‘ಕಲ್ಪವೃಕ್ಷ’ ತೆಂಗು ‘ರೋಗವೃಕ್ಷ’ವಾಗಿರುವುದೇಕೆ?

Date:

Advertisements
ಕೊಬ್ಬರಿ ಕ್ವಿಂಟಲ್‌ಗೆ ಮೂವತ್ತು ಸಾವಿರವಾಗಿರುವ ಈ ಹೊತ್ತಿನಲ್ಲಿ, ತೆಂಗು ಬೆಳೆಯೂ ಕ್ಷೀಣಿಸುತ್ತಿದೆ. ಬೇಸಾಯ ಪದ್ಧತಿ, ರೋಗಗಳು, ಮನುಷ್ಯರ ದುರಾಸೆ- ಇದೆಲ್ಲದರ ಪರಿಣಾಮವಾಗಿ ಮರಗಳಲ್ಲಿ ಫಸಲೇ ನಿಲ್ಲದಂತಾಗಿದೆ.

ತೆಂಗಿನಕಾಯಿ, ಕೊಬ್ಬರಿಗೆ ನಿರೀಕ್ಷೆ ಮೀರಿದ ದರ. ಮುಂದೆಯೂ ಕೊಬ್ಬರಿ ದರ ಏರಿಕೆ ಆಗಲಿದೆ. ಪ್ರತಿ ಕ್ವಿಂಟಾಲು ಕೊಬ್ಬರಿಯ ಬೆಲೆ ಈಗಾಗಲೇ ಬರೋಬ್ಬರಿ 30 ಸಾವಿರ ದಾಟಿದೆ. ಒಳ್ಳೆಯ ದರ ಏರಿಕೆಯಾದ ಹೊತ್ತಿನಲ್ಲಿಯೇ ಬೆಳೆ ಇಲ್ಲದಂತಾಗಿ, ಬೆಳೆಗಾರರು ನೊಂದುಕೊಳ್ಳುತಿದ್ದಾರೆ.

ಹಾಗೆಯೇ ತೆಂಗಿನಕಾಯಿ ಸಿಕ್ತಾ ಇಲ್ಲ, ಬೆಲೆ ಏರಿಕೆಯಾಗಿದೆ. ಒಂದು ಜಿಡ್ಡಿ ತೆಂಗಿನಕಾಯಿ ಇನ್ನೂರು ರೂಪಾಯಿ. ದೇವರ ಹಣ್ಕಾಯಿಗೆ, ಅಡುಗೆಗೆ ಒಂದು ತೆಂಗಿನಕಾಯಿ ಕೊಳ್ಳಲಾಗದಷ್ಟು ದುಬಾರಿಯಾಗಿದೆ. ಎಳನೀರು ಅರವತ್ತು, ಎಪ್ಪತ್ತು ರೂಪಾಯಿ ದರ ಏರಿದೆ.

ಅಪಾರವಾಗಿ ತೆಂಗು ಬೆಳೆಯುವ ಪ್ರದೇಶ ತಿಪಟೂರು ಮತ್ತು ಸುತ್ತಲಿನ ತಾಲೂಕುಗಳು ಹಾಗೂ ಕೆಲವೇ ಕೆಲವು ಜಿಲ್ಲೆಗಳು. ಈ ಪ್ರದೇಶಗಳಲ್ಲಿ ಇತ್ತೀಚಿಗೆ ತೆಂಗಿನ ಮರಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇರುವ ತೆಂಗಿನ ಮರಗಳಲ್ಲಿ ಗರಿಗಳೇ ನಿಲ್ಲದಂತಾಗಿದೆ. ಮರಗಳು ನೆಲಕ್ಕೆ ಒರಗುತ್ತಿವೆ. ಹೊಂಬಾಳೆ ಹೊಡೆಯದೆ ದಸಿಯೊಳಗೇ ರೋಗ. ಉಸಿ ಹೊಡೆಯುವುದು ಹೊಂಬಾಳೆ. ಹರಳು ನಿಲ್ಲುತ್ತಿಲ್ಲ. ಅಳಿಲುಗಳು ಕುಡಿಯುವ ಕುರುಬುಗಳಿಗೂ ಕೊರತೆ. ತೆಂಗಿನ ಗೊನೆ ಬಲಿಯುವಾಗಲೇ ಬಳಲುತ್ತಿವೆ. ಕಾರಣ ಕಾಯಿಲೆಗಳು. ನುಸಿ ಕಾಟ, ರಸ ಸೋರಿಕೆ, ಅಣಬೆ ರೋಗ, ಇರುವೆ ಕಾಟ. ಇದೆಲ್ಲದರ ಪರಿಣಾಮವಾಗಿ ಮರಗಳಲ್ಲಿ ಫಸಲೇ ನಿಲ್ಲದಂತಾಗಿದೆ. ‘ಕಲ್ಪವೃಕ್ಷ’ ತೆಂಗು ‘ರೋಗವೃಕ್ಷ’ವಾಗಿ ನಿಂತಿದೆ.

Advertisements

ಬೆಂಬಲ ಬೆಲೆಗೆ ಆಗ್ರಹಿಸಿ ಹಿಂದೆ ರೈತರು ಹೋರಾಟಕ್ಕೆ ಕೂರುತಿದ್ದರು. ಬದಲಾದ ಪರಿಸ್ಥಿತಿಯಲ್ಲಿ ರೈತರ ಅಟ್ಟಗಳೂ ಖಾಲಿ, ತೋಟಗಳೂ ಖಾಲಿ. ತೆಂಗಿನ ಮರಗಳು ಕಾಯಿಲೆ ಬಿದ್ದಿವೆ. ಪ್ರಕೃತಿಯೇ ಕೈಕೊಟ್ಟಿದೆ. ತೆಂಗಿನ ಬೇಸಾಯದ ಕ್ರಮಗಳೂ ಬದಲಾಗಿವೆ. ಇದೇ ಸಂದರ್ಭದಲ್ಲಿ ಕೊಬ್ಬರಿಗೆ ಬಹಳ ಬೆಲೆ ಬಂದಿದೆ.

ಇದನ್ನು ಓದಿದ್ದೀರಾ?: ಕೊಪ್ಪಳ | ನುಗ್ಗೆಸೊಪ್ಪಿನ ಪುಡಿಗೆ ವಿದೇಶದಲ್ಲಿ ಬೇಡಿಕೆ: ಕೃಷಿಯಲ್ಲಿ ಐಟಿ ಉದ್ಯೋಗಿ ಬಸಯ್ಯರ ಸಾಧನೆ

ಅಷ್ಟೋ ಇಷ್ಟೋ ಕೊಬ್ಬರಿ ಇಟ್ಟುಕೊಂಡು ಮಾರುಕಟ್ಟೆಗೆ ತರುವ ರೈತರಿಗೆ ಮಾತ್ರ ಬೆಲೆ ಏರಿಕೆಯ ಸಂತಸ. ಮುಂದಿನ ಡಿಸೆಂಬರ್‍‌ವರೆಗೂ ಕೊಬ್ಬರಿ ದರ ಕಡಿಮೆ ಆಗಲಾರದು. ನಂತರದಲ್ಲಿ ಸ್ವಲ್ಪಮಟ್ಟಿಗೆ ಹಿಂದು ಮುಂದಾಗಬಹುದು. ಸದ್ಯಕ್ಕಂತೂ ಬೆಲೆ ಏರಿಕೆಯ ಲೆಕ್ಕಾಚಾರಗಳು ತಲೆಕೆಳಗಾಗುವ ಸಾಧ್ಯತೆಗಳಿಲ್ಲ.

ಈ ಮೊದಲು ಕೊಬ್ಬರಿಗೆ ಹೊರತಾಗಿ, ತೆಂಗು ಕಟಾವು ಮಾಡುತ್ತಿರಲಿಲ್ಲ. ಕಾಯಿ ಕೊಬ್ಬರಿ ಮಾಡುವುದಕ್ಕಿಂತ ಎಳನೀರು ಮಾರಾಟವೂ ಲಾಭ ಎಂಬುದನ್ನು ಬೆಳೆಗಾರರು ತಿಳಿಯತೊಡಗಿದ್ದಾರೆ. ಇದೂ ಕೂಡ ತೆಂಗಿನಕಾಯಿ ಮತ್ತು ಕೊಬ್ಬರಿ ಬೆಲೆ ಏರಿಕೆಗೆ ಪ್ರಮುಖ ಕಾರಣ.

ಕೊಬ್ಬರಿ ಬೆಲೆ ಏರಿಕೆಯಿಂದಾಗಿ ತೆಂಗಿನಕಾಯಿ ಪೌಡರ್ ಕಾರ್ಖಾನೆಗಳಿಗೂ ಕಾಯಿ ಬರ ಬಂದಿದೆ. ಮುಂದಿನ ಜೂನ್‌ವರೆಗೂ ಕಾರ್ಖಾನೆಗಳಿಗೆ ತೆಂಗಿನಕಾಯಿ ಸಿಗುವುದಿಲ್ಲ ಎನ್ನುವುದು ಖಾತ್ರಿಯಾಗಿದೆ. ಕಾರ್ಮಿಕರು ಬಿಹಾರ್, ಅಸ್ಸಾಂ ರಾಜ್ಯಗಳಿಂದ ಕೂಲಿಯನ್ನು ಬಯಸಿ ತಿಪಟೂರಿಗೆ ಬರುತಿದ್ದರು. ಪಂಜಾಬಿನಲ್ಲಿ ಬತ್ತದ ನಾಟಿ ಸೀಜನ್. ಕರ್ನಾಟಕಕ್ಕೆ ಗುಳೆ ಬಂದ ಬಿಹಾರ್, ಅಸ್ಸಾಂ ಕಾರ್ಮಿಕರು ಈಗ ಪಂಜಾಬಿನತ್ತ ಮುಖ ಮಾಡಿದ್ದಾರೆ. ತೆಂಗಿನ ಘಟಕಗಳು ಮುಚ್ಚುವಂತಾಗಿವೆ.

ಟನ್ ತೆಂಗಿನಕಾಯಿ 70 ಸಾವಿರ. ಮುಂದೆ ಲಕ್ಷ ದಾಟುವ ಸಾದ್ಯತೆಗಳಿವೆ. ಮಂಗಳೂರು, ಉಡುಪಿ ತೆಂಗಿನಕಾಯಿ ಬರುವುದೂ ಸಾಮಾನ್ಯವಾಗಿದೆ. ಕೇರಳ ಕಾಯಿ ಸರಬರಾಜು ನಿಂತು ಹೋಗಿದೆ. ಜನವರಿಯಿಂದ ಜೂನ್‌ವರೆಗೆ ಕೇರಳದಲ್ಲಿ ತೆಂಗಿನ ಕಾಯಿ ಸೀಸನ್. ಜೂನ್‌ನಿಂದ ಡಿಸೆಂಬರ್‍‌ವರೆಗೂ ಸರಬರಾಜು ಸ್ಥಗಿತವಾಗುತ್ತದೆ. ಡಿಸೆಂಬರ್ ನಂತರ ಕೇರಳ ತೆಂಗಿನಕಾಯಿ ಮಾರುಕಟ್ಟೆಗೆ ಬರಲು ಆರಂಭವಾಗುತ್ತದೆ.

ತೀರ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ತೆಂಗು ಬಯಲುಸೀಮೆಯ ಬೆಳೆಯಾಗಿಯೂ ಒಗ್ಗಿಕೊಂಡಿತ್ತು. ಅಕಾಲಿಕ ಮಳೆ, ಅಕಾಲಿಕ ಬರಗಾಲದ ಬಿಸಿಲಿಗೆ ತೆಂಗು ಕ್ರಮೇಣ ಕರಗತೊಡಗಿತು. ಅತಿವೃಷ್ಟಿ ಅನಾವೃಷ್ಟಿಗಳ ಹೊಡೆತ ತಡೆಯದ ತೆಂಗು ಹಂತ ಹಂತವಾಗಿ ಒಣಗಲಾರಂಬಿಸಿತು. ಇಳುವರಿ ನಿರೀಕ್ಷಿಸಲಾರದ ಹಂತಕ್ಕೆ ಕಡಿಮೆ ಆಯಿತು.

ಕೋವಿಡ್ ನಂತರ ಎಳನೀರಿನ ಬಳಕೆ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ ಈ ಭಾಗಗಳಲ್ಲಿ ತೆಂಗು ಕಾಯಿಯಾಗುವ ಮೊದಲೇ ಎಳನೀರನ್ನು ಕಿತ್ತು ಮಾರಾಟ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ತೆಂಗಿನ ಮರಗಳಲ್ಲಿ ಫಸಲು ಶೇಕಡ 30ರಷ್ಟು ಮಾತ್ರ ಉಳಿದಿದೆ ಎಂದು ಅಂದಾಜಿಸಲಾಗುತ್ತಿದೆ.

ತೆಂಗಿನ ಇಳುವರಿ ಕುಂಠಿತವಾಗಲು ಮರಗಳಿಗೆ ಅಂಟಿಕೊಂಡಿರುವ ರೋಗಗಳಷ್ಟೇ ಕಾರಣವಾಗಿರದೆ, ಉಳುಮೆ ಮಾಡುವುದು, ಗೊಬ್ಬರ ಕೊಡುವುದು, ನೀರು ಹಾಯಿಸುವುದೂ ಅಸಹಜವಾಗಿವೆ.

ಸಹಜ ಬೇಸಾಯವನ್ನು ವೈಜ್ಞಾನಿಕವಾಗಿ ಮಾಡಲು ಈಗ ಎತ್ತಿನ ಬೇಸಾಯಗಳು ಹಳ್ಳಿಗಳಲ್ಲಿ ಕಣ್ಮರೆಯಾಗಿವೆ. ಟ್ರ್ಯಾಕ್ಟರ್‍‌ಗಳ ಕೂಲಿ ಬೇಸಾಯಕ್ಕೆ ತೆಂಗು ನೋವುಪಡುವಂತಾಗಿದೆ. ಉಳುಮೆ ಮಾಗುವುದರ ಬದಲಾಗಿ, ಮರಗಳಿಗೆ ನೋವಾಗುವ ಉಳುಮೆ ಸಾಗಿದೆ. ಟ್ರ್ಯಾಕ್ಟರ್ ಉಳುಮೆ ಮಾಡುತ್ತಿರುವುದರಿಂದ ತೆಂಗಿನ ಮರಗಳ ಬೇರುಗಳು ಕಿತ್ತು ಹೋಗಿ ಮೇಲಕ್ಕೆ ಬಂದು ಇರುವೆಗಳು ಬೇರುಗಳ ಸಿಹಿಗೆ ಅಮರಿ, ತೆಂಗಿನ ಬೆಳೆ ಹಾನಿಗೊಳಗಾಗಲು ಇದು ಒಂದು ಕಾರಣ ಎನ್ನಲಾಗಿದೆ.

coconut

ಅಧಿಕ ನೀರು, ಅಧಿಕ ಗೊಬ್ಬರ, ಅಧಿಕ ಉಳುಮೆಗೆ ಬಲಿಯಾಗಿ ತೆಂಗು ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಬೇಸಾಯದ ಕ್ರಮಗಳೂ ಬದಲಾಗಬೇಕಾಗಿವೆ. ಎಳಸು ಸ್ವಭಾವದ ತೆಂಗಿನ ಮರಗಳಿಗೆ ಗಡುಸಾದ ಹಾರೈಕೆ ಅನಗತ್ಯ. ನೀರು ಹಾಯಿಸಿದರೆ ಬಸಿದು ಹೋಗುವಂತಹ ಮರಳು ಮಿಶ್ರಿತ ಮಣ್ಣನ್ನ ತೆಂಗಿನ ತೋಟಗಳಿಗೆ ಅಗತ್ಯವಿರುವಾಗ ಹೊಡೆಯಬೇಕಾಗುತ್ತದೆ. ಅನಗತ್ಯವಾಗಿ ಹೊರ ಮಣ್ಣು ಹೊಡೆಯಲಾಗುವುದು. ಸಾರರಹಿತ ಸಪ್ಪಲು ಮಣ್ಣು, ಉಪಯೋಗವಾಗದ ಮಣ್ಣನ್ನು ತೋಟಗಳಿಗೆ ಬರ್ತಿ ಹಾಕಿ ಮರಗಳ ಉಸಿರಾಟಕ್ಕೇ ಹಾನಿ ಮಾಡುವುದೂ ಇದೆ. ಇದರಿಂದಾಗಿ ಬೆಳೆಯೂ ನಾಶವಾಗುತ್ತಿದೆ. ಕೃಷಿ ಪೂರಕ ಪರಿಸರವೂ ನಾಶವಾಗುತ್ತಿದೆ. ಸಹಜ ಬೇಲಿ ತೆಗೆದುದರ ಪರಿಣಾಮ ತೆಂಗಿನ ಮರಗಳಿಗೆ ದಶಕಗಳಿಂದಲೂ ಹಲವು ಬಾಧೆಗಳು. ಹಲವಾರು ರೋಗ‌ಗಳು.

ರೈತರು ಇತ್ತ ಗಮನ ಹರಿಸಿದರೆ, ತೆಂಗನ್ನು ತಾಳ್ಮೆಯಿಂದ ಸಾಕಿದರೆ… ರೈತರ ಬದುಕು ಬಂಗಾರವಾಗುವುದರಲ್ಲಿ ಅನುಮಾನವೇ ಇಲ್ಲ.

WhatsApp Image 2023 09 02 at 11.06.04
ಉಜ್ಜಜ್ಜಿ ರಾಜಣ್ಣ
+ posts

ಪತ್ರಕರ್ತ, ಲೇಖಕ, ಸಾಮಾಜಿಕ ಹೋರಾಟಗಾರ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಉಜ್ಜಜ್ಜಿ ರಾಜಣ್ಣ
ಉಜ್ಜಜ್ಜಿ ರಾಜಣ್ಣ
ಪತ್ರಕರ್ತ, ಲೇಖಕ, ಸಾಮಾಜಿಕ ಹೋರಾಟಗಾರ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಕ್ಕಳನ್ನು ಡ್ರಗ್ಸ್‌ ದಾಸರನ್ನಾಗಿ ಮಾಡಿ ಭಾರತವನ್ನು ಮುಳುಗಿಸುವಲ್ಲಿ ದೊಡ್ಡ ದೊಡ್ಡ ದೇಶಗಳ ಕೈವಾಡವಿದೆ: ಎಚ್‌ ಎಂ ವಿಶ್ವನಾಥ್

ದೊಡ್ಡ ದೊಡ್ಡ ದೇಶಗಳು ನಮ್ಮ ದೇಶದ ಮಕ್ಕಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್‌ನಲ್ಲಿ ಮುಳುಗಿಸುತ್ತಿದ್ದಾರೆ....

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಗುಬ್ಬಿ | ಹಿಂದುಳಿದ ಸಮುದಾಯಕ್ಕೆ ಹೊಸ ದಿಕ್ಕು ತೋರಿದ ‘ಅರಸು‘ : ತಹಶೀಲ್ದಾರ್ ಆರತಿ.ಬಿ

ಶೋಷಣೆ ಮುಕ್ತ ಹಾಗೂ ಸಮಾನತೆಯ ಸಮಾಜ ನಿರ್ಮಾಣ ಮಾಡಿದ ಡಿ.ದೇವರಾಜ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X