ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ನಂದಿನಗರದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದದ್ಯಾಲಯದಲ್ಲಿ ಜನವರಿ17 ರಿಂದ 19 ರವರೆಗೆ ಮೂರು ದಿನಗಳ ಕಾಲ ವಿವಿಧ ಜಾನುವಾರು, ಕುಕ್ಕುಟ ಮತ್ತು ಮತ್ಸ್ಯಮೇಳ ಆಯೋಜಿಸಲಾಗಿದೆ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಕೆ.ಸಿ.ವೀರಣ್ಣ ಹೇಳಿದರು.
ʼರೈತರಿಗೆ, ಪಶು ಹಾಗೂ ಮೀನುಗಾರಿಕೆ ಸಾಕಾಣಿಕೆಯಲ್ಲಿ ಆಸಕ್ತಿಯುಳ್ಳ ಯುವ ಜನರಿಗೆ ವಿವಿಧ ತಳಿಗಳ, ಹೊಸ ತಂತ್ರಜ್ಞಾನಗಳು, ಸಾಕಾಣಿಕ ಪದ್ಧತಿಗಳು ಹಾಗೂ ಇತರ ಅವಿಷ್ಕಾರಗಳನ್ನು ತಿಳಿದುಕೊಳ್ಳಲು ಒಂದು ಉತ್ತಮ ಅವಕಾಶವಾಗಿದೆ. ಮೇಳದಲ್ಲಿ 180ಕ್ಕೂ ಹೆಚ್ಚು ಮಳಿಗೆಗಳು ಅಳವಡಿಸಲಾಗುತ್ತದೆ, ಇದರಲ್ಲಿ ವಿವಿಧ ಇಲಾಖೆಗಳಾದ ಕೃಷಿ, ರೇಷ್ಮೆ, ತೋಟಗಾರಿಕೆ ಮತ್ತು ಜಾನುವಾರು ಇಲಾಖೆಗಳು ಭಾಗವಹಿಸುತ್ತಿವೆ. ಎಲ್ಲರಿಗೂ ಉಚಿತ ಪ್ರವೇಶವಿದ್ದು, ವಿವಿಧ ಜಿಲ್ಲೆಯಿಂದ ಆಗಮಿಸುವ ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಜ್ಯದ 31 ಜಿಲ್ಲೆಯ ಒಬ್ಬ ರೈತ ಮತ್ತು ರೈತ ಮಹಿಳಾಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇದಲ್ಲದೆ ರೈತರ ಕಲಿಕೆಗಾಗಿ ವಿಜ್ಞಾನಿ-ರೈತ ಸಂವಾದ ಹಾಗೂ ರೈತರ ಸಂವಾದ ಅದಲ್ಲದೆ ಅತ್ಯುತ್ತಮ ಮಳಿಗೆ ಅತ್ಯುತ್ತಮ ಜಾನುವಾರು ತಳಿ ಹೀಗೆ ವಿವಿಧ ಪ್ರಶಸ್ತಿಗಳನ್ನು ಕೂಡ ವಿತರಿಸಲಾಗುತ್ತದೆ ಎಂದರು.
ಪಶು ಮೇಳದಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ಫಲಪುಷ್ಪ ಪ್ರದರ್ಶನವು ʼಶಾಂತಿ ಮತ್ತು ಸಮಾನತೆʼ ಹೆಸರಿನಲ್ಲಿ ಆಯೋಜಿಸಲಾಗುತ್ತಿದೆ. ಗೌತಮ ಬುದ್ಧ, ಭಗವಾನರ ಮೂರ್ತಿ, ಕುವೆಂಪು, ಬಸವಣ್ಣನವರ ಭಾವಚಿತ್ರಗಳನ್ನು ಹೂವಿನ ಅಲಂಕರಿಸಲಾಗುತ್ತದೆ. ತರಕಾರಿಗಳನ್ನು ನೆಲದ ಮೇಲೆ ಕೆತ್ತಿ ತೋರಿಸುವ ವಿನೂತನ ಪ್ರದರ್ಶನ, ಹೂ ಕುಂಡಗಳ ಕಲಾತ್ಮಕ ಜೋಡಣೆ ಪ್ರದರ್ಶನದ ಪ್ರಮುಖ ಆಕಷರ್ಣೆಯಾಗಿರಲಿದೆʼ ಎಂದು ಕುಲಪತಿ ಹೇಳಿದರು.
ಮೇಳದ ಕೊನೆಯ ದಿನದಂದು ಶ್ವಾನ ಪ್ರಿಯರಿಗೆ ಶ್ವಾನ ಪ್ರದರ್ಶನ ಕೂಡ ಆಯೋಜಿಸಲಾಗುತ್ತಿದೆ. ಸುಮಾರು 15 ವಿವಿಧ ತಳಿಗಳ 200 ಶ್ವಾನಗಳು ಇದರಲ್ಲಿ ಭಾಗವಹಿಸಲಿವೆ. ಕರ್ನಾಟಕದ ಹೆಮ್ಮೆಯನ್ನು ಹೆಚ್ಚಿಸುವ ನಮ್ಮದೇ ಆದ ಮುಧೋಳ ಹೌಂಡ್ ಕೂಡ ಪ್ರದರ್ಶನಗೊಳ್ಳಲಿದೆ. ಪ್ರತಿ ಗಂಡು ಮತ್ತು ಹೆಣ್ಣು ಶ್ವಾನಗಳಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ನೀಡಲಾಗುತ್ತಿದೆ.
ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಶ್ವಾನಗಳನ್ನು ಚಾಂಪಿಯನ್ ಆಫ್ ಚಾಂಪಿಯನ್ಸ್ ಮತ್ತು ರನ್ನರ್-ಅಪ್‍ಚಾಂಪಿಯನ್ ಆಫ್ ಚಾಂಪಿಯನ್ಸ್ ನೀಡಲಾಗುತ್ತದೆ. ಮೊದಲ ಬಹುಮಾನ 5000 ಮತ್ತು ಎರಡನೇ ಬಹುಮಾನ 3000 ಬಹುಮಾನ ಇರಲಿದೆ. ಪ್ರದರ್ಶನದ ಜೊತೆಗೆ ಎಲ್ಲ ಶ್ವಾನಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕೆ ನೀಡಲಾಗುವುದುʼ ಎಂದ ತಿಳಿಸಿದರು.

ಪಶುಸಂಗೋಪನೆ, ಮೀನು ಸಾಕಾಣೆಗೆ ಹಾಗೂ ಕೋಳಿ ಸಾಕಾಣಿಕೆ ಬಗ್ಗೆ ತಿಳಿದು ಕೊಳ್ಳಲು ರಾಜ್ಯದ ರೈತರಿಗೆ, ಯುವ ಜನರಿಗೆ ಹಾಗೂ ಶಾಲಾ ಮಕ್ಕಳಿಗೆ ಒಂದು ಉತ್ತಮ ಅವಕಾಶವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಈ ಮೇಳದಲ್ಲಿ ಪಾಲ್ಗೊಂಡು ಮೇಳದ ಲಾಭವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಬೇಡಿಕೆ : ಇಚ್ಚಾಶಕ್ತಿ ತೋರದ ಜನಪ್ರತಿನಿಧಿಗಳು
ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಬತಮುರ್ಗೆ, ಡೀನ್ ಎಂ.ಕೆ.ತಾಂದಳೆ, ಡಾ.ವಿವೇಕ ಹೊಸಳ್ಳಿ, ಶ್ರೀಕಾಂತ ಕುಲಕರ್ಣಿ ಮಾಧ್ಯಮ ಸಂಯೋಜಿತ ಚನ್ನಪ್ಪಗೌಡ ಬಿರಾದಾರ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ನರಸಪ್ಪ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ಇತರೆ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.