ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನಲ್ಲಿ ಕೆಂಪು ಮೆಣಸಿನಕಾಯಿ ಕಳ್ಳತನ ಹೆಚ್ಚಾಗಿದ್ದು, ರೈತರು ಬೇಸತ್ತು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್‌ಗಳಿಗೆ ತಾಡಪತ್ತಿ ಕಟ್ಟಿ ಜಮೀನಿನಲ್ಲಿಯೇ ಬಿಡಾರ ಹೂಡಿದ್ದಾರೆ. ಈ ನಡುವೆ ಮೆಣಸಿನಕಾಯಿ ಕದ್ದು ಸಿಕ್ಕಿ ಬಿದ್ದಿರುವ ಇಬ್ಬರು ಕಳ್ಳರನ್ನು ಕಂಬಕ್ಕೆ ಕಟ್ಟಿ ಥಳಿಸಿ, ಮೆಣಸಿನಕಾಯಿ ಮೂಟೆ ಹೊರಿಸಿ ಊರೆಲ್ಲಾ ಮೆರವಣಿಗೆ ಮಾಡಿಸಿದ ಘಟನೆ ನಡೆದಿದೆ.
ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಕೆಂಪು ಮೆಣಸಿನಕಾಯಿ ಕಳ್ಳತನ ಹೆಚ್ಚಾಗಿದ್ದು, ರೈತರ ಹೊಲಗಳಿಗೆ ನುಗ್ಗುವ ಕಳ್ಳರು ದುಬಾರಿ ಮೆಣಸಿನ ಕಾಯಿ ಕದ್ದು ಪರಾರಿಯಾಗುತ್ತಿದ್ದಾರೆ. ಇಂತಹ ಸುದ್ದಿಯನ್ನು ಕೇಳಿ ಎಚ್ಚೆತ್ತ ರೈತರು ಮುನ್ನೆಚ್ಚರಿಕೆಯಾಗಿ ರಾತ್ರಿಯಿಡೀ ತಮ್ಮ ಹೊಲದಲ್ಲಿಯೇ ಠಿಕಾಣಿ ಹೂಡಿದ್ದಾರೆ.
ಕೆಂಪು ಮೆಣಸಿನಕಾಯಿ ಬೀಜಕ್ಕೆ ಭಾರೀ ಬೇಡಿಕೆ; ಕೆಜಿಗೆ ಬರೋಬ್ಬರಿ ₹2000
ರೈತರು ವಾಸ್ತವ್ಯ ಹೂಡಲು ಎತ್ತಿನ ಚಕ್ಕಡಿ ಹಾಗೂ ಟ್ರ್ಯಾಕ್ಟರ್ ಟೈಲರ್‌ನಲ್ಲಿ ಕೊಲ್ಲಾರಿ ಕಟ್ಟಿಕೊಂಡು ಅಲ್ಲಿಯೇ ಅಡುಗೆ ಮಾಡಿಕೊಳ್ಳಲು ಒಲೆಯನ್ನು ಹಾಕಿದ್ದಾರೆ. ಕೈಯಲ್ಲಿ ಬ್ಯಾಟರಿ ಮತ್ತೊಂದು ಕೈಯಲ್ಲಿ ಕೋಲು ಹಿಡಿದ ರೈತರು ರಾತ್ರಿ ಪೂರ್ತಿ ಜಮೀನು ಸುತ್ತ ಕಳ್ಳರನ್ನು ಕಾಯುವ ಕಾರ್ಯದಲ್ಲಿ ತೊಡಗಿದ್ದಾರೆ.
ಒಂದು ಕ್ವಿಂಟಲ್ ಕೆಂಪು ಮೆಣಸಿನಕಾಯಿಗೆ ₹40,000 ರಿಂದ ₹45,000ಕ್ಕೇ ಬೆಲೆ ಏರಿಕೆಯಾಗಿರುವುದರಿಂದ ಮೆಣಸಿನಕಾಯಿ ಕಳ್ಳತನ ಜೋರಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಬಟ್ಟೂರು, ಕುಂದ್ರಳ್ಳಿ, ರಾಮಗೇರಿ, ಯತ್ನಳ್ಳಿ, ಯಳವತ್ತಿ, ಗೋಜನೂರು, ಬಸಾಪುರ, ಮಾಡಳ್ಳಿ, ಶಿಗ್ಲಿಸೇರಿ ಸುತ್ತಲಿನ ಕೆಲವು ಗ್ರಾಮಗಳಲ್ಲಿ ಮೆಣಸಿನಕಾಯಿ ಬೆಳೆದ ಜಮೀನುಗಳಲ್ಲಿ ರೈತರು ಬೀಡು ಬಿಟ್ಟಿದ್ದಾರೆ.
ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಬರಗಾಲದಿಂದ ಉಳಿದ ಬೆಳೆ ಹಾಳಾಗಿ ಹೋಗಿದೆ. ಇರುವುದರಲ್ಲಿಈ ಮೆಣಸಿಕಾಯಿ ಅಲ್ಪಸ್ವಲ್ಪ ಮಟ್ಟಿಗೆ ಉಳಿದಿದೆ. ಇದರಿಂದ ಈ ಬೆಳೆ ಮೇಲೆಯೇ ಕಳ್ಳರ ಕಣ್ಣು ಬಿದ್ದಿದೆ ಎನ್ನಲಾಗಿದೆ.
ಹೊಲದಿಂದ ಮೆಣಸಿನಕಾಯಿ ಕದ್ದು ಸಿಕ್ಕಿಬಿದ್ದ ಇಬ್ಬರು ಕಳ್ಳರನ್ನು ಗ್ರಾಮಸ್ಥರು ದೇವಸ್ಥಾನದ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಂಬದಲ್ಲಿ ಒಬ್ಬ ಆರೋಪಿಯನ್ನು ನಿಲ್ಲಿಸಿ ಆತನ ಹೆಗಲ ಮೇಲೆ ಮತ್ತೊಬ್ಬನನ್ನು ಕಟ್ಟಿದ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಾತ್ರವಲ್ಲದೆ ಖದೀಮರಿಗೆ ಮೆಣಸಿನಕಾಯಿ ಮೂಟೆ ಹೊರಿಸಿ ಊರಿಡೀ ಮೆರವಣಿಗೆ ಮಾಡಿಸಿದ್ದಾರೆ.