ಪ್ರಜಾಪ್ರಭುತ್ವವು ಮೂರು ಸ್ಥಂಭಗಳನ್ನು ಹೊಂದಿದೆ – ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ – ಈ ಮೂರರಲ್ಲಿ ಯಾವುದಾದರೊಂದು ಕುಂಟಿತಗೊಂಡರೆ ಸಂವಿಧಾನ ಉಳಿಯುವುದಿಲ್ಲವೆಂದು ಅಂಬೇಡ್ಕರ್ ಹೇಳಿದ್ದರು ಎಂದು ಡಿಎಸ್ಎಸ್ ಹಿರಿಯ ಮುಖಂಡ ಎಚ್.ಡಿ. ಪೂಜಾರ ಹೇಳಿದ್ದಾರೆ.
ಗದಗ ಪಟ್ಟಣದ ಶ್ರೀತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ರಾಜ್ಯ ಸಮಿತಿ ಹಾಗೂ ಗದಗ ಸಮಿತಿ ಸಹಯೋಗದೊಂದಿಗೆ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸಂವಿಧಾನ ರಕ್ಷಣೆಗಾಗಿ, ಪ್ರಜಾಪ್ರಭುತ್ವ ಉಳಿವಿಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶ ಹಮ್ಮಿಕೊಂಡಿತ್ತು.
ಈ ಸಮಾವೇಶದಲ್ಲಿ ದಲಿತ ಮುಖಂಡ ಎಚ್.ಡಿ. ಪೂಜಾರ ಮಾತನಾಡಿ, ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಇನ್ನೂ ದಲಿತರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ಜಾತಿವಾದಿಗಳಿಗೆ ಮನುವಾದಿಗಳಿಗೆ ಮಾತ್ರ ಸಿಕ್ಕಿದೆ. ಬೌದ್ಧ, ಜೈನ ಅನೇಕ ಧರ್ಮಗಳಿವೆ. ಆದರೆ, ಇಲ್ಲಿ ಸಹೋದರತೆ, ಭ್ರಾತೃತ್ವ ಭಾವನೆ ಇದೇಯೇ… ಮನುವಾದಿಗಳು ಇವುಗಳನ್ನು ಕುಂಟಿತಗೊಳಿಸುತ್ತಿದ್ದಾರೆ. ಇವುಗಳನ್ನು ಗಟ್ಟಿಗೋಳಿಸಬೇಕು. ಬಿದ್ದವರನ್ನು, ಬಿಳುವವರನ್ನು ಮೇಲಕ್ಕೆತ್ತುವುದೇ ಧರ್ಮ. ಮೀಸಲಾತಿ ಹೆಚ್ಚು ಮಾಡಿ ಎಂದರೆ ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರಾಸ್ತಾವಿಕ ಮಾತುಗಳಲ್ಲಿ ಅಸಮಧಾನ ವ್ಯಕ್ತಪಡಿಸಿದರು.
ಡಿಎಸ್ಎಸ್ ಅಂಬೇಡ್ಕರ್‌ವಾದ ರಾಜ್ಯ ಉಪ ಪ್ರಧಾನ ಸಂಚಾಲಕ ನಾಗಣ್ಣ ಬಡಿಗೇರ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಹೊಟ್ಟೆ ಹಸಿವನ್ನು ನೋಡಿಕೊಂಡಿದ್ದರೆ. ನಾವು ಇವತ್ತು ಈ ರೀತಿಯಲ್ಲಿ ಇರುತ್ತಿರಲಿಲ್ಲ. ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾಗಿವೆ, ನಾವೆಲ್ಲರೂ ಅವಲೋಕನ ಮಾಡಿಕೊಳ್ಳಬೇಕು.
ಸರಿಯಾಗಿ ಸಂವಿಧಾನ ಜಾರಿಯಾಗಿದೆಯೇ ಎಂದು ಪ್ರಶ್ನಾರ್ಥಕವಾಗಿಯೇ ಉಳಿದುಕೊಂಡಿದೆ. ಮನುಸ್ಮೃತಿಯು ನಮ್ಮ ತಲೆಯಿಂದ ಹೋಗಿಯೇ ಇಲ್ಲ. ಕೆಲವು ಕೋಮುವಾದಿಗಳು ಸಂವಿಧಾನ ಬದಲಿಸಲಿಕ್ಕೆ ನಾವು ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ. ನಾವೆಲ್ಲರೂ ಸಂವಿಧಾನ ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ಎಲ್ಲ ಧರ್ಮಗಳ ಮನುಕುಲ ಒಳತಿಗಾಗಿ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆ ಎಂದರು.
ಡಿಎಸ್ಎಸ್ ಗದಗ ಜಿಲ್ಲಾ ಸಂಚಾಲಕ ಬಾಲರಾಜ್ ಅರಬರ್ ಅಧ್ಯಕ್ಷತೆ ವಹಿಸಿದ್ದರು. ಇಂದಿರಾ ಕೃಷ್ಣಪ್ಪ ದಸಂಸ (ಅಂಬೇಡಕರ ವಾದ) ರಾಜ್ಯ ಸಮಿತಿ ಸದಸ್ಯ ಎಸ್.ಎಸ್. ಪಟ್ಟಣಶೆಟ್ಟರ, ರಾಜ್ಯ ಮುಖಂಡರು, ಮೋಹನ ಅಲೈಲಕರ, ಕೃಷ್ಣಗೌಡ ಪಾಟೀಲ, ಹನಮಂತ ಭೀ, ವೀರಾಪೂರ ಕೊರಮ, ಸುರೇಶ ಕಟ್ಟಿಮನಿ, ಬಸವರಾಜ ಕಡೇಮನಿ, ವೆಂಕಟೇಶಯ್ಯ, ಪೀರಸಾಬ ಕೌತಾಳ, ಸತೀಶ ಪಾಸಿ ಮೋಹನಲಾಲ ಟಿ.ಸಿ, ಯುಸೂಫ್ ನಮಾಜಿ, ಸಿದ್ದಪ್ಪ ಅಂಗಧಾಳ, ವೆಂಕನಗೌಡ್ರ, ಗೋವಿಂದಗೌಡ್ರ ಉಪಸ್ಥಿತರಿದ್ದರು.