ಹಾವೇರಿ ಜಿಲ್ಲೆಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದು ವಿಜಯೋತ್ಸವ ಆಚರಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದೇ ವರ್ಷದ ಜನವರಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ಬಳಿಯ ಹೋಟೆಲ್ನಲ್ಲಿ ತಂಗಿದ್ದ ಜೋಡಿಯೊಂದಕ್ಕೆ ಕಾಮುಕರ ಗುಂಪು ಥಳಿಸಿ, ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾವಾರ ಎಸಗಿತ್ತು. ಪ್ರಕರಣದಲ್ಲಿ ಏಳು ಮಂದಿ ಪ್ರಮುಖ ಆರೋಪಿಗಳು ಹಾಗೂ ಅವರಿಗೆ ಸಹಕಾರ ನೀಡಿದ್ದ 12 ಮಂದಿ ಇತರ ಆರೋಪಿಗಳನ್ನು ಬಂಧಿಸಲಾಗಿತ್ತು.
ಇತ್ತೀಚೆಗೆ, ಪ್ರಮುಖ ಏಳು ಮಂದಿ ಆರೋಪಿಗಳಿಗೆ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪಡೆದು ಹೊರ ಬಂದ ಆರೋಪಿಗಳು ಹಾವೇರಿಯಿಂದ ಅಕ್ಕಿಹಾಲೂರುವರೆಗೆ ಬೈಕ್ ಮತ್ತು ಕಾರುಗಳಲ್ಲಿ ವಿಜಯೋತ್ಸವ ಮೆರವಣಿಗೆ ಮಾಡಿದ್ದರು. ಅವರ ಸಂಭ್ರಮಾಚಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಹಾನಗಲ್ ಪಿಎಸ್ಐ ದೀಪಾಲಿ ಗುಡೋಡಗಿ ಅವರು ಆರೋಪಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು.
ಆರೋಪಿಗಳಾದ ಆಫ್ತಾಬ್ ಚಂದನಕಟ್ಟಿ, ಮದಾರ್ ಸಾಬ್ ಮಂಡಕ್ಕಿ, ಸಮಿವುಲ್ಲಾ ಲಾಲನವರ್, ಮೊಹಮ್ಮದ್ ಸಾದಿಕ್ ಅಗಸಿಮನಿ, ಶೋಯಿಬ್ ಮುಲ್ಲಾ, ತೌಸೀಫ್ ಚೋಟಿ ಹಾಗೂ ರಿಯಾಜ್ ಸವಿಕೇರಿ ಎಂಬವರನ್ನು ಬಂಧಿಸಿದ್ದಾರೆ.
‘ಏಳು ಆರೋಪಿಗಳನ್ನು ನ್ಯಾಯಾಧೀಶರ ಎದುರು ಶನಿವಾರ ಹಾಜರುಪಡಿಸಲಾಗಿದೆ. ಆರೋಪಿಗಳನ್ನು ಜೂನ್ 2ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ” ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ. ಶಿರಕೋಳ ತಿಳಿಸಿದ್ದಾರೆ.