ರಸ್ತೆ ಅಗಲೀಕರಣದಿಂದ ಮನೆ ಹಾಗೂ ಜಮೀನು ಕಳೆದುಕೊಳ್ಳುವ ಆತಂಕದಲ್ಲಿ ರೈತರೊಬ್ಬರು ದಯಾಮರಣ ನೀಡುವಂತೆ ಹಗ್ಗ, ಕತ್ತಿ, ವಿಷದ ಬಾಟಲಿಯನ್ನು ಇಟ್ಟುಕೊಂಡು ಏಕಾಂಗಿಯಾಗಿ ಪ್ರತಿಭಟನೆಗೆ ಕುಳಿತಿರುವ ಘಟನೆಯೊಂದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ತಹಶೀಲ್ದಾರ್ ಕಚೇರಿಯ ಮುಂದೆ ಮಂಗಳವಾರ ನಡೆದಿದೆ.

ಕನ್ನಾಪುರ ಮಾರ್ಗವಾಗಿ ಹಾದು ಹೋಗಿರುವ ವಿರಾಜಪೇಟೆ, ಬೈಂದೂರು ರಾಜ್ಯ ಹೆದ್ದಾರಿಯನ್ನು 50 ಅಡಿ ಅಗಲೀಕರಣ ಮಾಡುವುದಾಗಿ ನೋಟಿಸನ್ನು ಅಧಿಕಾರಿಗಳು ನೀಡಿದ್ದಾರೆ. ಹಾಗೆಯೇ, ರಸ್ತೆ ಅಗಲೀಕರಣ ಮಾಡಲು ಜಾಗವನ್ನು ಗುರುತು ಪಡಿಸಿದ್ದಾರೆ. ರಸ್ತೆ ಅಗಲೀಕರಣದಿಂದಾಗಿ ನಮ್ಮ ಮನೆ, ಜಮೀನು ಕಳೆದುಕೊಳ್ಳಬೇಕಾಗುತ್ತದೆ. ಈ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಏನೂ ಪ್ರಯೋಜನವಿಲ್ಲ, ಗಂಟೆಗಟ್ಟಲೆ ಬೆಳಗ್ಗೆಯಿಂದ ರಾತ್ರಿಯವರೆಗೂ ಅಧಿಕಾರಿಗಳ ಕಚೇರಿ ಮುಂದೆ ಕೂರಿಸಿಕೊಂಡು ನಂತರ ಮನೆಗೆ ಹೋಗಿ ಎಂದು ಅಧಿಕಾರಿಗಳು ಹೇಳುತ್ತಾರೆ, ಎಂದು ದಯಾಮರಣ ಕೋರಿದ ರೈತ ಐ ಎಂ ಶ್ರೀನಿವಾಸ್ ಈದಿನ.ಕಾಮ್ ಜೊತೆ ಮಾತಾಡಿದ್ದಾರೆ.

ದಯಾಮರಣ ಅರ್ಜಿ ಸಲ್ಲಿಸಿ 60 ದಿನ ಕಳೆದರೂ ಯಾವುದೇ ವಿಚಾರಣೆ ನಡೆಯದ ಕಾರಣ ಮತ್ತು ಅಧಿಕಾರಿಗಳ ಕಚೇರಿಗೆ ಪ್ರತಿದಿನ ಅಲೆದು ಸಾಕಾಗಿ ಕೊನೆಗೆ ನ್ಯಾಯ ಕೊಡಿ ಇಲ್ಲ ಸಾಯಲು ಬಿಡಿ, ಎಂದು ಮೂಡಿಗೆರೆ ತಹಶೀಲ್ದಾರ್ ಕಚೇರಿ ಮುಂದೆ ರೈತರಾದ ಐ ಎಂ ಶ್ರೀನಿವಾಸ್ ಎಂಬ ವ್ಯಕ್ತಿ ವಿಷದ ಬಾಟಲಿ, ಹಗ್ಗ, ಕತ್ತಿ ಇಟ್ಟುಕೊಂಡು ಪ್ರತಿಭಟಿಸಿದ್ದಾರೆ. ಸುಮಾರು 30 ವರ್ಷದಿಂದ ನ್ಯಾಯಾಲಯದ ಆದೇಶವನ್ನು ತಾಲ್ಲೂಕು ಕಛೇರಿಯಲ್ಲಿ ಇಲ್ಲಿತನಕ ವಿಚಾರಣೆ ಮಾಡದೇ ಇರುವುದರಿಂದ, ಲೋಕೋಪಯೋಗಿ ಇಲಾಖೆಯವರು ನಿಮಗೆ ಪ್ರಶ್ನೆ ಮಾಡುವ ಅಧಿಕಾರ ಇಲ್ಲವೆಂದು ಹೇಳುತ್ತಾರೆ. ನನ್ನ ಮನವಿಗೆ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗದ ಕಾರಣ ಸಾಯಲು ಮುಂದಾಗಿದ್ದೇನೆಂದು ಐ ಎಂ ಶ್ರೀನಿವಾಸ್ ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಯಾದ ಮೀನಾ ನಾಗರಾಜ್ ಅವರಿಗೆ ಮನವಿ ಮಾಡಿ ಏಕಾಂಗಿ ಪ್ರತಿಭಟನೆಗೆ ಕುಳಿತಿದ್ದೆ. ಇದನ್ನೂ ಗಮನಿಸಿದ ಮೂಡಿಗೆರೆ ತಾಲೂಕಿನ ಪೊಲೀಸರು ಹಗ್ಗ, ಕತ್ತಿ, ವಿಷದ ಬಾಟಲಿಯನ್ನೂ ವಶಕ್ಕೆ ಪಡೆದಿದ್ದಾರೆ ಎಂದು ರೈತರಾದ ಐ ಎಂ ಶ್ರೀನಿವಾಸ್ ಈದಿನ.ಕಾಮ್ ಗೆ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಪರೀಕ್ಷೆಯಲ್ಲಿ ಅನುತ್ತೀರ್ಣ ಭಯದಿಂದ ವಿದ್ಯಾರ್ಥಿನಿ ಅತ್ಮಹತ್ಯೆ
ನ್ಯಾಯ ದೊರೆತ್ತಿಲ್ಲವೆಂದರೆ ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಗಾಂಧಿಜೀಗೆ ಮನವಿ ಸಲ್ಲಿಸಿ. ಹಾಗೆಯೇ, ಅಜಾದ್ ಪಾರ್ಕ್ ವೃತ್ತದಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತೇನೆಂದು ಐ ಎಂ ಶ್ರೀನಿವಾಸ್ (ರೈತ) ತಿಳಿಸಿದರು. ಆದಷ್ಟು ಬೇಗ ರೈತರಾದ ಐ ಎಂ ಶ್ರೀನಿವಾಸ್ ಅವರಿಗೆ ನ್ಯಾಯ ಸಿಗಲಿ ಎಂದು ಆಶಿಸೋಣ.