ದೇಶದ ಹಿರಿಯ ಗಝಲ್ ಗಾಯಕ, ಪದ್ಮಶ್ರೀ ಪಂಕಜ್ ಉಧಾಸ್ ಅವರು ನಿಧನರಾಗಿದ್ದಾರೆ.
“ದೀರ್ಘಕಾಲದ ಅನಾರೋಗ್ಯದ ನಂತರ 73ನೇ ವಯಸ್ಸಿನಲ್ಲಿ ಪಂಕಜ್ ಉಧಾಸ್ ಇಂದು ನಿಧನರಾದರು” ಎಂದು ಅವರ ಕುಟುಂಬ ದೃಢಪಡಿಸಿದೆ. ಈ ಬಗ್ಗೆ ಉಧಾಸ್ ಕುಟುಂಬವು ಅಧಿಕೃತ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದೆ.
Veteran Ghazal singer Pankaj Udhas passes away due to a prolonged illness, confirms his family. pic.twitter.com/4iIwZhsscK
— ANI (@ANI) February 26, 2024
“ದೀರ್ಘಕಾಲದ ಅನಾರೋಗ್ಯದಿಂದ ಫೆಬ್ರವರಿ 26ರಂದು ಪದ್ಮಶ್ರೀ ಪಂಕಜ್ ಉಧಾಸ್ ಅವರ ನಿಧನದ ದುಃಖದ ಸುದ್ದಿಯನ್ನು ತುಂಬಾ ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತಿದ್ದೇವೆ ” ಎಂದು ಹೇಳಿಕೆಯಲ್ಲಿ ಕುಟುಂಬ ತಿಳಿಸಿದೆ.
ಪಂಕಜ್ ಉಧಾಸ್ ಅವರು ದೇಶದ ಕಂಡ ಒಬ್ಬ ಅತ್ಯುತ್ತಮ ಗಝಲ್ ಗಾಯಕರಲ್ಲಿ ಅಗ್ರಗಣ್ಯರಾಗಿದ್ದಾರೆ. ಉರ್ದು ಶೈಲಿಯ ಕಾವ್ಯವನ್ನು ಸಂಗೀತಕ್ಕೆ ಹೊಂದಿಸುವುದನ್ನು ಒಳಗೊಂಡಿರುವ ವಿಶಿಷ್ಟವಾದ ಗಾಯನ ಶೈಲಿಯನ್ನು ಜನಪ್ರಿಯಗೊಳಿಸಿದ ಕಾರಣದಿಂದ ಅವರು ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ.
ಅವರು ಜಗಜಿತ್ ಸಿಂಗ್ ಮತ್ತು ತಲತ್ ಅಝೀಝ್ ಅವರಂತಹ ಜೊತೆಗಾರರ ಜೊತೆಗೆ ಈ ಕಲಾ ಪ್ರಕಾರವನ್ನು ದೇಶಾದ್ಯಂತ ವ್ಯಾಪಕವಾದ ಪ್ರೇಕ್ಷಕರಿಗೆ ಪರಿಚಯಿಸುವಲ್ಲಿ ಬಹುಮುಖ್ಯ ಕೊಡುಗೆ ನೀಡಿದ್ದಾರೆ.
ಉಧಾಸ್ ಏಪ್ರಿಲ್ 17, 1951 ರಂದು ಗುಜರಾತ್‌ನ ಸಾವರ್ಕುಂಡ್ಲಾದಲ್ಲಿ ಜನಿಸಿದ್ದರು. ನಾಮ್ (1986) ಚಿತ್ರದ ‘ಚಿಟ್ಟಿ ಆಯೀ ಹೈ’ ಹಾಡಿನ ಮೂಲಕ ಅವರು ವೃತ್ತಿಪರ ಗಾಯಕರಾಗಿ ಗುರುತಿಸಿಕೊಂಡರು. ಅಂದಿನಿಂದ, ಅವರು ಹಲವಾರು ಆಲ್ಬಂಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿ ಸುದೀಪ್ ನಾಯಕ ನಟನಾಗಿ ನಟಿಸಿದ್ದ ‘ಸ್ಪರ್ಶ’ ಚಿತ್ರಕ್ಕೂ ಕೂಡ ಹಾಡಿದ್ದು, ಚಿತ್ರದ ‘ಚೆಂದಕ್ಕಿಂತ ಚೆಂದ ನೀನೇ ಸುಂದರ’ ಎಂಬ ಹಾಡನ್ನು ಕೂಡ ಹಾಡಿದ್ದಾರೆ.
ಪ್ರಸಿದ್ಧ ಗಝಲ್ ಗಾಯಕರಾಗಿ ಜಗತ್ತಿನ ವಿವಿಧ ದೇಶಗಳಲ್ಲಿ ಕೂಡ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಹಲವಾರು ಬಾಲಿವುಡ್ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದು, ಜೊತೆಗೆ ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡಿದ್ದರು. ಇವರ ಸಂಗೀತ ಸೇವೆಯನ್ನು ಗುರುತಿಸಿ 2006ರಲ್ಲಿ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ, ಗೌರವಿಸಿತ್ತು.
