ಪಶ್ಚಿಮ ಬಂಗಾಳದ ಅರಣ್ಯ ಇಲಾಖೆ ನಡೆಸುತ್ತಿರುವ ಸಫಾರಿ ಪಾರ್ಕ್‌ನಲ್ಲಿ ಅಕ್ಬರ್ ಹಾಗೂ ಸೀತಾ ಎನ್ನುವ ಹೆಸರಿನ ಸಿಂಹದ ಜೋಡಿಯನ್ನು ಒಟ್ಟಿಗೆ ಬಿಡಲಾಗಿವುದನ್ನು ಪ್ರಶ್ನಿಸಿ ವಿಶ್ವ ಹಿಂದೂ ಪರಿಷತ್ ಮುಖಂಡರು ಹೈಕೋರ್ಟ್ ಮೆಟ್ಟಿಲೇರಿರುವ ವಿಚಿತ್ರ ಪ್ರಸಂಗ ನಡೆದಿದೆ.
ಸಿಲಿಗುರಿಯಲ್ಲಿರುವ ಬಂಗಾಳ ಸಫಾರಿ ಪಾರ್ಕ್‌ಗೆ ಫೆಬ್ರವರಿ 12ರಂದು ತ್ರಿಪುರಾದ ಸೆಪಹಿಜಲಾ ಝುವೊಲಾಜಿಕಲ್ ಪಾರ್ಕಿನಿಂದ ಎರಡು ಸಿಂಹಗಳನ್ನು ತರಲಾಗಿತ್ತು. ಅವುಗಳಲ್ಲಿ ಒಂದಕ್ಕೆ ʼಅಕ್ಬರ್ʼ ಎಂದು ಹೆಸರನ್ನಿಡಲಾಗಿದ್ದರೆ, ಇನ್ನೊಂದಕ್ಕೆ ಸೀತಾ ಎಂಬ ಹೆಸರನ್ನಿಡಲಾಗಿದೆ.
ಈ ಜೋಡಿಯನ್ನು ಒಂದೇ ಕಡೆ ಅಧಿಕಾರಿಗಳು ಇರಿಸಿದ್ದಾರೆ. ಇದನ್ನು ಪ್ರಶ್ನಿಸಿ ವಿಶ್ವ ಹಿಂದೂ ಪರಿಷತ್ ಕೋಲ್ಕತಾ ಹೈಕೋರ್ಟ್ ಮೊರೆ ಹೋಗಿದೆ. ಈ ಕುರಿತು ಅರ್ಜಿ ವಿಚಾರಣೆಗೆ ಎತ್ತಿಕೊಂಡು ನ್ಯಾಯಾಲಯ ಪೀಠವು ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿರುವುದಾಗಿ ವರದಿಯಾಗಿದೆ.
ಪಶ್ಚಿಮ ಬಂಗಾಳದ ಅರಣ್ಯ ಇಲಾಖೆಯು ಹಲವಾರು ವರ್ಷಗಳಿಂದ ಪ್ರವಾಸಿ ತಾಣವಾದ ಸಿಲಿಗುರಿಯಲ್ಲಿ ವನ್ಯಜೀವಿಗಳ ಸಫಾರಿ ಪಾರ್ಕ್ ಹೊಂದಿದೆ. ಇಲ್ಲಿ ಆನೆ, ಸಿಂಹ, ಹುಲಿ ಸಹಿತ ಪ್ರಮುಖ ಪ್ರಾಣಿಗಳಿವೆ. ಬೆಂಗಳೂರಿನ ಬನ್ನೇರುಘಟ್ಟ ಮಾದರಿಯಲ್ಲಿಯೇ ಮೃಗಾಲಯ ಹಾಗೂ ಸಫಾರಿ ಪಾರ್ಕ್ ಇದೆ. ಇಲ್ಲಿಗೆ ನಿತ್ಯ ಸಹಸ್ರಾರು ಪ್ರವಾಸಿಗರು ಕೂಡ ಭೇಟಿ ನೀಡುತ್ತಿರುತ್ತಾರೆ.
ತ್ರಿಪುರಾದ ಸೆಪಹಿಜಾಲ ಮೃಗಾಲಯದಿಂದ ಸಿಂಹದ ಜೋಡಿಯನ್ನು ವಾರದ ಹಿಂದೆಯಷ್ಟೇ ಸಿಲಿಗುರಿ ಸಫಾರಿ ಪಾರ್ಕ್‌ಗೆ ತರಲಾಗಿತ್ತು. ಇದರಲ್ಲಿ ಅಕ್ಬರ್ ಹಾಗೂ ಸೀತಾ ಎನ್ನುವ ಸಿಂಹಗಳು ಸಫಾರಿ ಪಾರ್ಕ್‌ನಲ್ಲಿ ಬಿಡಲಾಗಿತ್ತು. ಇವರೆಡನ್ನೂ ಜೋಡಿಯಾಗಿ ಬಿಟ್ಟಿದ್ದನ್ನು ಕೆಲವರು ಗಮನಿಸಿದ್ದರು. ಇದು ಸ್ಥಳೀಯ ವಿಶ್ವ ಹಿಂದೂಪರಿಷತ್ ಪ್ರಮುಖರ ಗಮನಕ್ಕೂ ಬಂದಿತ್ತು.
ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಿಂಹಗಳ ಹೆಸರನ್ನು ಬದಲಿಸಿ ಇಲ್ಲವೇ ಸಿಂಹಗಳನ್ನು ಒಂದೇ ಕಡೆ ಇರುವುದನ್ನು ತಪ್ಪಿಸಿ ಎಂದು ಮನವಿ ಸಲ್ಲಿಸಿದ್ದರು. ಆದರೆ ಈಗಾಗಲೇ ಸಿಂಹಗಳಿಗೆ ಹೆಸರು ಇಡಲಾಗಿದೆ. ಹೆಸರು ಬದಲಾಯಿಸಲು ಆಗುವುದಿಲ್ಲ. ಅವುಗಳನ್ನು ಸ್ಥಳಾಂತರಿಸುವ ವಿಷಯವೂ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಉತ್ತರ ನೀಡಿದ್ದರು.
ಅರಣ್ಯ ಇಲಾಖೆ ಕ್ರಮವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳದ ವಿಶ್ವ ಹಿಂದೂ ಪರಿಷತ್ ಮುಖಂಡರು, ಜಲಪಾಯ್‌ಗುರಿಯಲ್ಲಿರುವ ಕೋಲ್ಕತಾ ಹೈಕೋರ್ಟ್‌ನ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು.
“ಇದು ಹಿಂದೂ ಭಾವನೆಗಳನ್ನು ಕೆರಳಿಸುವ ಕೆಲಸ. ಅಕ್ಬರ್ ಎನ್ನುವ ಸಿಂಹವನ್ನು ಸೀತಾ ಎನ್ನುವ ಸಿಂಹದ ಜತೆಗೆ ಇರಿಸುವುದು ಸರಿ ಕಾಣುತ್ತಿಲ್ಲ. ಅದು ಸಾಧ್ಯವೇ ಇಲ್ಲ. ಕೂಡಲೇ ಹೆಸರು ಬದಲಿಸಬೇಕು” ಎಂದು ಹೈಕೋರ್ಟ್‌ಗೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಪಶ್ವಿಮ ಬಂಗಾಳದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಲಿಗುರಿ ಸಫಾರಿ ಪಾರ್ಕ್ ನಿರ್ದೇಶಕರನ್ನು ಪ್ರತಿವಾದಿಗನ್ನಾಗಿ ಮಾಡಲಾಗಿದೆ.
ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ಪೀಠದ ನ್ಯಾಯಮೂರ್ತಿ ಸೌಗತಾ ಭಟ್ಟಾಚಾರ್ಯ ಅವರು ಫೆಬ್ರವರಿ 20ರಂದು ವಿಚಾರಣೆ ನಡೆಸುವುದಾಗಿ ಮುಂದಕ್ಕೆ ಹಾಕಿದರು. ಈ ಕುರಿತು ವಾದಿಗಳು ಹಾಗೂ ಪ್ರತಿವಾದಿಗಳಿಗೆ ನೊಟೀಸ್ ಕೂಡ ಜಾರಿಗೊಳಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಜ್ಞಾನಪೀಠ ಪ್ರಶಸ್ತಿಗೆ ಖ್ಯಾತ ಉರ್ದು ಕವಿ ಗುಲ್ಝಾರ್, ಸಂಸ್ಕೃತ ವಿದ್ವಾಂಸ ರಾಮಭದ್ರಾಚಾರ್ಯ ಆಯ್ಕೆ
ಈ ಬೆಳವಣಿಗೆ ಬಗ್ಗೆ ಹೇಳಿಕೆ ನೀಡಿರುವ ವಿಹಿಂಪ ಮುಖಂಡ ದುಲಾಲ್ ಚಂದ್ರ ರೇ, “ಅಕ್ಬರ್ ಹೆಸರಿನ ಸಿಂಹದ ಜೋಡಿಯಾಗಿರುವ ಹೆಣ್ಣು ಸಿಂಹಕ್ಕೆ ಸೀತಾ ಹೆಸರಿಟ್ಟಿದ್ದು ಹಿಂದು ಧರ್ಮದ ಮೇಲಿನ ದಾಳಿಯಾಗಿದೆ. ಇದು ಹಿಂದೂ ಧರ್ಮದವರ ಭಾವನೆಗಳಿಗೆ ನೋವುಂಟು ಮಾಡಿದೆ” ಎಂದಿದ್ದಾರೆ.