ಗದಗ ನಗರದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ, ಸುಸಜ್ಜಿತ ಬಾಲಕಿಯರ ಬಾಲಮಂದಿರ ಲೋಕಾರ್ಪಣೆಗೊಳ್ಳುತ್ತಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಈ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ಮಕ್ಕಳು ಸಮಾಜದ ಅಮೂಲ್ಯ ಆಸ್ತಿಯಾಗಿದ್ದು ಅವರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಕಾರಾತ್ಮಕ ಹಾಗೂ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಗದಗ ನಗರದಲ್ಲಿ ನಿರ್ಮಾಣವಾಗಿರುವ ಬಾಲಕಿಯರ ಬಾಲ ಮಂದಿರ ವಿಶೇಷತೆಯನ್ನು ಹೊಂದಿದೆ.
ಪ್ರತಿಯೊಂದು ಮಗುವನ್ನು ದೌರ್ಜನ್ಯ, ಹಿಂಸೆ, ಶೋಷಣೆಯಿಂದ ರಕ್ಷಿಸುವ ಹೊಣೆಯನ್ನು ಸರಕಾರಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಮಕ್ಕಳ ರಕ್ಷಣಾ ಯೋಜನೆ 2011ರಲ್ಲಿ ಜಾರಿಗೆ ತಂದಿದ್ದು ಅದು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.
ಇದೇ ಮಕ್ಕಳ ರಕ್ಷಣಾ ಯೋಜನೆಯಡಿಯಲ್ಲಿ ಗದಗ ಜಿಲ್ಲೆಯಲ್ಲಿ ಬಾಲಕಿಯರ ಸರಕಾರಿ ಬಾಲಮಂದಿರ ಕಟ್ಟಡ ನಿರ್ಮಾಣವಾಗಿದೆ. ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಒಟ್ಟು 199 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿದ್ದು, ಜಿಲ್ಲಾ ನಿರ್ಮಿತಿ ಕೇಂದ್ರದ ಮೂಲಕ 2016-17ನೇ ಸಾಲಿಗೆ ಬಾಲಕಿಯರ ಸರಕಾರಿ ಬಾಲಮಂದಿರ ನಿರ್ಮಾಣಕ್ಕಾಗಿ ವಹಿಸಲಾಗಿತ್ತು. ಈ ಬಾಲಕಿಯರ ಸರ್ಕಾರಿ ಬಾಲಮಂದಿರವು 100 ಮಕ್ಕಳ ಸಾಮರ್ಥ್ಯದ ಕಟ್ಟಡವಾಗಿದ್ದು, ಈಗ ಗದಗನಲ್ಲಿ 43 ಮಕ್ಕಳು ರಕ್ಷಣೆ ಮತ್ತು ಪೋಷಣೆಯನ್ನು ಪಡೆಯುತ್ತಿದ್ದಾರೆ.
ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ, “ದುರ್ಬಲ, ಅನಾಥ, ದೌರ್ಜನ್ಯಕ್ಕೆ ಒಳಗಾದ ಮಕ್ಕಳ ರಕ್ಷಣೆ ಜೊತೆಗೆ ಅವರ ಭವಿಷ್ಯ ಕಟ್ಟಿಕೊಡುವ ದೊಡ್ಡ ಜವಾಬ್ದಾರಿ ಸರ್ಕಾರ ತೆಗೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಈ ಜವಾಬ್ದಾರಿ ನಿರ್ವಹಣೆಯಲ್ಲಿ ಸಮಾಜದ ವಿಶೇಷ ಪಾಲಗೊಳ್ಳುವಿಕೆ ಹಾಗೂ ಸಹಕಾರವನ್ನು ಬಯಸುವೆ. ಬನ್ನಿ ನಿರ್ಗತಿಕ, ತೊಂದರೆಯಲ್ಲಿರುವ ಮಕ್ಕಳ ಭವಿಷ್ಯವನ್ನು ಕಟ್ಟಿಕೊಡುವಲ್ಲಿ ಕೈಜೋಡಿಸಿ” ಎಂದು ಕರೆಕೊಟ್ಟಿದ್ದಾರೆ.
ಹಿನ್ನೆಲೆ
ಸಮಗ್ರ ಮಕ್ಕಳ ರಕ್ಷಣಾ ಯೋಜನೆಯನ್ನು 1/4/2022ರ ʼಮಿಷನ್ ವಾತ್ಸಲ್ಯʼ ಎಂದು ಮರು ನಾಮಕರಣ ಮಾಡಿ ಜಾರಿಗೆ ತಂದಿದ್ದು, ಗದಗ ಜಿಲ್ಲೆಯಲ್ಲಿ ಮಕ್ಕಳ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವಂತಹ ಮಕ್ಕಳಾದ ಅನಾಥ, ನಿರ್ಗತಿಕ, ದೌರ್ಜನ್ಯ, ಹಿಂಸೆಗೆ ಒಳಪಟ್ಟ ಪ್ರಕೃತಿ ವಿಕೋಪಗಳಿಗೆ ಒಳಪಟ್ಟ ಮಕ್ಕಳು, ಕೌಟುಂಬಿಕ ಕಲಹದಿಂದ ಬೆರ್ಪಟ್ಟ ಮಕ್ಕಳು, ನಿರ್ಲಕ್ಷಕ್ಕೆ ಒಳಪಟ್ಟ ಮಕ್ಕಳು, ಖೈದಿ ಪಾಲಕರ ಮಕ್ಕಳು, ಭಿಕ್ಷಾಟನೆಯಿಂದ ರಕ್ಷಿಸಿದ ಮಕ್ಕಳು ಹಾಗೂ ಬಾಲ್ಯ ವಿವಾಹದಿಂದ ರಕ್ಷಿಸಿದ ಮಕ್ಕಳು ಹೀಗೆ ಇನ್ನಿತರೆ ಕಾರಣಾಂತರಗಳಿಂದ ಬಾಲಕಿಯರ ಸರ್ಕಾರಿ ಬಾಲಮಂದಿರದಲ್ಲಿ ರಕ್ಷಣೆ ಮತ್ತು ಪೋಷಣೆಯನ್ನು ಪಡೆಯಬಹುದಾಗಿದೆ.
ಇಂತಹ ಮಕ್ಕಳಿಗೆ ಉತ್ತಮವಾದ ವಾತಾವರಣವನ್ನು ಕಲ್ಪಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುವುದು ಯೋಜನೆ ಉದ್ದೇಶವಾಗಿದೆ. ಇಂತಹ ಮಕ್ಕಳ ರಕ್ಷಣೆ ಹಾಗೂ ಪುನರ್ವಸತಿಯೇ ಇದರ ಮೂಲ ಉದ್ದೇಶ.
ಆಗಮಿಸುವ ಗಣ್ಯರು
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಡಿಸೆಂಬರ್ 17ರಂದು, ನಗರದ ಸಂಭಾಪುರ ರಸ್ತೆಯ ಬಾಲಕಿಯರ ಸರಕಾರಿ ಬಾಲಮಂದಿರದ ಕಟ್ಟಡದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಉದ್ಘಾಟಿಸಲಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಲಿದ್ದಾರೆ. ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯಅತಿಥಿಗಳಾಗಿ ಸರ್ಕಾರಿ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್ , ಸಂಸದರುಗಳಾದ ಶಿವಕುಮಾರ ಉದಾಸಿ, ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ, ನರಗುಂದ ಶಾಸಕರಾದ ಸಿ.ಸಿ.ಪಾಟೀಲ, ರೋಣ ಶಾಸಕ ಜಿ.ಎಸ್.ಪಾಟೀಲ, ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಮಾ ದಾಸರ, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಆಗಮಿಸಲಿದ್ದಾರೆ.