ವಂಚನೆ ಪ್ರಕರಣದಲ್ಲಿ ಜಾಮೀನು ನೀಡಲು 5 ಲಕ್ಷ ರೂ.ಗೆ ಬೇಡಿಕೆಯಿಟ್ಟ ಆರೋಪದ ಮೇಲೆ ಮಹಾರಾಷ್ಟ್ರದ ಸತಾರಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ಬಂಧಿಸಲಾಗಿದೆ. ನ್ಯಾಯಾಧೀಶ ಧನಂಜಯ್ ಮತ್ತು ಇತರ ಮೂವರು ಆರೋಪಿಗಳನ್ನು ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ.
ಉದ್ಯೋಗ ಕೊಡಿಸುವುದಾಗಿ 41 ಲಕ್ಷ ರೂ. ಹಣ ವಸೋಲಿ ಮಾಡಿ ವಂಚಿಸಿದ್ದ ಆರೋಪಿಗೆ ಜಾಮೀನು ಕೊಡಲು ಆರೋಪಿಯ ಮಗಳ ಬಳಿ ನ್ಯಾಯಾಧೀಕರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. “ಉದ್ಯೋಗದ ಆಮಿಷವೊಡ್ಡಿ ವಂಚನೆ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಲು ಆತನ ಮಗಳು, 24 ವರ್ಷದ ಯುವತಿ ಬಳಿ 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ನ್ಯಾಯಾಧೀಶರು ಮತ್ತು ಇತರ ಮೂವರು ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಯುವತಿ ದೂರು ದಖಲಿಸಿದ್ದರು” ಎಂದು ಪುಣೆ ಉಪ ಪೊಲೀಸ್ ವರಿಷ್ಠಾಧಿಕಾರಿ ದಯಾನಂದ ಗಾವಡೆ ಹೇಳಿದ್ದಾರೆ.
“ಯುವತಿ ಡಿಸೆಂಬರ್ 2ರಂದು ಎಸಿಬಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಡಿಸೆಂಬರ್ 3ರಿಂದ 9ರವೆಗೆ ಪರಿಶೀಲಿನೆ ನಡೆಸುತ್ತಿದ್ದೆವು. ಡಿಸೆಂಬರ್ 9ರಂದು ಸತಾರಾ ನ್ಯಾಯಾಲಯದ ಸಂಕೀರ್ಣದ ಹೊರಗೆ ಯುವತಿಯನ್ನು ನ್ಯಾಯಾಧೀಶರು ಭೇಟಿಯಾಗಿದ್ದರು. ಕಾರಿನಲ್ಲಿ ಕುಳಿತು ಮಧ್ಯವರ್ತಿಗಳೊಂದಿಗೆ ಲಂಚದ ಒಪ್ಪಂದದ ಬಗ್ಗೆ ಚರ್ಚಿಸಿದ್ದರು” ಎಂದು ಎಸಿಬಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
“ಒಪ್ಪಂದದ ಬಳಿಕ ಇಬ್ಬರು ಮಧ್ಯವರ್ತಿಗಳು ಹೋಟೆಲ್‌ನಲ್ಲಿ ಲಂಚ ಸ್ವೀಕರಿಸಲು ಯೋಜಿಸಿದ್ದರು. ಅಲ್ಲಿ, ನ್ಯಾಯಾಧೀಶರ ಪರವಿದ್ದ ಮಧ್ಯವರ್ತಿಗಳು ಹಣವನ್ನು ಕೊಡುವಂತೆ ಯುವತಿಯ ಬಳಿ ಕೇಳಿದರು. ಆ ವೇಳೆ, ಯುವತಿಯೊಂದಿಗೆ ಎಸಿಬಿ ಸಾಕ್ಷಿಯೊಬ್ಬರು ಜೊತೆಗಿದ್ದರು” ಎಂದು ಎಸಿಬಿ ವಿವರಿಸಿದೆ.
ಆರೋಪಿ ನ್ಯಾಯಾಧೀಶರು ಮತ್ತು ಇತರ ಮೂವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7, 7-ಎ, 12 ಹಾಗೂ ಐಪಿಸಿ ಸೆಕ್ಷನ್ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.