ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಡಿಯಲ್ಲಿ ಬರುವ ಎಲ್ಲ ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿ ಅಳವಡಿಸಿರುವ ಕನ್ನಡೇತರ ಭಾಷೆ ನಾಮಫಲಕಗಳಲ್ಲಿ ಕಡ್ಡಾಯವಾಗಿ ಪ್ರಥಮ ಭಾಷೆಯಾಗಿರುವ ಕನ್ನಡ ಪದಗಳನ್ನೊಳಗೊಂಡಿರುವ ನಾಮಫಲಕವನ್ನು ಅಳವಡಿಸಬೇಕೆಂದು ಒತ್ತಾಯಿಸಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಪಿಬಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಪಿಬಿ ರಸ್ತೆಯಲ್ಲಿರುವ ಅಂಗಡಿಗಳಿಗೆ ಅಳವಡಿಸಿರುವ ಆಂಗ್ಲ ನಾಮಫಲಕಗಳಿಗೆ ಮಸಿ ಬಳಿದು ಕನ್ನಡಫಲಕ ಅಳವಡಿಸುವಂತೆ ಆಗ್ರಹಿಸಿದರು.
ವೇದಿಕೆ ಸಂಸ್ಥಾಪಕ ಅಧ್ಯಕ್ಷ ವಿ ಅವಿನಾಶ್ ಮಾತನಾಡಿ, “ರಾಜ್ಯ ಸರ್ಕಾರವು ಆಡಳಿತ ಭಾಷೆಯಾಗಿ 1953ರಲ್ಲಿ ನಿರ್ಧಿಷ್ಟಪಡಿಸಿ ಆದೇಶ ಹೊರಡಿಸಿತ್ತು. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಸಾರ್ವಭೌಮತೆ ಮತ್ತು ರಾಜ್ಯ ಸರ್ಕಾರದ ಆಡಳಿತದಲ್ಲಿ ಕನ್ನಡ ಭಾಷೆಯನ್ನು ಅಗ್ರಸ್ಥಾನ ಕೊಟ್ಟು ರಾಜ್ಯ ಸರ್ಕಾರ ಕನ್ನಡ ಭಾಷೆ ಬಳಕೆಯಾಗಬೇಕೆಂದು ಅನುಷ್ಠಾನಗೊಳಿಸಿ ಆದೇಶ ಹೊರಡಿಸಿತ್ತು” ಎಂದು ಹೇಳಿದರು.
“ಕನ್ನಡಿಗರ ಹಿತಾಸಕ್ತಿಗೆ ಕಾನೂನನ್ವಯ ಕನ್ನಡ ಭಾಷೆಯನ್ನು ಸಕ್ರಿಯಗೊಳಿಸುವ ಸಲುವಾಗಿ ರಾಜ್ಯ ಸರ್ಕಾರದಡಿಯಲ್ಲಿ ಬರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜುಲೈ 2013 ರಂದು ಶೇ.60ರಷ್ಟು ಕನ್ನಡ ಮತ್ತು 40ರಷ್ಟು ಕನ್ನಡೇತರ ಭಾಷೆಗಳನ್ನೊಳಗೊಂಡ, ವಾಣಿಜ್ಯ ಮಳಿಗೆಗಳು ಹಾಗೂ ಇತರ ಕಟ್ಟಡಗಳಲ್ಲಿ, ನಾಮಫಲಕ ಅಳವಡಿಸುವಾಗ ಕಡ್ಡಾಯವಾಗಿ ಕನ್ನಡ ಭಾಷೆ ಹೊಂದಿರುವ ನಾಮಫಲಕವನ್ನು ಅಳವಡಿಸಬೇಕೆಂದು ಆದೇಶಿಸಿತ್ತು” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ₹1.9 ಕೋಟಿ ವೆಚ್ಚದಲ್ಲಿ 109 ʼಕೂಸಿನ ಮನೆʼಗಳ ಸ್ಥಾಪನೆ: ಸಚಿವ ಎನ್ ಚೆಲುವರಾಯಸ್ವಾಮಿ
“ರಾಜ್ಯ ಸರ್ಕಾರವೂ ಕೂಡ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ತೀರ್ಮಾನಕ್ಕೆ ಅನುಮೋದಿಸಿ ಕನ್ನಡ ಪ್ರಥಮ ಭಾಷೆಯಾಗಿ ನಾಮಫಲಕಗಳನ್ನು ಅಳವಡಿಸುವುದಕ್ಕೆ ಆದೇಶಿಸಿತ್ತು. ಅದರ ಪ್ರಕಾರ ದಾವಣಗೆರೆ ಮಹಾನಗರ ಪಾಲಿಕೆ ಅಡಿಯಲ್ಲಿರುವಂತಹ ವಾಣಿಜ್ಯ ಮಳಿಗೆಗಳು ಮತ್ತು ಅಂಗಡಿ ಮುಂಗಟ್ಟುಗಳ ಮುಂದೆ ಕನ್ನಡೇತರ ಭಾಷೆಗಳ ನಾಮಫಲಕಗಳು ಹೆಚ್ಚಾಗಿ ಕಂಡುಬರುತ್ತವೆ. ಆದ ಕಾರಣ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರು ಕೂಡಲೇ ಕನ್ನಡೇತರ ಭಾಷೆಯ ನಾಮಫಲಕ ಹೊಂದಿರುವ ಅಂಗಡಿ ಮುಂಗಟ್ಟುಗಳ ಪರವಾನಿಗೆಯನ್ನು ರದ್ದುಪಡಿಸಬೇಕು. ಕನ್ನಡೇತರ ಭಾಷೆ ಒಳಗೊಂಡಿರುವ ಅಂಗಡಿಗಳಿಗೆ ನೊಟೀಸ್ ಜಾರಿಮಾಡಿ ನಾಮಫಲಕಗಳನ್ನು ತೆರವುಗೊಳಸಬೇಕು” ಎಂದರು.
ಪ್ರತಿಭಟನೆಯಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇದ್ದರು.