ಕಳ್ಳತನ ಪ್ರಕರಣದಲ್ಲಿ ತನಿಖೆ ನಡೆಸುವಾಗ ಶಂಕಿತರು ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ನಡೆದಿದೆ. ತನಿಖೆ ನಡೆಸುದ್ದಿ ಬಳಗಾನೂರು ಠಾಣೆಯ ಪೊಲೀಸ್ ಸಿಬ್ಬಂದಿ ಮೇಲೆ ಸೋಮವಾರ ಸಂಜೆ ಹಲ್ಲೆ ನಡೆದಿದೆ.
ಠಾಣೆಯ ಸಿಬ್ಬಂದಿ ಮಂಜುನಾಥ ಹಾಗೂ ಗೋಪಾಲ ಎಂಬವರಿಗೆ ಗಾಯಗಳಾಗಿವೆ. ಅವರಿಗೆ ಮಸ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬಳಗಾನೂರು ಠಾಣೆ ವ್ಯಾಪ್ತಿಯಲ್ಲಿ ಸುಂಕನೂರು ಗ್ರಾಮದಲ್ಲಿ ಇತ್ತೀಚೆಗೆ ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಕೊಂಡಿದ್ದ ಪೊಲೀಸರು ತನಿಖೆ ನಡೆಸುತ್ತಿದ್ದರು. ಈ ವೇಳೆ, ಗುಡದೂರು ಬಳಿ ಇಬ್ಬರು ಅನುಮಾನಸ್ಪದ ರೀತಿಯಲ್ಲಿ ಬೈಕ್‌ನಲ್ಲಿ ಓಡಾಡುತ್ತಿದ್ದುದ್ದನ್ನು ಪೊಲೀಸರು ಗಮನಿಸಿದ್ದಾರೆ. ಅವರನ್ನು ತಡೆದು ವಿಚಾರಿಸಲು ಹೋಗಿದ್ದಾರೆ.
ಈ ವೇಳೆ, ಆ ಇಬ್ಬರೂ ಪೊಲೀಸರನ್ನು ತಳ್ಳಿ, ಪರಾರಿಯಾಗಲು ಯತ್ನಿಸಿದ್ದಾರೆ. ಪೊಲೀಸರು ಅವರ ಬೆನ್ನತ್ತಿದ್ದು, ಮಸ್ಕಿಯ ವಾಲ್ಮೀಕಿ ಸರ್ಕಲ್‌ನಲ್ಲಿ ಸಿಕ್ಕಿಕೊಂಡಿದ್ದಾರೆ. ಅಲ್ಲಿ, ಆರೋಪಿಗಳು ಪೊಲೀಸರ ಮೇಲೆ ಕಲ್ಲು, ಬಡಿಗೆಯಿಂದ ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
“ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳ ಬಂಧನಕ್ಕೆ ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ಬಳಗಾನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ತಿಳಿಸಿದ್ದಾರೆ.