ಭಾರತೀಯ ಸಿನಿಮಾ ರಂಗದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ, ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದ ಗಾಯಕಿ ಭವತಾರಿಣಿ ಜನವರಿ 25ರಂದು ಶ್ರೀಲಂಕಾದಲ್ಲಿ ವಿಧಿವಶರಾಗಿದ್ದಾರೆ. ಕೆಲ ವರ್ಷಗಳಿಂದ ಅವರು ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.
ಭವತಾರಿಣಿ ಅವರಿಗೆ 47 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಪಡೆಯಲು ಶ್ರೀಲಂಕಾಗೆ ತೆರಳಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅಲ್ಲಿಯೇ ನಿಧನರಾಗಿದ್ದಾರೆ. ಇಂದು ಅವರ ಪಾರ್ಥಿವ ಶರೀರವನ್ನು ಚೆನ್ನೈಗೆ ತರಲಾಗುತ್ತಿದೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಭವತಾರಿಣಿ ಅವರು ಗಾಯಕಿಯಾಗಿ, ಸಂಗೀತ ನಿರ್ದೇಶಕಿಯಾಗಿ ಗಮನಸೆಳೆದವರು. ಭವತಾರಿಣಿ ಅವರ ನಿಧನಕ್ಕೆ ತಮಿಳು ಚಿತ್ರರಂಗ ಸಂತಾಪ ಸೂಚಿಸಿದೆ. ಇಳಯರಾಜ ಅವರಿಗೆ ಕಾರ್ತಿಕ್ ರಾಜ, ಯುವನ್ ಶಂಕರ್ ರಾಜಾ ಮತ್ತು ಭವತಾರಿಣಿ ಹೀಗೆ ಮೂವರು ಮಕ್ಕಳು. ಆದರೆ ಇದೀಗ ಮಗಳನ್ನು ಕಳೆದುಕೊಂಡಿರುವುದು ಇಳಯರಾಜ ಕುಟುಂಬಕ್ಕೆ ತೀವ್ರ ದುಃಖ ನೀಡಿದೆ. ಇಂದು (ಜ.26)ಅವರ ಅಂತ್ಯಕ್ರಿಯೆಯು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ಇಳಯರಾಜ ಅವರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದು ಯುವನ್ ಶಂಕರ್ ರಾಜಾ ಮತ್ತು ಭವತಾರಿಣಿ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಯುವನ್ ಶಂಕರ್ ಸಂಗೀತ ನಿರ್ದೇಶಕರಾಗಿದ್ದರೆ ಭವತಾರಿಣಿ ಗಾಯಕಿ. ‘ಮಾಯಿಲ್ ಪೋಲ ಪೊನ್ನು ಒನ್ನು’ ಚಿತ್ರಕ್ಕಾಗಿ ಇವರಿಗೆ ರಾಷ್ಟ್ರೀಯ ಪುರಸ್ಕಾರ ಕೂಡ ಲಭಿಸಿತ್ತು. ಕನ್ನಡ ಚಿತ್ರರಂಗದಲ್ಲಿ ಗಾಯಕಿ, ಸಂಗೀತ ನಿರ್ದೇಶಕಿಯಾಗಿ ಕೂಡ ಭವತಾರಿಣಿ ಕೆಲಸ ಮಾಡಿದ್ದರು.
ಮಾಜಿ ಪತ್ರಕರ್ತ ಎಸ್ ಎನ್ ರಾಮಚಂದ್ರನ್ ಅವರ ಪುತ್ರ ಆರ್ ಶಬರಿರಾಜ್ ಅವರನ್ನು ಭವತಾರಿಣಿ ಮದುವೆಯಾಗಿದ್ದರು. ತಮ್ಮ ಶಿಕ್ಷಣವನ್ನೆಲ್ಲ ಅವರು ಚೆನ್ನೈನಲ್ಲೇ ಪಡೆದುಕೊಂಡಿದ್ದರು.