“ಸಾಯಿಬಾಬ ಅವರು ಹಲವಾರು ಬಾರಿ ತಮ್ಮ ಭಾಷಣದಲ್ಲಿ ಹಣ ಮತ್ತು ರಕ್ತ ಸದಾ ಚಲನೆಯಲ್ಲಿರಬೇಕು ಎಂದು ಹೇಳಿದ್ದಾರೆ. ಏಕೆಂದರೆ, ಹಣ ಒಂದೆಡೆ ಇದ್ದರೆ ಆದಾಯ ತೆರಿಗೆ ದಾಳಿ ಆಗುತ್ತೆ, ಇನ್ನು ರಕ್ತ ಒಂದೆ ಕಡೆ ಇದ್ದರೆ ರೋಗಗಳು ಬರುತ್ತವೆ. ಹಾಗಾಗಿ, ಇವೆರಡು ಚಲನೆಯಲ್ಲಿದ್ದರೇ, ವ್ಯಕ್ತಿ ಹಾಗೂ ಸಮಾಜ ಆರೋಗ್ಯವಾಗಿರುತ್ತದೆ” ಎಂದು ಸಾಯಿಬಾಬ ಅವರ ಹಿಂದಿನ ಭಾಷಣದ ಮಾತನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೆಲುಕು ಹಾಕಿದರು.
ಬೆಂಗಳೂರಿನ ವೈಟ್ ಫೀಲ್ಡ್ ನ ಶ್ರೀ ಸತ್ಯಸಾಯಿ ನರ್ಸಿಂಗ್ ಕಾಲೇಜ್ನ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, “ಈ ಹಿಂದೆ ಸ್ವಾಮೀಜಿಗಳು ಮಠದ ವತಿಯಿಂದ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದರು” ಎಂದು ಹೇಳಿದರು.
“ಸಾಯಿಬಾಬ ಅವರು ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಕುಂಬಳಗೋಡಿಗೆ ಆಗಮಿಸಿದ್ದರು. ಆಗ ಅವರು ಹೈದರಾಬಾದ್ ಕನ್ನಡ, ಮೈಸೂರು ಕನ್ನಡ, ತೆಲುಗು ಕನ್ನಡವನ್ನು ಸೇರಿಸಿ 40 ನಿಮಿಷಗಳ ಕಾಲ ಮಾತನಾಡಿದರು. ಅವರ ಭಾಷಣದ ಸಂದರ್ಭದಲ್ಲಿ ಭಗವದ್ಗೀತೆಯ 8 ಶ್ಲೋಕಗಳನ್ನು ಹೇಳಿದರು. ಅದು ನಾನು ನನ್ನ ಜೀವನದಲ್ಲಿ ಕೇಳಿದ ಅತ್ಯುತ್ತಮ ಆಧ್ಯಾತ್ಮಿಕ ಭಾಷಣವಾಗಿತ್ತು. ನಂತರ ನಾನು ನನ್ನ ಆಪ್ತ ಕಾರ್ಯದರ್ಶಿಗೆ ಹೇಳಿ ಓರ್ವ ಸಂಸ್ಕೃತ ಶಿಕ್ಷಕರನ್ನು ನಿಯೋಜಿಸಿಕೊಂಡೆ. ನಂತರ ಅದು ನನ್ನ ಆಲೋಚನೆ, ಘನತೆ, ವ್ಯಕ್ತಿತ್ವವನ್ನೇ ಬದಲಿಸಿತು” ಎಂದು ತಿಳಿಸಿದರು.
“ಸಾಯಿಬಾಬ ಅವರು ನಮ್ಮ ಜತೆ ಇಲ್ಲದಿದ್ದರೂ ಅವರ ಆಲೋಚನೆ, ದೂರದೃಷ್ಟಿ, ಧಾರ್ಮಿಕ ಶಕ್ತಿ ನಮ್ಮ ಜತೆ ಇದೆ. ಈ ಕಟ್ಟಡದ ವಿನ್ಯಾಸ ನೋಡಿದ ನಂತರ ಇದೇ ವಿನ್ಯಾಸದಲ್ಲಿ ನಾನು ಎಂಜಿನಿಯರಿಂಗ್ ಕಾಲೇಜು ಕಟ್ಟಿದೆ. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಭನಾಭನ ಪಾದ ಭಜನೆ ಪರಮ ಸುಖವಯ್ಯ ಎಂಬ ಪುರಂದರ ದಾಸರ ಪದದಂತೆ ಈ ಪವಿತ್ರವಾದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನಲ್ಲಿದ್ದಾರೆ ಅತಿ ಹೆಚ್ಚು ನಕಲಿ ವೈದ್ಯರು: ರೋಗಿಗಳ ಜೀವದ ಜತೆಗೆ ಚೆಲ್ಲಾಟ
“ನೀವು ಮನಶಾಂತಿಗಾಗಿ ಸೇವೆ ಮಾಡುತ್ತಿದ್ದೀರಿ. ಯಶಸ್ವಿ ವ್ಯಕ್ತಿಗಳು ಮುಖದಲ್ಲಿ ನಗು ಹಾಗೂ ಮೌನವನ್ನು ಹೊಂದಿರುತ್ತಾರೆ. ನಗು ಸಮಸ್ಯೆಗಳನ್ನು ಬಗೆಹರಿಸಿದರೆ, ಮೌನ ಸಮಸ್ಯೆಗಳನ್ನು ದೂರವಿಡುತ್ತದೆ. ನಗು ನಿಮ್ಮ ಅಂದವನ್ನು ಹೆಚ್ಚಿಸಿದರೆ, ಪ್ರಾರ್ಥನೆ ನಿಮ್ಮನ್ನು ಶಕ್ತಿಶಾಲಿಯಾಗಿ ಮಾಡುತ್ತದೆ. ಪ್ರೀತಿ ಜೀವನ ಆನಂದಿಸುವಂತೆ ಮಾಡುತ್ತದೆ ಎಂದು ಸಾಯಿಬಾಬ ಅವರು ಹೇಳಿಕೊಟ್ಟಿದ್ದಾರೆ. ನಾನಾ ಜಾತಿ ಹಾಗೂ ಸಮುದಾಯದವರು ಇಲ್ಲಿ ಸೇರಿದ್ದೇವೆ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಯಾವುದಾದರೂ ನಿಷ್ಠೆಯೊಂದೆ, ದೇವನೊಬ್ಬ ನಾಮ ಹಲವು. ಅಂತಿಮವಾಗಿ ಮನುಷ್ಯತ್ವ ಹಾಗೂ ಮಾನವೀಯತೆ ಬಹಳ ಮುಖ್ಯ. ಮಾನವನ ಸೇವೆಯೇ ಮಾದವನ ಸೇವೆ” ಎಂದು ತಿಳಿಸಿದರು.