ಸರ್ಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಗುಣಮಟ್ಟ ಶಿಕ್ಷಣಕ್ಕೆ ಒತ್ತು ನೀಡಿದರೆ ಪೋಷಕರು ತಂತಾನೇ ಮಕ್ಕಳನ್ನು ಸೇರಿಸಲು ಉತ್ಸಾಹ ತೋರುತ್ತಾರೆ ಎಂದು ಹಿರಿಯ ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ ಹೇಳಿದರು.
ಅವಿರತ ಆರ್ಗನೈಶೇನ್ ವತಿಯಿಂದ ಬೀದರ್ ತಾಲ್ಲೂಕಿನ ಬೆಳ್ಳೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಂಗ್ಲ ಹಾಗೂ ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳ ಹಾವಳಿಯಿಂದ ಅನೇಕ ಕಡೆ ಸರ್ಕಾರಿ ಶಾಲೆಗಳು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲುಗುತ್ತಿವೆ. ಮಕ್ಕಳನ್ನು ಬಹುಮುಖಿ ಪ್ರತಿಭಾವಂತರನ್ನಾಗಿ ಮಾಡುವ ಜೊತೆಗೆ ಶಾಲೆಯಲ್ಲಿ ಕಲಿಕೆಯ ವಾತಾವರಣ ನಿರ್ಮಿಸಲು ಶಿಕ್ಷಕರು ಗುಣಮಟ್ಟ ಶಿಕ್ಷಣ, ನೈತಿಕ ಮೌಲ್ಯ ಬೋಧನೆಗೆ ಮುಂದಾಗಬೇಕುʼ ಎಂದು ತಿಳಿಸಿದರು.
ಚಿಂತಕ ದಿಲೀಪ ಚಂದಾ ಮಾತನಾಡಿ, ʼಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳ ಕಲಿಕೆಗೆ ಅಗತ್ಯವಿರುವ ನೋಟ್ ಬುಕ್ ಸೇರಿದಂತೆ ಇತರ ಸಾಮಾಗ್ರಿ ಕಾರ್ಯ ಅವಿರತ ತಂಡದಿಂದ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅವಿರತ ಆರ್ಗನೈಶೇನ್ ತಂಡದಿಂದ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಲ್ಲಿ ವಿಭಿನ್ನ ಕಾರ್ಯಕ್ರಮ ಆಯೋಜಿಸುವ ಯೋಜನೆಯಿದೆʼ ಎಂದು ಹೇಳಿದರು.

ಪತ್ರಕರ್ತ ಬಾಲಾಜಿ ಕುಂಬಾರ ಮಾತನಾಡಿ, ʼಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಉಳಿಸುವುದು ಇಂದಿನ ಸವಾಲಿನ ಕೆಲಸವಾಗಿದೆ. ಶಿಕ್ಷಕ ಇಚ್ಛಾಶಕ್ತಿ, ಪೋಷಕರ ಪ್ರೋತ್ಸಾಹದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ. ಸರ್ಕಾರೇತರ ಸಂಘ-ಸಂಸ್ಥೆಗಳು, ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳ ಸಹಾಯಧನದಿಂದ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಬಹುದು. ಮಕ್ಕಳನ್ನು ಮೌಲ್ಯ ಶಿಕ್ಷಣ, ಪಠೇತ್ಯರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕುʼ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ ಕೋಟೆಯಲ್ಲಿ ವಿಶ್ವ ಯೋಗ ದಿನಾಚರಣೆ ; ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭಾಗಿ
ಎಸ್‌ಡಿಎಂಸಿ ಅಧ್ಯಕ್ಷ ಶಾಮಸನ್ ಅಧ್ಯಕ್ಷತೆ ವಹಿಸಿದ್ದರು. ಅವಿರತ ತಂಡದ ಸದಸ್ಯ ಪ್ರವೀಣಕುಮಾರ್ ರತ್ನಾಕರ್, ಸಂಪನ್ಮೂಲ ಶಿಕ್ಷಕರಾದ ಸುಲೋಚನಾ, ರಘುಶಂಖ ಭಾತಂಭ್ರಾ, ಶಿಕ್ಷಕರಾದ ಮನೋಹರ ಕಾಶಿ, ವಿಠ್ಠಲ ವರ್ಮಾ ಮತ್ತಿತರರು ಹಾಜರಿದ್ದರು. ಶಾಲೆಯ ಮುಖ್ಯ ಶಿಕ್ಷಕ ನಾಗಶೆಟ್ಡಿ ಗಾದಗೆ ಸ್ವಾಗತಿಸಿದರು. ಶಿಕ್ಷಕಿ ಸುಜಾತಾ ಎಸ್, ರುದ್ರಾ ನಿರೂಪಿಸಿ, ವಂದಿಸಿದರು.