ಔರಾದ ತಾಲೂಕಿನಾದ್ಯಂತ ನಿಯಮಬಾಹಿರವಾಗಿ ನಡೆಯುತ್ತಿರುವ ಕೋಚಿಂಗ್ ಕೇಂದ್ರಗಳು ಹಾಗೂ ಅನಧಿಕೃತ ವಸತಿ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಕರ್ನಾಟಕ ರಾಜ್ಯ ದಲಿತ ಸೇನೆ ಆಗ್ರಹಿಸಿದೆ.
ಈ ಕುರಿತು ಶುಕ್ರವಾರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಔರಾದ್ ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಅವರಿಗೆ ಸಲ್ಲಿಸಿದರು.
“ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೆ ತಾಲೂಕಿನಲ್ಲಿ ಅನಧಿಕೃತವಾಗಿ ಕೋಚಿಂಗ್ ಕೇಂದ್ರ ಹಾಗೂ ವಸತಿ ಶಾಲೆಗಳು ರಾಜಾರೋಷವಾಗಿ ನಡೆಯುತ್ತಿವೆ. ನವೋದಯ, ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ, ಆದರ್ಶ ಸೇರಿದಂತೆ ಇತರೆ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ಕೊಡಿಸಲಾಗುವುದೆಂದು ಭರವಸೆ ನೀಡಿ ಮುಗ್ಧ ಪಾಲಕರಿಂದ ಸಾವಿರಾರು ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ” ಎಂದು ದೂರಿದರು.
“ವಸತಿ ಶಾಲೆಗಳ ಹೆಸರಿನಲ್ಲಿ ಪೋಷಕರಿಂದ ದುಬಾರಿ ಹಣ ಪಡೆದು ಮಕ್ಕಳಿಗೆ, ವಿಶೇಷವಾಗಿ ಬಾಲಕಿಯರಿಗೆ ಸೂಕ್ತ ರಕ್ಷಣೆ ಇಲ್ಲದೆ ವಸತಿ ಶಾಲೆಗಳು ನಡೆಸಿ ಶಿಕ್ಷಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇಲಾಖೆ ಅನುಮತಿ ಇಲ್ಲದೆ ಕೋಚಿಂಗ್ ಕೇಂದ್ರ ಹಾಗೂ ವಸತಿ ಶಾಲೆಗಳು ನಡೆಸುವ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ಅಕ್ರಮಕ್ಕೆ ಕಡಿವಾಣ ಹಾಕಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ಗೆ ಜಾಮೀನು
ಈ ಸಂದರ್ಭದಲ್ಲಿ ದಲಿತ ಸೇನೆ ತಾಲೂಕು ಅಧ್ಯಕ್ಷ ಸುನಿಲ್ ಮಿತ್ರಾ, ಜಿಲ್ಲಾ ಸಂಚಾಲಕ ರತ್ನದೀಪ ಕಸ್ತೂರೆ, ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಅನಿಲ್ ಹೆಡೆ ಇದ್ದರು.