ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಿಂದ 5 ಕಿಲೋ ಮೀಟರ್ ವಾಕಥಾನ್ ಆಯೋಜಿಸಲಾಯಿತು
ವಿಶ್ವ ಕ್ಯಾನ್ಸರ್ ದಿನ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ವತಿಯಿಂದ ಫೆಬ್ರವರಿ 4ರಂದು ಕ್ಯಾನ್ಸರ್ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾಗೃತಿ ಜಾಥಾ ನಡೆಸಲಾಯಿತು.
ಈ ಅಭಿಯಾನಕ್ಕೆ ಫೆಬ್ರವರಿ 4ರಂದು ಬೆಳಿಗ್ಗೆ 6 ಗಂಟೆಗೆ ಕಂಠೀರವ ಕ್ರೀಡಾಂಗಣದಿಂದ ಆರಂಭವಾದ 5 ಕಿಲೋ ಮೀಟರ್ ವಾಕಥಾನ್‌ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
“ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಕೈ ಜೋಡಿಸಿ” ಘೋಷವಾಕ್ಯದಡಿಯಲ್ಲಿ ಸುಮಾರು 5 ಕಿಲೋ ಮೀಟರ್ ವಾಕಥಾನ್ ಕಂಠೀರವ ಕ್ರೀಡಾಂಗಣದಿಂದ ಆರಂಭವಾಗಿ ಹಡ್ಸನ್ ಸರ್ಕಲ್, ವಿಧಾನಸೌಧ, ಕೇಂದ್ರ ಪೋಸ್ಟ್ ಆಫೀಸ್ ಮೂಲಕ ಸಾಗಿ ಕಂಠೀರವ ಕ್ರೀಡಾಂಗಣದಲ್ಲಿ ಮುಕ್ತಾಯವಾಯಿತು.
“5 ಕಿಲೋಮೀಟರ್ ವಾಕಥಾನ್‌ನಲ್ಲಿ ಸಾವಿರಾರು ಸಾರ್ವಜನಿಕರ ಜೊತೆ ನಾನು ಹೆಜ್ಜೆ ಹಾಕಿದೆ. ನಿಯಮಿತ ವ್ಯಾಯಾಮ, ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಸೇರಿದಂತೆ ಆರೋಗ್ಯಪೂರ್ಣ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಮೂಲಕ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಅನ್ನು ಪತ್ತೆ ಮಾಡುವ ಮೂಲಕ ಅಮೂಲ್ಯ ಜೀವವನ್ನು ಉಳಿಸಬಹುದಾಗಿದೆ. ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಒಂದಾಗೋಣ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
Launched CanWalk awareness walkathon at the Kanteerava Stadium today on the occasion of World Cancer Day. It was heartening to witness participation from thousands of members, who walked the 5 km walkathon to raise awareness about cancer.
Cancer risk can be reduced by… pic.twitter.com/FDAAxcdz96
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) February 4, 2024
“ಆಹಾರ ಪದ್ಧತಿ, ಒತ್ತಡದ ಜೀವನ ಮತ್ತು ಬೊಜ್ಜು, ಕಲುಷಿತ ಪರಿಸರ, ದೇಹ ದಂಡಿಸದೇ ಇರುವ ಕಾರಣದಿಂದ ಕ್ಯಾನ್ಸರ್ ರೋಗ ಬರುತ್ತದೆ. ಪ್ರಪಂಚದಲ್ಲಿ ಅತ್ಯಂತ ಹಾನಿಕಾರವಾಗಿರುವ ಕಾಯಿಲೆಗಳಲ್ಲಿ ಕ್ಯಾನ್ಸರ್ ರೋಗವು ಒಂದು. ಕ್ಯಾನ್ಸರ್ ರೋಗದ ಆರಂಭಿಕ ಪತ್ತೆಯಿಂದ ಜೀವಗಳನ್ನು ಉಳಿಸಬಹುದು. ಪ್ರತಿಯೊಬ್ಬರು ಪ್ರತಿದಿನ ಒಂದು ಗಂಟೆ ಅವರ ಜೀವನಕ್ಕಾಗಿ ಮೀಸಲು ಇಡಬೇಕು, ಯೋಗ, ವಾಕಿಂಗ್, ವ್ಯಾಯಾಮ ಮಾಡುವುದರಿಂದ ಆರೋಗ್ಯವಂತರಾಗಿ ಇರಬಹುದು. ವಿಶ್ವ ಕ್ಯಾನ್ಸರ್ ದಿನದಂದು ಕ್ಯಾನ್ಸರ್ ಮುಕ್ತ ಸಮಾಜ ರಾಜ್ಯ ನಮ್ಮದಾಗಲಿ, ಇದಕ್ಕಾಗಿ ಆರೋಗ್ಯ ಇಲಾಖೆ ಶ್ರಮಿಸುತ್ತಿದೆ” ಎಂದು ತಿಳಿಸಿದ್ದಾರೆ.
ಈ ಜಾಥಾದಲ್ಲಿ ಸರ್ಜಿಕಲ್ ಸೊಸೈಟ್ ಆಫ್ ಬೆಂಗಳೂರು ಅಧ್ಯಕ್ಷರಾದ ಡಾ ರಾಜಶೇಖರ ಸಿ.ಜಾಕ, ಹಿರಿಯ ಐಪಿಎಸ್ ಅಧಿಕಾರಿ ಲಾಭೂರಾಮ್, ಸ್ಯಾಂಡಲ್ವುಡ್ ತಾರೆಯರಾದ ಪ್ರೇಮ್, ವಿನಯ್ ರಾಜ್ ಕುಮಾರ್, ಗಿರಿರಾಜ್, ನಟಿ ಕಾರುಣ್ಯ ರಾಮ್, ಹಲವು ಕ್ಷೇತ್ರಗಳ ಗಣ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ವಿಶ್ವ ಕ್ಯಾನ್ಸರ್ ದಿನ
ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನಾಚರಣೆಗೆ 2000ದಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಶೃಂಗಸಭೆಯಲ್ಲಿ ನಿರ್ಧರಿಸಲಾಗಿತ್ತು. ಯೂನಿಯನ್ ಫಾರ್ ಇಂಟರ್‌ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (ಯುಐಸಿಸಿ) ನೇತೃತ್ವದಲ್ಲಿ ವಿಶ್ವ ಕ್ಯಾನ್ಸರ್ ದಿನವನ್ನು ಅಸ್ತಿತ್ವಕ್ಕೆ ತಂದ ನಂತರ ಪ್ರತಿವರ್ಷ ಪ್ರಪಂಚದಾದ್ಯಂತ ಕ್ಯಾನ್ಸರ್ ರೋಗಿಗಳ ಜೀವನಮಟ್ಟ ಸುಧಾರಿಸಲು ಮತ್ತು ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲು ವಿಭಿನ್ನ ಥೀಮ್ ನೊಂದಿಗೆ ಆಚರಿಸಲಾಗುತ್ತದೆ.
ಪ್ರತಿ 10 ಮಂದಿ ಭಾರತೀಯರಲ್ಲಿ ಒಬ್ಬರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, ವಾರ್ಷಿಕವಾಗಿ 16 ಮಿಲಿಯನ್ ಮಂದಿ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಜಾಗತಿಕವಾಗಿ ಪ್ರತಿ ವರ್ಷ 6 ಜನರಲ್ಲಿ ಒಬ್ಬರು ಕ್ಯಾನ್ಸರ್ ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಯುನಿಯನ್ ಫಾರ್ ಇಂಟರ್ ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ ತಿಳಿಸಿದೆ. ಹಾಗಾಗಿ ಈ ಮಾರಣಾಂತಿಕ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನ ಆಚರಣೆಯ ಮುಖ್ಯ ಉದ್ದೇಶವಾಗಿದೆ.
ಕ್ಯಾನ್ಸರ್‌ನ ವಿಧಗಳು
ಕ್ಯಾನ್ಸರ್‌ನಲ್ಲಿ ಸುಮಾರು ನೂರಕ್ಕಿಂತ ಹೆಚ್ಚು ವಿಧಗಳಿವೆ. ಅವುಗಳಲ್ಲಿ ಸಾಮಾನ್ಯವಾದವು ಚರ್ಮದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಕೊಲೊರೆಕ್ಟಲ್ ಕ್ಯಾನ್ಸರ್, ಮೆಲನೋಮ, ಲಿಂಫೋಮ ಕ್ಯಾನ್ಸರ್, ಮೂತ್ರಪಿಂಡದ ಕ್ಯಾನ್ಸರ್‌ಗಳಿವೆ. ಆದರೆ ಭಾರತದಲ್ಲಿ ಬಾಯಿ, ಗರ್ಭಾಶಯ ಮತ್ತು ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತವೆ ಎಂದು ವರದಿಯೊಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮತ್ತೊಂದು ವಿದ್ಯಾಸಂಸ್ಥೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ!
ಮೊದಲ, ಎರಡನೇಯ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಮಾಡಿದರೆ ಸುಲಭವಾಗಿ ರೋಗ ಗುಣಪಡಿಸುವ ಸಾಧ್ಯತೆ ಇದೆ. ಕ್ಯಾನ್ಸರ್ ರೋಗದಿಂದ ಮುಕ್ತರಾಗಲು ಆಹಾರ ಪದ್ಧತಿ ಮತ್ತು ಜೀವನಶೈಲಿ ಬದಲಾವಣೆ ಮಾಡಿಕೊಳ್ಳಬೇಕು.
ಪ್ರತಿದಿನ ಯೋಗ, ವ್ಯಾಯಾಮ ಮತ್ತು ವಾಕಿಂಗ್ ಹಾಗೂ ಉತ್ತಮ ಆಹಾರ ಸೇವನೆ ಮಾಡಬೇಕು. ತೂಕ ಕಡಿಮೆ, ರಕ್ತಸ್ರಾವ, ಸತತವಾಗಿ ಜ್ವರ, ನೆಗಡಿ, ಕೆಮ್ಮು ಇದ್ದಲ್ಲಿ ವೈದ್ಯರಲ್ಲಿ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರತಿ ಆರು ತಿಂಗಳಿಗೆ ಒಮ್ಮೆ ಸಂಪೂರ್ಣ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ.