ಕರ್ನಾಟಕ ಸಣ್ಣ ಕೈಗಾರಿಕೆ ಸಂಘ (ಕಾಸಿಯಾ)ದ ಅಮೃತ ಮಹೋತ್ಸವ ಕಾರ್ಯಕ್ರಮ 2025ರ ಮೇ 17ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ.ಜಿ.ರಾಜಗೋಪಾಲ್ ಹೇಳಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ 1949ರಲ್ಲಿ ಸ್ಥಾಪನೆಯಾಗಿದ್ದು 75 ವರ್ಷ ಪೂರ್ಣಗೊಂಡ ಪ್ರಯುಕ್ತ ಅಮೃತ ಮಹೋತ್ಸವ ವರ್ಷ ಆಚರಿಸಲಾಗುತ್ತಿದೆ. ಮೇ 17ರಂದು ನಡೆಯುವ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ, ಶಾಸಕರಾದ ಟಿ.ರಘುಮೂರ್ತಿ, ಪ್ರಿಯ ಕೃಷ್ಣ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಡಾ. ಎಸ್.ಸೆಲ್ವಕುಮಾರ್, ಗುಂಜನ್ ಕೃಷ್ಣ, ರಮಣದೀಪ್ ಚೌಧರಿ, ನಿತೇಶ್ ಪಾಟಿಲ್, ಎ.ಎಲ್.ರವೀಂದ್ರನ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸ್ವಾತಂತ್ರ ಹೋರಾಟಗಾರ ಶ್ರೀ ಆರ್.ಎಸ್.ಆರಾಧ್ಯ ಅವರಿಂದ 1949ರಲ್ಲಿ ಸ್ಥಾಪಿತವಾದ ಕಾಸಿಯಾ ಸಂಸ್ಥೆ ಇಂದು ಅಗಾಧವಾಗಿ ಬೆಳೆದಿದೆ. ರಾಜ್ಯದಲ್ಲಿ ಎಂ.ಎಸ್.ಎಂ.ಇ.ಗಳ ಹಿತಾಸಕ್ತಿಗಳನ್ನು ಉತ್ತೇಜಿಸುವಲ್ಲಿ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ರಾಜ್ಯದ ಎಂ.ಎಸ್.ಎಂ.ಇ. ವಲಯ ರಾಷ್ಟ್ರೀಯ ಜಿ.ಡಿ.ಪಿ.ಗೆ ಶೇಕಡಾ 2.2ರಷ್ಟು ಗಮನಾರ್ಹ ಕೊಡುಗೆಯನ್ನು ನೀಡಿದೆ. ರಫ್ತುಗಳಲ್ಲಿ ಸ್ಥಿರವಾದ ಬೆಳವಣಿಗೆ ಮತ್ತು ಗಣನೀಯ ಉದ್ಯೋಗ ಸೃಷ್ಟಿಯೊಂದಿಗೆ ನವೀನ್ಯತೆ ಮತ್ತು ಕೈಗಾರಿಕಾ ಅಭಿವೃದ್ಧಿಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.
ಕಾಸಿಯಾ ಪ್ರಸಕ್ತ 13,000ಕ್ಕೂ ಹೆಚ್ಚು ನೇರ ಸದಸ್ಯರನ್ನು ಮತ್ತು 132 ಸಂಯೋಜಿತ ಸಂಘಗಳನ್ನು ಹೊಂದಿದೆ. ಇದು ಪ್ರಾಥಮಿಕವಾಗಿ ಉತ್ಪಾದನಾ ವಲಯದಲ್ಲಿ ತೊಡಗಿಸಿಕೊಂಡಿದೆ. ಅಮೃತ ಮಹೋತ್ಸವ ಆಚರಣೆಯು ನಮ್ಮ ಪ್ರಯಾಣಕ್ಕೆ ಗೌರವ ಮಾತ್ರವಲ್ಲದೆ ಎಂ.ಎಸ್.ಇ. ವಲಯದ ಪ್ರಮುಖ ನೀತಿ ಸಮಸ್ಯೆಗಳು ಮತ್ತು ಪ್ರಗತಿಗಳನ್ನು ಎತ್ತಿ ತೋರಿಸುವ ವೇದಿಕೆಯಾಗಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಸಿಯಾ ಕಾರ್ಯದಶರ್ಶಿ ಸುರೇಶ್ ಸಾಗರ್, ಲೆಕ್ಕಪರಿಶೋಧಕ ಮಂಜುನಾಥ್ ಉಪಸ್ಥಿತರಿದ್ದರು.