ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಎರಡು ವರ್ಷದ ಮಗು ಸೇರಿ ಏಳು ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ದೇವಿದಾಸ ಪಂಡಿತ (28), ಮನೀಷಾ ದೇವಿದಾಸ (23), ಭವನೇಶ ದೇವಿದಾಸ (2), ಉತ್ತಮ ಜಾಧವ್(42), ಅಲ್ಕಾ ಜಾಧವ (38),ದತ್ತಾತ್ರೇಯ ನಾಮದೇವ ವಾಘಮಾರೆ (45) ಹಾಗೂ ಅನುಶಯಾ ವಾಘಮಾರೆ (40) ಮೃತರು.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಾಪಸ್ ಬರುವ ವೇಳೆ ನಾಸಿಕ್ ಜಿಲ್ಲೆಯ ವಾಣಿ-ದಿಂಡೋರಿ ಹೆದ್ದಾರಿಯಲ್ಲಿ ಬುಧವಾರ ರಾತ್ರಿ 11.57 ಗಂಟೆಗೆ ದುರ್ಘಟನೆ ಸಂಭವಿಸಿದೆ. ಅಪಘಾತದ ಬಳಿಕ ಎರಡು ವಾಹನಗಳು ರಸ್ತೆಯ ಪಕ್ಕದಲ್ಲಿರುವ ಕಾಲುವೆಯಲ್ಲಿ ಬಿದ್ದು ನುಜ್ಜುಗುಜ್ಜಾಗಿರುವ ವಿಡಿಯೋ ವೈರಲ್ ಆಗಿದೆ.
ಗಾಯಗೊಂಡ ಇಬ್ಬರು ಬೈಕ್ ಸವಾರರನ್ನು ನಾಶಿಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.