ಗುಜರಾತ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ನವರಾತ್ರಿ ಸಂಭ್ರಮಾಚರಣೆ ಸಂದರ್ಭದಲ್ಲಿ ಪ್ರದರ್ಶಿಸಲಾಗುವ ಗರ್ಬಾ ನೃತ್ಯದ ವೇಳೆ ಕನಿಷ್ಠ 10 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದು, ಮೃತಪಟ್ಟವರ ಪೈಕಿ ತರುಣರಿಂದ ಹಿಡಿದು ಮಧ್ಯ ವಯಸ್ಸಿನವರೇ ಇದರಲ್ಲಿ ಹೆಚ್ಚಿನವರು ಎಂದು ವರದಿಯಾಗಿದೆ.
ಬರೋಡಾದ ದಭೋಯಿಯಲ್ಲಿ 13 ವರ್ಷದ ಬಾಲಕ ಅಸುನೀಗಿದ್ದರೆ, ಅಹಮದಾಬಾದ್‌ನಲ್ಲಿ ಶುಕ್ರವಾರ 24 ವರ್ಷದ ಯುವಕ ಗರ್ಬಾ ಪ್ರದರ್ಶಿಸುವಾಗ ಹಠಾತ್ತನೆ ಕುಸಿದು ಬಿದ್ದಿದ್ದಾನೆ. ಅದೇ ರೀತಿ ಕಪಾಡ್ವಂಜ್‌ನಲ್ಲಿ 17 ವರ್ಷದ ಬಾಲಕ ಕೂಡ ಗರ್ಬಾ ನರ್ತನದ ವೇಳೆ ಕುಸಿದುಬಿದ್ದು ಸಾವಿಗೀಡಾಗಿದ್ದಾನೆ. ಹಿಂದಿನ ದಿನ ಕೂಡ ರಾಜ್ಯದ ವಿವಿಧೆಡೆ ಇದೇ ರೀತಿಯ ಘಟನೆಗಳು ವರದಿಯಾಗಿರುವುದಾಗಿ ಗುಜರಾತ್‌ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ನವರಾತ್ರಿಯ ಮೊದಲ ಆರು ದಿನಗಳಲ್ಲಿ 108 ತುರ್ತು ಆಂಬುಲೆನ್ಸ್ ಸೇವೆಗೆ ಹೃದಯ ಸಂಬಂಧಿ ಸಮಸ್ಯೆಗಳಿಗಾಗಿ 521 ಕರೆಗಳು ಬಂದಿದ್ದವು. ಅಲ್ಲದೆ, ಉಸಿರಾಟ ಸಮಸ್ಯೆ ಕುರಿತು 609 ಕರೆಗಳು ಬಂದಿದ್ದವು. ಈ ಕರೆಗಳು ಗರ್ಬಾ ನೃತ್ಯ ನಡೆಯುವ ಸಮಯವಾಗಿರುವ ಸಂಜೆ 6 ರಿಂದ ನಸುಕಿನ 2 ಗಂಟೆ ನಡುವೆ ದಾಖಲಾಗಿದ್ದವು ಎಂದು ತಿಳಿದುಬಂದಿದೆ.
હાર્ટ એટેક આવવાના સાઇલેન્ટ સંકેતો કયા છે? તેને કઈ રીતે ઓળખશો #HeartAttack #Navratri #Garba #WHO #Health #HeartFailure #GujaratFirst pic.twitter.com/74z2aD4Z05
— Gujarat First (@GujaratFirst) October 22, 2023
ಈ ಆಘಾತಕಾರಿ ಬೆಳವಣಿಗೆಯು ಗುಜರಾತ್ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗರ್ಬಾ ನೃತ್ಯ ಆಯೋಜಕರಿಗೆ ಸೂಚನೆ ನೀಡಿದೆ.
ಗರ್ಬಾ ನಡೆಯುವ ಸ್ಥಳಗಳ ಸಮೀಪದಲ್ಲಿನ ಎಲ್ಲ ಸರ್ಕಾರಿ ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ (ಸಿಜಿಎಚ್) ರಾಜ್ಯ ಸರ್ಕಾರ ಸೂಚನೆ ಹೊರಡಿಸಿದ್ದು, ಹೈ ಅಲರ್ಟ್‌ನಿಂದ ಇರುವಂತೆ ಮನವಿ ಮಾಡಿದೆ.
ಯಾವುದೇ ತುರ್ತು ಸನ್ನಿವೇಶ ಎದುರಾದರೂ, ರೋಗಿಗಳನ್ನು ಕಾರ್ಯಕ್ರಮ ಸ್ಥಳದಿಂದ ತ್ವರಿತವಾಗಿ ಕರೆದುಕೊಂಡು ಹೋಗಲು ಆಂಬುಲೆನ್ಸ್‌ಗಳು ಸುಗಮವಾಗಿ ಬರಲು ಅನುಕೂಲವಾಗುವಂತೆ ಕಾರಿಡಾರ್‌ಗಳನ್ನು ನಿರ್ಮಿಸಲು ಗರ್ಬಾ ಆಯೋಜಕರಿಗೆ ಹಾಗೂ ಪೊಲೀಸ್ ಇಲಾಖೆಗೂ ಸೂಚಿಸಿದೆ.
જામનગરમાં વધુ એક બાળકનું હાર્ટ એટેકથી મોત, ખારવા ચકલા વિસ્તારમાં રહેતા 14 વર્ષીય બાળકનું મોત | TV9GujaratiNews#Jamnagar #heartattack #death #gujarat #tv9news pic.twitter.com/ZYduY7AXNU
— Tv9 Gujarati (@tv9gujarati) October 22, 2023
ಈ ನಡುವೆ ಗರ್ಬಾ ಆಯೋಜಕರು ನೃತ್ಯ ಪ್ರದರ್ಶನಗಳಲ್ಲಿ ಭಾಗಿಯಾಗುವ ಎಲ್ಲರ ಸುರಕ್ಷತೆಗಾಗಿ ವೈದ್ಯರು ಹಾಗೂ ಆಂಬುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜಿಸುತ್ತಿದ್ದಾರೆ. ತಮ್ಮ ಸಿಬ್ಬಂದಿಗೆ ಸಿಪಿಆರ್ ನೀಡುವ ತರಬೇತಿ ಕೊಡಿಸುವಂತೆ ಹಾಗೂ ಭಾಗಿಯಾಗುವವರಿಗೆ ಸಾಕಷ್ಟು ನೀರು ಲಭ್ಯವಾಗುವಂತೆ ನೋಡಿಕೊಳ್ಳಲು ಆಯೋಜಕರಿಗೆ ಸೂಚನೆ ನೀಡಲಾಗಿದೆ. ಈ ವರ್ಷದ ನವರಾತ್ರಿ ಹಬ್ಬ ಆರಂಭಕ್ಕೂ ಮುನ್ನ, ಗರ್ಬಾ ಅಭ್ಯಾಸದ ವೇಳೆ ಗುಜರಾತ್‌ನಲ್ಲಿ ಮೂವರು ಹೃದಯಾಘಾತದಿಂದ ಮತಪಟ್ಟಿದ್ದ ಬಗ್ಗೆಯೂ ವರದಿಯಾಗಿತ್ತು.