ಯಾದಗಿರಿ ಜಿಲ್ಲೆಯ ಗುರಮಿಠಕಲ್‌ನಲ್ಲಿ ₹1.21 ಕೋಟಿ ಮೌಲ್ಯದ ಪಡಿತರ ಅಕ್ಕಿ ಅಕ್ರಮ ದಾಸ್ತಾನು ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಒಪ್ಪಿಸಿದೆ.
ಸೆ.8 ರಂದು ನರೇಂದ್ರ ರಾಠೋಡ ಹಾಗೂ ಅಯ್ಯಪ್ಪ ರಾಠೋಡ ಅವರಿಗೆ ಸೇರಿದ ಲಕ್ಷ್ಮಿ ವೆಂಕಟೇಶ್ವರ ಮತ್ತು ಲಕ್ಷ್ಮಿ ಬಾಲಾಜಿ ಇಂಡಸ್ಟ್ರೀಸ್ ಮಿಲ್‌ಗಳಲ್ಲಿ ಅಕ್ರಮವಾಗಿ 3,985 ಕ್ವಿಂಟಲ್ ಪಡಿತರ ಅಕ್ಕಿ ದಾಸ್ತಾನು ಮಾಡಿರುವುದು ಪತ್ತೆಯಾಗಿದ್ದು, ಈ ವಿಚಾರವಾಗಿ ಗುರುಮಿಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು.
‘ಗುರಮಿಠಕಲ್ ಪ್ರಕರಣದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಅನೀಲಕುಮಾರ ಹೆಚ್.ದವಳಗಿ, ರವರು ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಜವಾಬ್ದಾರಿಯುತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೇ ಕರ್ತವ್ಯದಲ್ಲಿ ನಿರ್ಲ್ಯಕ್ಷತೆ ಮತ್ತು ಬೇಜವಾಬ್ದಾರಿತನ ತೋರಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಸದರಿಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೆಪ್ಟೆಂಬರ್ 11ರಂದು ಜಿಲ್ಲಾಧಿಕಾರಿಗಳು ವರದಿಯಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿಗಳ ವರದಿ ದೃಢಪಡಿಸಿ ಉಪ ನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಯಾದಗಿರಿ ಜಿಲ್ಲೆ ಹುದ್ದೆಯಲ್ಲಿ ಮುಂದುವರೆಸುವುದು ಸೂಕ್ತವಲ್ಲವೆಂದು ತೀರ್ಮಾನಿಸಿ ಸದರಿಯವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅವರ ಮಾತೃ ಇಲಾಖೆಯಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಹಿಂದಿರುಗಿಸಿ ಸೆಪ್ಟೆಂಬರ್ 16ರಂದು ಆಹಾರ ಇಲಾಖೆಯ ಅಧೀನ ಕಾರ್ಯದರ್ಶಿ ನರಸಿಂಹಮೂರ್ತಿ ಜಿ.ಕೆ ಅವರು ಆದೇಶಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಸಿಂಗಾಪುರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ : ₹4.66 ಲಕ್ಷ ಕಳೆದುಕೊಂಡ ಶಿಕ್ಷಕ