ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(ಎನ್‌ಡಬ್ಲ್ಯೂಕೆಆರ್‌ಟಿಸಿ)ಯ ನಿವೃತ್ತ ನೌಕರರಿಗೆ ಬರಬೇಕಾದ 2020ರ ವೇತನ ಪರಿಷ್ಕರಣೆ ಬಾಕಿ ಮತ್ತು ರಜೆ ನಗದೀಕರಣದ ವ್ಯತ್ಯಾಸದ ಬಾಕಿ ಹಣವನ್ನು ಮಂಜೂರು ಮಾಡುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಮತ್ತು ನಿವೃತ್ತ ನೌಕರರ ಸಂಘದಿಂದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್ ಭರತ್ ಅವರಿಗೆ ಮನವಿ ಸಲ್ಲಿಸಿದರು.
“ನಿವೃತ್ತ ನೌಕರರಿಗೆ ಸಂಬಂಧಿಸಿದ 2016–17ರಿಂದ 2019–20 ರವರೆಗಿನ ನಗದೀಕರಣ ಬಾಕಿ ಹಣವನ್ನು ಈವರೆಗೆ ಪಾವತಿಸಿಲ್ಲ. ಆ ಹಣವನ್ನು ಕೂಡಲೇ ಮಂಜೂರು ಮಾಡಬೇಕು. ಪ್ರತಿ ವರ್ಷ ಬಸ್‌ಪಾಸ್‌ಗೆ ಪಡೆಯುತ್ತಿರುವ ₹500 ಸಂಸ್ಕರಣಾ ಶುಲ್ಕವನ್ನು ರದ್ದು ಮಾಡಬೇಕು. ನಿವೃತ್ತ ನೌಕರರಿಗೆ ಸಾರಿಗೆ ಬಸ್‌ಗಳಲ್ಲಿ ಮುಂಗಡವಾಗಿ ಆಸನ ಕಾಯ್ದಿರಿಸಲು ಕ್ರಮಕೈಗೊಳ್ಳಬೇಕು. ವೈದ್ಯಕೀಯ ವೆಚ್ಚದ ಪುನರ್ ಪಾವತಿ ಸೌಲಭ್ಯ ಕಲ್ಪಿಸಿಕೊಡಬೇಕು” ಎಂದು ಸಂಘಟನಾಕಾರರು ಆಗ್ರಹಿಸಿದರು.
“ಶಕ್ತಿ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೆಟ್ ಪಡೆದ ಸ್ಥಳದವರೆಗೆ ಪ್ರಯಾಣ ಮಾಡದೆ ಮಾರ್ಗ ಮಧ್ಯದಲ್ಲಿಯೇ ಇಳಿದು ಹೋದರೆ, ದೂರದ ಪ್ರಯಣದ ಟಿಕೆಟ್ ವಿತರಿಸಿದ ಆರೋಪದ ಮೇಲೆ ನಿರ್ವಾಹಕರನ್ನು ಅಮಾನತು ಮಾಡುವ ಕ್ರಮ ಅವೈಜ್ಞಾನಿಕ. ಇದನ್ನು ತೆಗೆದುಹಾಕಬೇಕು. ಹಾಲಿ ನೌಕರರ ಬೇಡಿಕೆಗಳ ಈಡೇರಿಕೆಗೂ ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ಸಂಸದರು ಯುವಕರಲ್ಲಿ ಹಿಂದು ದ್ವೇಷದ ಬೀಜ ಬಿತ್ತಿ ದಿಕ್ಕು ತಪ್ಪಿಸುತ್ತಿದ್ದಾರೆ: ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಸಂಘದ ಅಧ್ಯಕ್ಷ ಎಚ್ ಜಿ ಕೊಪ್ಪದ, ಪ್ರಧಾನ ಕಾರ್ಯದರ್ಶಿ ಎಂ ಬಿ ತಹಶೀಲ್ದಾರ, ಪ್ರಮುಖರುಗಳಾದ ಎ ಎಚ್ ಜವಳಿ, ಎಸ್ ಎಸ್ ಪಾಟೀಲ, ಎಂ ಎಂ ಹಿರೇಮಠ, ಬಿ ಎಸ್ ದೋತ್ರದ, ಐ ಸಿ ವಾಲಿಶೆಟ್ಟಿ, ಗುಡಗೇರಿ, ವಿ ಐ ಭದ್ರಾಪೂರ, ಹುಗ್ಗಣ್ಣವರ, ಹುಸೇನಪ್ಪಾ ವೀರೇಶ ಸೊರಬದ ಸೇರಿದಂತೆ ಇತರರು ಇದ್ದರು.