ಪ್ರತಿಷ್ಠಿತ ಆ್ಯಷಸ್ ಸರಣಿಯ ಎರಡನೇ ಟೆಸ್ಟ್‌ನ ಮೂರನೇ ದಿನದಲ್ಲಿ ಆಸಿಸ್ ಪಾರಮ್ಯ ಮೆರೆದಿದೆ. ಮೊದಲ ಇನ್ನಿಂಗ್ಸ್ ಆಡಿದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯ ಬೌಲರ್‌ಗಳ ದಾಳಿಗೆ ಸಿಲುಕಿ 325 ರನ್‌ಗಳಿಗೆ ಆಲೌಟ್ ಆಗಿ 91 ರನ್‌ಗಳ ಹಿನ್ನಡೆ ಅನುಭವಿಸಿದೆ.
ಆಸಿಸ್ ಪಡೆ ನೀಡಿದ್ದ 416 ರನ್‌ಗಳಿಗೆ ಉತ್ತರವಾಗಿ ದಿಟ್ಟ ಪ್ರತಿಕ್ರಿಯೆ ನೀಡಲು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಆರಂಭಿಕ ಆಟಗಾರ ಬೆನ್ ಡಕೆಡ್ 98, ಹ್ಯಾರಿ ಬ್ರೂಕ್ 50, ಝಾಕ್ ಕ್ರಾಲಿ 48 ಹಾಗೂ ಅಲಿ ಪೋಪ್ 42 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರ್ಯಾರು ಪ್ರತಿರೋಧ ತೋರಲಿಲ್ಲ.
ಆಸ್ಟ್ರೇಲಿಯ ಪರ ಮಿಚೆಲ್ ಸ್ಟಾರ್ಕ್ 88/3, ಟ್ರಾವಿಸ್ ಹೆಡ್ 17/2, ಜೋಶ್ ಹ್ಯಾಜಲ್ವುಡ್ 71/2 ವಿಕೆಟ್ ಪಡೆದು ತಂಡದ ಮುನ್ನಡೆಗೆ ಸಹಕಾರ ನೀಡಿದರು.
ಇದಕ್ಕೂ ಮೊದಲು ಮೊದಲ ಇನ್ನಿಂಗ್ಸ್ ಆಡಿದ್ದ ಆಸ್ಟ್ರೇಲಿಯಾ 416 ರನ್ ಪೇರಿಸಿತ್ತು. ತಂಡದ ಪರ ಮಾಜಿ ನಾಯಕ ಸ್ಟೀವ್ ಸ್ಮಿತ್ 184 ಎಸೆತಗಳನ್ನು ಎದುರಿಸಿ 15 ಬೌಂಡರಿ ಸಹಿತ 110 ರನ್ ಗಳಿಸಿ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು. ಇವರೊಂದಿಗೆ ಟ್ರಾವಿಸ್ ಹೆಡ್ 73 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 77, ಡೇವಿಡ್ ವಾರ್ನರ್ 66, ಮಾರ್ನಸ್ ಲ್ಯಾಬುಸ್ಚಾಗ್ನೆ ಗಳಿಸಿದ 47 ರನ್ ಕೂಡ ಆಸಿಸ್ 400ರ ಗಡಿ ದಾಟಲು ಸಹಾಯಕವಾಯಿತು.
ಈ ಸುದ್ದಿ ಓದಿದ್ದೀರಾ? ಸರ್ಫ್ರಾಜ್ ಖಾನ್ ಮುಸ್ಲಿಂ ಆಗಿದ್ದೇ ಭಾರತ ತಂಡಕ್ಕೆ ಆಯ್ಕೆ ಆಗದಿರಲು ಕಾರಣವೇ?
ಇಂಗ್ಲೆಂಡ್ ಪರ ಜೋಶ್ ಟಾಂಗ್ 98/3, ಒಲಿ ರಾಬಿನ್ಸನ್ 100/3 ಹಾಗೂ ಜೋ ರೂಟ್ 19/2 ವಿಕೆಟ್ ಪಡೆದು ಯಶಸ್ವಿ ಬೌಲರ್‌ಗಳೆನಿಸಿದರು.
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯ ತಂಡ ಇತ್ತೀಚಿನ ವರದಿಗಳೊಂದಿಗೆ 22 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 58 ರನ್ ಗಳಿಸಿದೆ. ಉಸ್ಮಾನ್ ಖವಾಜಾ 35 ಹಾಗೂ ಡೇವಿಡ್ ವಾರ್ನರ್ 20 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಟೆಸ್ಟ್ನಲ್ಲಿ ಸ್ಟೀವ್ ಸ್ಮಿತ್ 32ನೇ ಶತಕ
ಆ್ಯಷಸ್ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್ ವೃತ್ತಿಯಲ್ಲಿ 32ನೇ ಶತಕ ಪೂರೈಸಿದರು. ಇದರೊಂದಿಗೆ ಅತಿಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿಯಾಗಿ 8ನೇ ಸ್ಥಾನಕ್ಕೇರಿದ್ದಾರೆ. ಸ್ಟೀವ್ ವಾ ಅವರ 32 ಶತಕಗಳ ದಾಖಲೆಯನ್ನು ಸ್ಮಿತ್ ಸರಿಗಟ್ಟಿದ್ದು, ಇನ್ನೊಂದು ಶತಕ ಬಾರಿಸಿದರೆ ಇಂಗ್ಲೆಂಡ್‌ನ ಮಾಜಿ ನಾಯಕ ಅಲಿಸ್ಟರ್ ಕುಕ್ ಜೊತೆ ಸಮಬಲ ಸಾಧಿಸಲಿದ್ದಾರೆ. ಆಸಿಸ್ ಆಟಗಾರರ ಪೈಕಿ ಸದ್ಯ 2ನೇ ಸ್ಥಾನದಲ್ಲಿದ್ದು ಮೊದಲ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್(41 ಶತಕ) ಅವರನ್ನು ಹಿಂದಿಕ್ಕಲು ಇನ್ನೂ 10 ಶತಕ ಬಾರಿಸಬೇಕಿದೆ.