ಬಹುತೇಕ ಕಂಪನಿಗಳು ಉದ್ಯೋಗಕ್ಕಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕ್ಯಾಂಪಸ್ ಸೆಲೆಕ್ಷನ್‌ಗಾಗಿ ಪ್ರತಿಷ್ಠಿತ ಖಾಸಗಿ ಕಾಲೇಜುಗಳನ್ನೇ ಆಶ್ರಯಿಸುತ್ತಿರುವುದು ದುಃಖಕರ ವಿಚಾರವಾಗಿದೆ. ಕ್ಯಾಂಪಸ್ ಸೆಲೆಕ್ಷನ್ ಮಾಡುವ ಎಲ್ಲ ಕಂಪನಿಗಳು ಸರ್ಕಾರಿ ಕಾಲೇಜುಗಳನ್ನು ಪರಿಗಣಿಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
“ಸರ್ಕಾರಿ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳೂ ಪ್ರತಿಭಾನ್ವಿತರಾಗಿದ್ದಾರೆ. ಒಂದೇ ವಿಷಯವನ್ನು ಅಭ್ಯಾಸ ಮಾಡಿರುತ್ತಾರೆ. ಕಲಿಕೆಯ ಗುಣಮಟ್ಟವೂ ಒಂದೇ ಆಗಿರುತ್ತದೆ. ಎಲ್ಲ ವಿಚಾರಗಳಲ್ಲಿ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಗೆ ಸರಿಸಮನಾಗಿದ್ದಾರೆ. ಆದರೂ, ಕ್ಯಾಂಪಸ್ ಸೆಲೆಕ್ಷನ್‌ಗೆ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಗೆ ಕಂಪನಿಗಳು ಮಣೆಹಾಕುತ್ತಿರುವುದು ನೋವಿನ ಸಂಗತಿಯಾಗಿದೆ” ಎಂದು ಎಎಪಿ ಹೇಳಿದೆ.
“ಸರ್ಕಾರಿ ಕಾಲೇಜು ವಿದ್ಯಾರ್ಥಿಗಳನ್ನು ಕ್ಯಾಂಪಸ್ ಸೆಲೆಕ್ಷನ್‌ಗೆ ಸಿದ್ಧಗೊಳಿಸುವುದು ಹಾಗೂ ಕಂಪನಿಗಳು ಖಾಸಗಿ ಕಾಲೇಜುಗಳಿಗೆ ನೀಡುವ ಮಾನ್ಯತೆಯಂತೆ ಸರ್ಕಾರಿ ಕಾಲೇಜುಗಳಿಗೂ ಸಮನಾಗಿ ಆದ್ಯತೆ ನೀಡುವಂತೆ ಆಯಾ ಜಿಲ್ಲಾಧಿಕಾರಿಗಳು ಜವಾಬ್ದಾರಿ ವಹಿಸಬೇಕು” ಎಂದು ಪಕ್ಷ ಒತ್ತಾಯಿಸಿದೆ.
ಈ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷವು ರಾಜ್ಯಾದ್ಯಂತ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಪರವಾಗಿ ಅಭಿಯಾನವನ್ನು ಹಮ್ಮಿಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಡಿ.1 ರಿಂದ ಬೆಂಗಳೂರು – ನೀಲಕ್ಕಲ್‌ಗೆ ಕೆಎಸ್‌ಆರ್‌ಟಿಸಿ ವೋಲ್ವೊ ಬಸ್ ಸಂಚಾರ
“ಡಿಸೆಂಬರ್ 1ರಿಂದ 4ರವರೆಗೆ ಆಮ್ ಆದ್ಮಿ ಪಕ್ಷದ ಯುವ ಘಟಕ ರಾಜ್ಯಾದ್ಯಂತ 4 ದಿನಗಳ ಅಭಿಯಾನವನ್ನು ಹಮ್ಮಿಕೊಂಡಿದೆ. ಪ್ರಮಖವಾಗಿ ಡಿ.1ರಂದು ರಾಮನಗರ, ಡಿ.2ರಂದು ಮಂಡ್ಯ, ಡಿ.3ರಂದು ಮೈಸೂರು ಹಾಗೂ ಡಿ.4ರಂದು ಚಾಮರಾಜನಗರದಲ್ಲಿ ಅಭಿಯಾನವನ್ನು ನಡೆಸಲಿದೆ” ಎಂದು ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಲೋಹಿತ್ ಜಿ. ಹನುಮಾಪುರ ಹೇಳಿದ್ದಾರೆ.
“ಉಳಿದಂತೆ ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾ ಮಟ್ಟದ ಅಭಿಯಾನಗಳನ್ನು ನಡೆಸಲಿದ್ದಾರೆ. ಈ ಮೂಲಕ ಜಿಲ್ಲಾಧಿಕಾರಿಗಳ ಗಮನವನ್ನು ಸೆಳೆದು, ಸರ್ಕಾರಿ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಆಯ್ಕೆಗೆ ಪರಿಗಣಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳವಂತೆ ಒತ್ತಡ ಹೇರಲಾಗುವುದು” ಎಂದು ಮಾಹಿತಿ ನೀಡಿದ್ದಾರೆ.