ಮೈಸೂರು ಜಿಲ್ಲೆ, ಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮದಲ್ಲಿ ಗುರುವಾರ ದಕ್ಷಿಣ ಭಾರತದ ಬುದ್ಧಗಯಾ ಸ್ಥಾಪನೆಗೆ ಧಮ್ಮ ಸಂಕಲ್ಪ ಹಾಗೂ ಜಾಗೃತಿ ಸಮಾವೇಶ ನಡೆಯಿತು.
ಸದರಿ ಗ್ರಾಮದಲ್ಲಿ ಅಯೋಧ್ಯೆ ರಾಮ ವಿಗ್ರಹಕ್ಕೆ ಶಿಲೆ ದೊರೆತ ಭೂಮಿಯಲ್ಲಿ ದಲಿತ ಕುಟುಂಬ ಒಂದು ಎಕರೆ ಭೂಮಿಯನ್ನು ದಾನ ನೀಡುವುದರ ಮೂಲಕ ದಕ್ಷಿಣ ಭಾರತ ಬುದ್ಧಗಯಾ ಸ್ಮಾರಕ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದೆ.
ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಹಾಗೂ ಭೂಮಿ ದಾನ ನೀಡಿದ ಕುಟುಂಬದ ಸದಸ್ಯರಾದ ಹೆಚ್. ಆರ್. ಸುರೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಅಯೋಧ್ಯೆಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆಗೆ ಇಲ್ಲಿಂದಲೇ ಕಲ್ಲು ರವಾನೆಯಾಗಿದ್ದು. ಈ ಮೂಲಕ ರಾಜ್ಯ, ದೇಶದ ಮಟ್ಟದಲ್ಲಿ ಹಾರೋಹಳ್ಳಿ ಚರ್ಚೆಗೆ ಗ್ರಾಸವಾಗಿದೆ. ದಲಿತರ ಭೂಮಿಯಲ್ಲಿ ದೊರೆತ ಕಲ್ಲು ಇಂದು ರಾಮನ ವಿಗ್ರಹವಾಗಿದೆ.

ಇದನ್ನ ದುರುಪಯೋಗ ಮಾಡಿಕೊಂಡು ಮಾಜಿ ಸಂಸದ ಪ್ರತಾಪ್ ಸಿಂಹ ದಕ್ಷಿಣ ಅಯೋಧ್ಯೆ ಮಾಡುವ ದುರಾಲೋಚನೆಯಿಂದ ಕಲ್ಲು ಸಿಕ್ಕ ದಲಿತರ ಭೂಮಿಯಲ್ಲಿ ಗುದ್ದಲಿ ಪೂಜೆಗೆ ಸಿದ್ಧತೆ ನಡೆಸಿ ಕರಪತ್ರ ಹೊರಡಿಸಿ ಸಂವಿಧಾನ ಒಪ್ಪದ, ವಿರೋಧಿಸುವ ಪೇಜಾವರ ಶ್ರೀ, ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ನೇತೃತ್ವದಲ್ಲಿ ಕಾರ್ಯಕ್ರಮ ದಿಡೀರ್ ನಡೆಸುವ ಪ್ರಯತ್ನ ನಡೆಸಿದಾಗ ಪತ್ರಿಕಾಗೋಷ್ಠಿ ನಡೆಸಿ ವಿರೋಧ ವ್ಯಕ್ತಪಡಿಸಿದ್ದೇವೆ. ಸ್ಥಳೀಯವಾಗಿ ಗ್ರಾಮಸ್ಥರು ಹಾಗೂ ಕುಟುಂಬದವರು ಇದಕ್ಕೆಲ್ಲ ಒಪ್ಪುವುದಿಲ್ಲ ಎನ್ನುವ ಸಂದೇಶ ರವಾನೆ ಮಾಡಿದರು.
ರಾಮನ ಶಿಲೆ ದೊರೆತ ಭೂಮಿಯಲ್ಲಿ ಆರ್ ಎಸ್ ಎಸ್ ಬೇರೂರಲು ಸಂಚು ರೂಪಿಸಿದೆ. ಇದಕ್ಕೆಲ್ಲ ಅವಕಾಶ ಕೊಡುವುದಿಲ್ಲ. ಇದೇ ಜಾಗದಲ್ಲಿ ದಕ್ಷಿಣ ಬುದ್ಧ ಗಯಾ ಸ್ಮಾರಕ ನಿರ್ಮಿಸಲು ನಮ್ಮ ಕುಟುಂಬದವರು ಒಂದು ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದೇವೆ. ಅದುವೇ, ಅಂಬೇಡ್ಕರ್ ಅವರ ಆಶಯದಂತೆ. ನಮಗೆ ಸಂವಿಧಾನ ಎಲ್ಲವೂ ನೀಡಿದೆ. ನಾವು ಸಹ ನಮ್ಮ ಸಮುದಾಯಕ್ಕಾಗಿ ನೀಡುತಿದ್ದೇವೆ ಎಂದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ ” ದಕ್ಷಿಣ ಬುದ್ಧಗಯಾ ಸ್ಮಾರಕ ನಿರ್ಮಾಣಕ್ಕೆ ಭೂಮಿ ನೀಡಿದ ಕುಟುಂಬಕ್ಕೆ ಧನ್ಯವಾದ ತಿಳಿಸಿ. ಬುದ್ಧನ ಇತಿಹಾಸ ನಿರ್ಮಿಸಲು ಹೊರಟಿದ್ದೇವೆ, ಆ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ. ಮನುವಾದಿಗಳು ಎಲ್ಲಿ ಬುದ್ಧ, ಅಂಬೇಡ್ಕರ್ ತತ್ವ, ಸಿದ್ದಂತಗಳು ಪ್ರಚಲಿತಗೊಳ್ಳುತ್ತದೆಯೋ ಅಲ್ಲೆಲ್ಲ ವ್ಯವಸ್ಥಿತವಾಗಿ ಧಮನ ಮಾಡುವುದು ಅವರ ಉದ್ದೇಶವಾಗಿದೆ. ಉತ್ತರ ಭಾರತದಲ್ಲಿ ಬೌದ್ಧ ಧರ್ಮವನ್ನು ಹೇಗೆ ನಾಶ ಪಡಿಸಿದರೋ, ಅಂತಹ ಮನುವಾದಿ ಗಳನ್ನು ಮೂಲೆಗೊತ್ತುವುದೇ ನಮ್ಮ ಗುರಿ ” ಎಂದರು.

” ಈ ದೇಶದ ಪ್ರಧಾನಿ ಯಾವುದೇ ದೇಶಕ್ಕೆ ಹೋದರು ಬುದ್ಧ ಹುಟ್ಟಿದ ನಾಡಿನಿಂದ ಬಂದೆ ಎನ್ನುತ್ತಾರೆ. ಅದೇ ದೇಶದಲ್ಲಿ ಬುದ್ಧ, ಬೌದ್ಧ ಧರ್ಮ ನಾಶಕ್ಕೆ ಮುಂದಾಗಿದ್ದಾರೆ. ಅಂಬೇಡ್ಕರ್ ವಿರೋಧಿಗಳಿಗೆ ಬುದ್ದಿ ಕಲಿಸುವ ನಿಟ್ಟಿನಲ್ಲಿ ಪ್ರವೃತ್ತರಾಗಬೇಕು. ಬುದ್ಧನ ಕಡೆಗೆ ಮುಖ ಮಾಡುತಿದ್ದೇವೆ. ಮತ್ತೆ ಬೌದ್ಧ ಧರ್ಮ ನೆಲೆಗೊಳ್ಳಲಿದೆ. ಸಮಾನತೆಗಾಗಿ ಬುದ್ಧನ ಕಡೆಗೆ ತೆರಳಬೇಕು. ಇಲ್ಲವಾದಲ್ಲಿ ಜಾತಿ, ಧರ್ಮಗಳ ಮೂಲಕ ಮನುವಾದಿಗಳು ಶೋಷಿಸುತ್ತಲೇ ಇರುತ್ತಾರೆ ” ಎಂದು ಕರೆ ನೀಡಿದರು.
ಮೈಸೂರು ಬುದ್ಧ ವಿಹಾರ ಅಧ್ಯಕ್ಷರಾದ ಆರ್. ಮಹಾದೇವ ಮಾತನಾಡಿ ಗೂಗಲ್ ಸರ್ಚ್ ಮಾಡಿದರೆ ದಕ್ಷಿಣ ಅಯೋಧ್ಯೆ ಎಂದು ತೋರುವಂತೆ ಈಗಾಗಲೇ ಮನುವಾದಿಗಳು ಮಾಡಿದ್ದಾರೆ. ಇದರಲ್ಲಿ ಇವರ ಹುನ್ನಾರ ಏನೆಂಬುದು ಸ್ಪಷ್ಟವಾಗಿದೆ. ನಾವು ಅಸ್ಪೃಶ್ಯರಲ್ಲ. ಹಾಗಂತ, ನಮ್ಮ ತಲೆಗೆ ಕಟ್ಟಿ, ಬಿಂಬಿಸಿ ಶೋಷಿಸುತ್ತ ಬಂದಿದ್ದಾರೆ. ಬಾಬಾ ಸಾಹೇಬರ ಬಗ್ಗೆ ಅಧ್ಯಾಯನ ಮಾಡಿದರೆ ತಿಳಿಯುತ್ತೆ ಯಾರು ಅಸ್ಪೃಶ್ಯರು ಎನ್ನುವುದು.
ಮನೆ ಮನೆಗಳಲ್ಲಿ ನೇತು ಹಾಕಿದ ದೇವರ ಫೋಟೋಗಳು ನಮ್ಮವು ಅಲ್ಲಾ. ನಾವೆಲ್ಲಾ ಬೌದ್ಧರು. ಪ್ರತಿ ಹಳ್ಳಿಯಲ್ಲಿ ಗಮನಿಸಿ ಅರಳಿ ಮರ ಇದ್ದೇ ಇರುತ್ತದೆ. ಅದು ಬೌದ್ಧ ಧರ್ಮದ ಸಂಕೇತ. ಅದರಡಿಯಲ್ಲಿ ನಾಗರ ಕಲ್ಲು ಇರುತಿತ್ತು. ಈಗ ಅದನ್ನು ಮನುವಾದಿಗಳು ನವಗ್ರಹ ಮಾಡಿದ್ದಾರೆ ಅಷ್ಟೇ. ಸಮಯಕ್ಕೆ ತಕ್ಕನಾಗಿ ಏನು ಬೇಕಾದರೂ ಮಾಡುತ್ತಾರೆ. ಮನುವಾದಿಗಳು ದೇವರ ಹೆಸರಿನಲ್ಲಿ ಅಸ್ಪೃಶ್ಯತೆ ಹೇರಿಕೆ ಮಾಡುತ್ತಾರೆ. ಆ ಮೂಲಕ ಅಕ್ಷರ, ಸಮಾನತೆ, ಅಧಿಕಾರ ಯಾವುದು ಸಿಗದಂತೆ ಮಾಡಿದ್ದಾರೆ.

ಅದೇ ಒಬ್ಬ ಬ್ರಾಹ್ಮಣ ಒಂದು ದಲಿತ ಕುಟುಂಬದ ಪೂಜೆಗೆ ಬಂದರೆ ಆತನ ಇಡೀ ಕುಟುಂಬ ಒಂದು ತಿಂಗಳು ಕುಳಿತು ಹೊಟ್ಟೆ ತುಂಬಾ ತಿನ್ನುತ್ತಾರೆ. ನಾವು ದುಡಿದು ಇಂತವರ ಹೊಟ್ಟೆಗೆ ಹಾಕುವುದನ್ನು ಮೊದಲು ಬಿಡಬೇಕು. ಕಸ ಗುಡಿಸುವವನನ್ನು ಮಂತ್ರಿ, ಅಧಿಕಾರಿಗಳಾಗಿ ಮಾಡಿದ್ದು ಸಂವಿಧಾನ. ಅದೇ ನಮಗೆ ಬಹುದೊಡ್ಡ ಆಚರಣೆಯಾಗಬೇಕು ಎಂದು ಕಿವಿ ಮಾತು ಹೇಳಿದರು.
ದಸಂಸ ಮುಖಂಡರಾದ ಬೆಟ್ಟಯ್ಯ ಕೋಟೆ ಮಾತನಾಡಿ ‘ ಬುದ್ಧನ ನಾಡಿನಲ್ಲಿ ಮತ್ತೆ ಬುದ್ಧನ ಸ್ಮಾರಕ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಮನೆ ಮನಗಳಲ್ಲಿ ಬೌದ್ಧ ದಮ್ಮ ಬಿತ್ತರವಾಗಬೇಕು. ಅಯೋಧ್ಯೆಯ ನೂರಾರು ಎಕರೆ ಭೂಮಿಯಲ್ಲಿ ಇದ್ದವರು
ಅಲ್ಪ ಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು. ಅಲ್ಲಿ ಎಲ್ಲರ ಭೂಮಿ ಕಸಿದು ಅವರನ್ನೆಲ್ಲ ಅತಂತ್ರ ಮಾಡಿ ದಾಸ್ಯಕ್ಕೆ ತಳ್ಳಿದರು. ಮನೆ ಕಟ್ಟೋರು ನಾವು. ಕಡೆಗೆ ಮನೆಯ ಹೊರಗೆ ನಿಲ್ಲಬೇಕಾದವರು ನಾವೇ. ಇಂತಹ ಧೋರಣೆಯನ್ನು ಖಂಡಿಸಿ, ಅಂಬೇಡ್ಕರ್ ಆಶಯದಂತೆ ಬೌದ್ಧ ಧರ್ಮ ಪಾಲನೆ ಮಾಡಬೇಕು ‘ ಎಂದರು.
ದಸಂಸ ಹಿರಿಯ ಮುಖಂಡ ಹರಿಹರ ಆನಂದ ಸ್ವಾಮಿ ಮಾತನಾಡಿ ‘ ದಲಿತ ಸಮುದಾಯ ಸವಾಲಿನ ನಡುವೆಯೇ ಬದುಕು ಕಟ್ಟಿದೆ. ಶತಮಾನಗಳಿಂದ ಆದ ಅನ್ಯಾಯವಿದು. ಬಾಬಾ ಸಾಹೇಬರು ಎಲ್ಲರಿಗೂ ನ್ಯಾಯ ಸಿಗುವ ನಿಟ್ಟಿನಲ್ಲಿ ಸಂವಿಧಾನ ನೀಡಿದರು. ಅವಕಾಶ ಕಲ್ಪಿಸಿದರು. ಆದರೆ, ಇದುವರೆಗೆ ಅಧಿಕಾರದಲ್ಲಿ ಇರುವವರು ಮನುವಾದಿಗಳೇ ಆಗಿದ್ದಾರೆ. ಶಿಕ್ಷಣದ ಮೂಲಕ ಅರಿವು ಪಡೆದುಕೊಳ್ಳಬೇಕು. ಬದಲಾವಣೆಗೆ ಮುಂದಾಗಬೇಕು. ಆ ನಿಟ್ಟಿನಲ್ಲಿ ದಕ್ಷಿಣ ಬುದ್ಧಗಯಾ ಆರಂಭಗೊಂಡಿದೆ ‘ ಎಂದರು.

ರಾಮನ ಶಿಲೆ ದೊರೆತ ಭೂಮಿ ಮಾಲೀಕರಾದ ರಾಮದಾಸ್ ಅವರ ಮಗ ಕೃಷ್ಣ ಮಾತನಾಡಿ ‘ಒಂದು ಒಳ್ಳೆಯ ಕೆಲಸ ಆಗಬೇಕು ಅಂದರೆ ಒಂದು ಕೆಟ್ಟದು ಆಗಬೇಕು’. ಇಲ್ಲಿ ಕಲ್ಲು ಸಿಕ್ಕಿದ್ದು ನಿಜ, ಅದು ಹೋಗಿದ್ದು ನಿಜ. ಇದಿಲ್ಲಿ ರಾಮ ದೇವಸ್ಥಾನ ಆಗುತ್ತೆ, ದಕ್ಷಿಣ ಅಯೋಧ್ಯೆ ಆಗುತ್ತೆ ಅಂತಲ್ಲ. ಬೇರೆ ಬೇರೆ ರೀತಿಯಲ್ಲಿ ಹೇರಿಕೆ ಆಗಿದೆ ಅಷ್ಟೇ. ನಮ್ಮ ಕುಟುಂಬದವರ ಅಭಿಪ್ರಾಯ ಅಲ್ಲ. ಇದರ ಹಿಂದೆ ಬೇರೆಯವರೇ ಇದ್ದಾರೆ ಎಂದು ಕುಟುಕಿದರು. ನಾನು ಇಲವಾಲದಲ್ಲಿ ಓದುವ ವೇಳೆ ಶಾಲೆ ದುರಸ್ಥಿ ನಡೆಯುವಾಗ ಮಾರಿ ಗುಡಿಗೆ ಶಾಲೆ ಸ್ಥಾಳಾಂತರ ಆಯಿತು. ಎಲ್ಲಿ ದಲಿತರು ದೇವಸ್ಥಾನದೊಳಗೆ ಬಂದು ಬಿಡುತ್ತಾರೋ ಅಂತೇಳಿ ದಲಿತರಿಗೆಲ್ಲ ರಜೆ ಕೊಟ್ಟರು. ಆಗಲೇ ತಿಳಿಯಿತು ಎಷ್ಟರ ಮಟ್ಟಿಗೆ ಜಾತಿ, ಅಸ್ಪೃಶ್ಯತೆ ಇದೆ ಎನ್ನುವುದು ಎಂದು ನೆನಪಿಸಿಕೊಂಡರು.
ನಿವೃತ್ತ ಡಿಸಿಪಿ ಸಿದ್ದರಾಜು ಮಾತನಾಡಿ ‘ ಬುದ್ಧರನ್ನೇ ಪರಿಚಯ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಜುಲೈ.12,1954 ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೋಲಾರ ಹಾಗೂ ಕೆಜಿಎಫ್ ಗೆ ಬಂದು ಹೋಗಿದ್ದಾರೆ. ಅವರೆಲ್ಲಿಗೆ ಬಂದರೋ ಅಲ್ಲಿಗೆಲ್ಲ ಇತಿಹಾಸವಿದೆ. ಬ್ರಾಹ್ಮಣ ಸಮುದಾಯ ಯಾವುದೇ ಶ್ರಮದಾಯಕ ಕೆಲಸಗಳಲ್ಲಿ, ದೇಶ ರಕ್ಷಣೆಯಲ್ಲಿ ಇಲ್ಲ. ಆದರೂ, ದೇಶದ ಅಧಿಕಾರ ಅನುಭವಿಸುವಲ್ಲಿ ಮುಂದಿದೆ ಇದು ಶೋಚನಿಯ.
ಈಗ ಸಾಕ್ಷರತೆಯ ಪ್ರಮಾಣ ಹೆಚ್ಚಿದೆ, ವಿಧ್ಯೆ ಇರುವ ಕಾಲದಲ್ಲೂ ಶೋಷಣೆ ಇದೆ ಎಂದರೆ ನಾಚಕೀಯ. ಇದನ್ನೇ ಅಂದು ಬಾಬಾ ಸಾಹೇಬರು ‘ ಹಿಂದುವಾಗಿ ಹುಟ್ಟಿದ್ದೇನೆ, ನನ್ನ ತೀರ್ಮಾನ ನಾನು ಹಿಂದುವಾಗಿ ಸಾಯಲ್ಲ ‘ ಎಂದು 1934 ರಲ್ಲೇ ತೀರ್ಮಾನಿಸಿ ಬೌದ್ಧ ಧರ್ಮ ಸ್ವೀಕರಿಸಿದರು. ನಾವು ಸಹ ದಮ್ಮ ಪಾಲನೆಗೆ ಮುಂದಾಗಬೇಕು ‘ ಎಂದು ಕರೆ ನೀಡಿದರು.

ಕಲ್ಯಾಣಗಿರಿ ಬಂತೇಜಿ ಮಾತನಾಡಿ ‘ ಇಂದು ಕಾರ ಹುಣ್ಣಿಮೆ. ಹಾರೋಹಳ್ಳಿಯಲ್ಲಿ ದಕ್ಷಿಣ ಬುದ್ಧ ಗಯಾ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿದ್ದು ಸಂತಸದ ವಿಚಾರ. ಮನಸು ತಿಳಿಯಾದರೆ ಬುದ್ಧ ಭಾರತ ಕಟ್ಟಲು ಸಾಧ್ಯ. ಬಾಬಾ ಸಾಹೇಬ್ ಅಂಬೇಡ್ಕರ್ ಬಯಸಿದಂತೆ ನನ್ನ ಜನ ಶಿಕ್ಷತರಾಗಬೇಕು. ನನ್ನ ಜನ ಆಳುವ ಜನ ಆಗಬೇಕು. ನನ್ನ ಜನ ಬೌದ್ಧ ದಮ್ಮದವರಾಗಬೇಕು. ಇದನ್ನ ನಾವೆಲ್ಲರೂ ಪಾಲಿಸುವಂತಾಗಲಿ ‘ ಎಂದು ಆಶೀರ್ವದಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ದೀಪಾರಿಂದ ಸೃಜನಾತ್ಮಕ ಅನುವಾದದ ಹೊಸ ಪಥ ಸೃಷ್ಟಿ : ಜ. ನಾ. ತೇಜಶ್ರೀ
ಕಾರ್ಯಕ್ರಮದಲ್ಲಿ ಸುಗತಪಾಲ ಬಂತೇಜಿ, ಗೌತಮಿ ಬಂತೇಜಿ, ಆರ್ ಮಹದೇವಪ್ಪ, ಹೊರಳವಾಡಿ ನಂಜುಂಡ ಸ್ವಾಮಿ, ಎವಿಎಸ್ ರಾಮಣ್ಣ, ನರೇಂದ್ರ, ಬೆಳವಾಡಿ ಶಿವಕುಮಾರ್, ಚೋರನ ಹಳ್ಳಿ ಶಿವಣ್ಣ, ರೇವಣ್ಣ, ಜ್ಯೋತಿ, ಕೃಷ್ಣದಾಸ್, ಅಲಗೂಡು ಶಿವಕುಮಾರ್, ಭುಗತಗಳ್ಳಿ ಮಣಿ, ಶಂಭುಲಿಂಗ ಸ್ವಾಮಿ ಸೇರಿದಂತೆ ಹಲವರು ಇದ್ದರು.