಜಿ) ಗಳನ್ನು ಕಲಸಿ ಮಂಡಿಸಲಾಗುತ್ತಿದೆ. ಈ ನಿಯಮಾವಳಿಗಳು ಎಂಥಾ ದಡ್ಡನಿಗೂ ಅರ್ಥವಾಗುವಷ್ಟು ಸ್ಪಷ್ಟವಾಗಿದ್ದು ಇಲ್ಲಿ ಗೊಂದಲಕ್ಕೆ ಅವಕಾಶವೇ ಇಲ್ಲ. (ಸರ್ಕಾರಿ ನಿಯಮಾವಳಿಯ ದಾಖಲೆ ಅಡಕದಲ್ಲಿದೆ, ಆಸಕ್ತರು ಗಮನಿಸಬಹುದು). ವಾಸ್ತವದಲ್ಲಿ ಟೆಂಡರ್‌ ಪ್ರಕ್ರಿಯೆಗೆ ವಿನಾಯಿತಿ ಕೊಟ್ಟು ಈ 4 (ಜಿ) ನಿಯಮದಡಿಯಲ್ಲಿ ಹಣ ಮಂಜೂರು ಮಾಡುವುದು ಸರ್ಕಾರಗಳ ದೈನಂದಿನ ವ್ಯವಹಾರ. 4 ಗ್ಯಾರಂಟಿ ಯೋಜನೆಗಳ ಬಗ್ಗೆ ಸಮೀಕ್ಷೆ ಕಾರ್ಯ ನಡೆಸಲು ಎಂ2ಎಂ ಮೀಡಿಯಾ ಕಂಪನಿಗೆ ವಹಿಸಿಕೊಟ್ಟಿದ್ದು ಇದೇ 4(ಜಿ) ನಿಯಮದಡಿಯಲ್ಲಿ. ಇದರಲ್ಲಿ ಯಾವುದೇ ಮುಚ್ಚುಮರೆಯೋ, ಒಳವ್ಯವಹಾರವೋ ಇಲ್ಲ. ಈ ಬಗ್ಗೆ ಸರ್ಕಾರ ಸಾರ್ವಜನಿಕವಾಗಿ ಅಧಿಕೃತ ಆದೇಶ ಹೊರಡಿಸಿದ್ದು ಅದು ಸಾರ್ವಜನಿಕರಿಗೆ ಲಭ್ಯವಿದೆ. ವಾಸ್ತವಗಳನ್ನು ಹೀಗೆ ಹಸಿಹಸಿಯಾಗಿ ತಿರುಚುವುದು ಜನವಿರೋಧಿಗಳು ಮಾಡುವ ಕೆಲಸ. ವಿಷಯ ಇಷ್ಟು ನಿಚ್ಚಳವಾಗಿದ್ದರೂ ಒಂದು ಜನಪರ ಮಾಧ್ಯಮದ ಮೇಲೆ ಕೆಸರೆರಚುವುದು ಅಸಹ್ಯ ಹುಟ್ಟಿಸುತ್ತಿದೆ.

ನಾವು ಸರ್ಕಾರಕ್ಕಾಗಿ ಯಾಕೆ ಸಮೀಕ್ಷೆ ಮಾಡಬೇಕು? ಸರ್ಕಾರದಿಂದ ಹಣ ಪಡೆಯುವುದು ನೈತಿಕವೇ ಎಂಬಂಥ ಪ್ರಶ್ನೆಗಳನ್ನೂ ಕೆಲವು ಸ್ನೇಹಿತರು ಕೇಳುತ್ತಿದ್ದಾರೆ. ಮೇಲೆ ಹೇಳಿದಂತೆ ಸರ್ಕಾರದ ಜನಪರ ಯೋಜನೆಗಳಿಗೆ ಪೂರಕವಾಗಿ ಕೆಲಸ ಮಾಡುವುದು ನಮ್ಮ ಕರ್ತವ್ಯ ಎಂಬುದು ನಮ್ಮ ನಿಲುವು. ಸರ್ಕಾರದಿಂದ ಹಣ ಪಡೆಯುವ ವಿಚಾರ ಹೇಳುವುದಾದರೆ ನಾವು ಮಾಡುತ್ತಿರುವ ಕೆಲಸಕ್ಕೆ ಕನಿಷ್ಠ ಶುಲ್ಕವನ್ನಷ್ಟೇ ಪಡೆದುಕೊಳ್ಳುತ್ತಿದ್ದೇವೆ. ಸಮೀಕ್ಷೆಯ ಕೆಲಸದ ಅಗಾಧತೆ ಅರಿವಿದ್ದವರಿಗೆ ಇದು ಸುಲಭವಾಗಿ ಅರ್ಥವಾಗುತ್ತದೆ. ಹಣ ಗಳಿಸುವುದೇ ಉದ್ದೇಶವಾಗಿದ್ದರೆ ಸಮೀಕ್ಷೆ ನಡೆಸುವ ಕಂಪನಿಗಳ ಹಾಗೆ ಮಾರುಕಟ್ಟೆ ದರವನ್ನು ಪಡೆದುಕೊಳ್ಳಬಹುದಿತ್ತು. ಅದು ನಾವು ಪಡೆಯುತ್ತಿರುವ ಹಣದ ಹತ್ತು ಪಟ್ಟು ಅಧಿಕವಾಗಿರುತ್ತದೆ ಎಂಬುದು ಈ ವ್ಯವಹಾರದ ಜ್ಞಾನ ಇರುವವರಿಗೆ ಗೊತ್ತಿರುವ ಸಂಗತಿ.

ವಿಷಯ ಇಷ್ಟು ಸರಳ ಮತ್ತು ನೇರವಾಗಿದ್ದರೂ ‘ದಿ ಫೈಲ್‌’ನವರು ವಿಷಯಗಳನ್ನು ಹಸಿಹಸಿಯಾಗಿ ತಿರುಚಿ ಅಪಪ್ರಚಾರಕ್ಕೆ ಇಳಿಯಬಾರದಿತ್ತು.

ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಈ ಜನಪರ ಯೋಜನೆಗಳ ವಿರುದ್ಧ ತಮ್ಮದೇ ರಾಜಕೀಯ ಲೆಕ್ಕಾಚಾರದಿಂದ ಅಪಪ್ರಚಾರಕ್ಕೆ ಇಳಿದಿದ್ದನ್ನು ನಾವು ನೋಡಿದ್ದೇವೆ. ಆದರೆ ಜನಪರ ಮಾಧ್ಯಮ ಎನಿಸಿಕೊಂಡಿರುವ ‘ದಿ ಫೈಲ್‌’ನವರು ಅದೇ ಮಾದರಿಯನ್ನು ಅಳವಡಿಸಿಕೊಂಡು ಸತ್ಯಾಂಶಗಳನ್ನು ತಿರುಚುತ್ತಿರುವುದಾದರೂ ಏಕೆ? ಇವರ ಮೊಂಡುವಾದದ ಹಿಂದೆ ದುಷ್ಟ ಉದ್ದೇಶಗಳಷ್ಟೇ ಎದ್ದು ಕಾಣುತ್ತಿರುವುದರಿಂದ ಮತ್ತೊಮ್ಮೆ ಈ ಪತ್ರ ಬರೆಯಬೇಕಾಯಿತು.

ವಂದನೆಗಳೊಂದಿಗೆ
ʼಈ ದಿನʼ ತಂಡ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಈ ದಿನ ತಂಡದ ತೀರ್ಮಾನ ಸರಿಯಾಗಿದೆ. ಮಾಧ್ಯಮಗಳು ಬರೀ ವಿರೋಧಕ್ಕಾಗಿ ಹುಟ್ಟಿಕೊಂಡಿಲ್ಲ. ಸರ್ಕಾರದ ಜನಪರ ನಿಲುವುಗಳನ್ನು ಮಾಧ್ಯಮ ಬೆಂಬಲಿಸಬೇಕು. ಅಂತೂ ದಿನ ಫೈಲ್ ದುರುದ್ದೇಶ ಅನಾವರಣ ಮಾಡಿದ್ದು ಒಳ್ಳೆಯ ಸಂಗತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

Download Eedina App Android / iOS

X