ನನಗೆ ಮತ ಹಾಕಿದ್ದಾನಾ, ಅವನ ಹೋರಾಟ ಜನಪರವಾಗಿ ಮಾಡಿಕೊಳ್ಳಲಿ. ಅವರ ಪಕ್ಷದ ಸಂಸದರನ್ನು ಮೊದಲು ಕರೆಯಲಿ. ಅದನ್ನು ಬಿಟ್ಟು ನನ್ನ ಬಗ್ಗೆ ಯಾಕೆ ಮಾತನಾಡಬೇಕು. ಅವನು ಹೇಳಿದ ಅಂತ ರಾಜೀನಾಮೆ ಕೊಡಲು ಸಾಧ್ಯವಿಲ್ಲ. ನನ್ನ ಜನ ಕೇಳಿದ್ರೆ ಕೊಡ್ತೀನಿ ಅಷ್ಟೇ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಅವರ ಹೇಳಿಕೆಗೆ ಖಡಕ್ ಪ್ರತ್ಯುತ್ತರ ಕೊಟ್ಟರು.
ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದ ಪಂಚಾಯತ್ ರಾಜ್ ಇಲಾಖೆಯ 50 ಲಕ್ಷ ರೂಗಳ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಸಂಸದರಿಗೆ ತಾಲ್ಲೂಕಿನ ಜನ ಓಟು ಹಾಕಿದ್ದಾರೆ. ಅವರು ಮೊದಲು ಬಿಜೆಪಿ ಹೋರಾಟಕ್ಕೆ ಬರಬೇಕು. ಅವರನ್ನು ಕರೆಯಲು ಧೈರ್ಯ ಇಲ್ಲ. ಅದನ್ನು ಬಿಟ್ಟು ನನ್ನ ರಾಜೀನಾಮೆ ಕೇಳೋಕೆ ಅವನ್ಯಾರು ಎಂದು ಗುಡುಗಿದರು.
ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಬಗ್ಗೆ ಉಪ ಮುಖ್ಯಮಂತ್ರಿಗಳ ಜೊತೆ ಮಾತನಾಡಲು ತೆರಳಿದ್ದೆ. ಅವರು ಸಿಕ್ಕಿಲ್ಲ. ನಾಳೆ ಮತ್ತೇ ಮಾತನಾಡುತ್ತೇನೆ. ರೈತರ ಈ ತಿಂಗಳ 31 ರ ಹೋರಾಟದ ಬಗ್ಗೆ ಸಹ ಚರ್ಚಿಸಿ ಕಾಮಗಾರಿ ವಿರೋಧದ ಬಗ್ಗೆ ಕೂಲಂಕುಷ ವರದಿ ನೀಡಿ ಕಾಮಗಾರಿ ನಿಲ್ಲಿಸುವ ಪ್ರಯತ್ನ ಮಾಡ್ತೀನಿ ಎಂದ ಅವರು ಸಿಸಿ ರಸ್ತೆ ಕಾಮಗಾರಿ ಇಂದು 2.75 ಕೋಟಿ ರೂಗಳ ಕೆಲಸ ನಾಲ್ಕು ಗ್ರಾಮದಲ್ಲಿ ನಡೆದಿದೆ. ನಿಟ್ಟೂರು, ತ್ಯಾಗಟೂರು, ಪತಿಯಪ್ಪನಪಾಳ್ಯ ಹಾಗೂ ಸಿ.ಅರಿವೆಸಂದ್ರ ಗ್ರಾಮದಲ್ಲಿ ಕೆಲಸಕ್ಕೆ ಚಾಲನೆ ಸಿಕ್ಕಿದೆ. ನಿಟ್ಟೂರು ಗ್ರಾಮದಲ್ಲಿ ಬಾಕಿ ಇರುವ ಕೆಲಸ ಕೆಲ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ರಾಜ್ಯದಲ್ಲಿ ಕೋವಿಡ್ ಮರಳಿ ಕಾಣಿಸಿಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ಪ್ರಕರಣ ಹೆಚ್ಚಿದ ಹಿನ್ನಲೆ ಅಗತ್ಯ ಕ್ರಮಕ್ಕೆ ಸರ್ಕಾರ ಸಜ್ಜಾಗಿದೆ. ಹೆಚ್ಚುವರಿ ಹಾಸಿಗೆ, ಪರೀಕ್ಷಾ ಕೇಂದ್ರ, ಲಸಿಕೆಗಳ ವ್ಯವಸ್ಥೆ ಸರ್ಕಾರ ಮಾಡಿದೆ. ಗುಬ್ಬಿ ತಾಲ್ಲೂಕಿನಲ್ಲಿ ಈವರೆವಿಗೆ ಕೋವಿಡ್ ಪ್ರಕರಣ ಕಂಡು ಬಂದಿಲ್ಲ. ಆದರೂ ಸಭೆ ಕರೆದು ಮುನ್ನೆಚ್ಚರಿಕೆ ಕ್ರಮ ವಹಿಸಲು ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ ಎಂದ ಅವರು ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆದಿದೆ. ಬಾಕಿ ಇರುವ ಗ್ರಾಮಗಳನ್ನು ಪಟ್ಟಿ ಮಾಡಿ ಶೀಘ್ರದಲ್ಲಿ ಅಲ್ಲಿಯೂ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಂಗಳಮ್ಮ, ಸದಸ್ಯ ಪುರುಷೋತ್ತಮ್, ಮುಖಂಡರಾದ ಎನ್.ಸಿ.ಶಿವಣ್ಣ, ಸಿದ್ದೇಶ್, ಬೆಟ್ಟಣ್ಣ, ಕೃಷ್ಣ, ತಿಮ್ಲಿಪಾಳ್ಯ ಶಶಿ, ಗುತ್ತಿಗೆದಾರರಾದ ರವಿ, ಸಿದ್ದರಾಜು, ಬಿ.ಕೆ.ಶಿವಕುಮಾರ್, ಪಂಚಾಯತ್ ರಾಜ್ ಇಲಾಖೆ ಎಇಇ ಚಂದ್ರಶೇಖರ್, ಎಇ ಗೋಪಿನಾಥ್, ಪಿಡಿಓ ಉಮೇಶ್ ಇತರರು ಇದ್ದರು.