- ‘ವಿಶ್ವದ ಅತ್ಯುತ್ತಮ ಬೀಫ್ ಉತ್ಪಾದನೆ ನನ್ನ ಗುರಿ’ ಎಂದ ಫೇಸ್‌ಬುಕ್‌ನ ಒಡೆಯ
- ಪೋಸ್ಟ್‌ಗೆ ವಿರೋಧ ವ್ಯಕ್ತಪಡಿಸಿ ಕಮೆಂಟ್ ಹಾಕುತ್ತಿರುವ ಸಂಘಪರಿವಾರದ ಬೆಂಬಲಿಗರು
ಮೆಟಾ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮುಖ್ಯಸ್ಥ, ಟೆಕ್ ಬಿಲಿಯನೇರ್ ಮಾರ್ಕ್ ಜುಕರ್‌ಬರ್ಗ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಾರ್ಕ್ ಆಗಾಗ ತಮ್ಮ ಹೊಸ ಆಲೋಚನೆಗಳನ್ನು ತಮ್ಮದೇ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಹಾಕುವ ಮೂಲಕ ಸದಾ ಸುದ್ದಿಯಲ್ಲಿರುತ್ತಿದ್ದರು. ಆದರೆ ಜ.10ರಂದು ಗೋಮಾಂಸದ ಕುರಿತು ಹಾಕಿರುವ ಪೋಸ್ಟ್ ಭಾರತದಲ್ಲಿ ಸಂಚಲನ ಸೃಷ್ಟಿಸಿದೆ.
ಹವಾಯಿಯ ಕವಾಯಿಯಲ್ಲಿರುವ ಕೂಲೌ ರಾಂಚ್ ಎಂಬ ಗೋ ಸಾಕಾಣಿಕೆ ಉದ್ಯಮವನ್ನು ಕೂಡ ಅವರು ಹೊಸದಾಗಿ ಪ್ರಾರಂಭಿಸಿದ್ದು, ಗೋಮಾಂಸದೊಂದಿಗೆ ಜುಕರ್‌ಬರ್ಗ್ ನೀಡಿರುವ ಸಲಹೆಯು ಸದ್ಯ ಸಂಘಪರಿವಾರದ ಬೆಂಬಲಿಗರು ಹಾಗೂ ಬಲಪಂಥೀಯರ ಕಣ್ಣು ಕೆಂಪಗಾಗಿಸಿದೆ.
“ವಿಶ್ವದ ಅತ್ಯುತ್ತಮ ಬೀಫ್ ಉತ್ಪಾದನೆ ನನ್ನ ಗುರಿ” ಎಂದು ಪೋಸ್ಟ್ ಹಾಕಿರುವ ಜುಕರ್‌ಬರ್ಗ್, “ಕೇವಲ ಹಸುಗಳನ್ನು ಸಾಕುವುದು ಮಾತ್ರವಲ್ಲದೆ ಅವುಗಳಿಗೆ ಮಕಾಡಾಮಿಯಾ ಒಣ ಹಣ್ಣುಗಳು ಮತ್ತು ಬಿಯರ್ ಕುಡಿಸಿ ಬೆಳೆಸುವ ಮೂಲಕ ವಿಶ್ವದ ಅತ್ಯುತ್ತಮ ಗೋಮಾಂಸ ಉತ್ಪಾದಿಸಬಹುದು” ಎಂದು ಸಲಹೆ ನೀಡಿದ್ದಾರೆ.
ಬುಧವಾರ ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಮ್ಮ ಹಸು ಸಾಕಾಣಿಕೆ ಮತ್ತು ಗೋಮಾಂಸ ಉತ್ಪಾದನೆ ವ್ಯಾಪಾರದ ಕುರಿತು ಮಾತನಾಡಿದ್ದಾರೆ.
“ಗೋವುಗಳನ್ನು ಬೆಳೆಸುವುದು ಮಾತ್ರವಲ್ಲದೆ ಅವುಗಳ ಆಹಾರ ಶೈಲಿಯಲ್ಲಿ ಬದಲಾವಣೆ ಇರಬೇಕು. ಆಗ ಮಾತ್ರ ವಿಶ್ವದ ಉತ್ತಮ ಗುಣಮಟ್ಟದ ಗೋಮಾಂಸ ಉತ್ಪಾದಿಸಬಹುದು” ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲದೇ, ಪೋಸ್ಟ್‌ನಲ್ಲಿ ಮಾರ್ಬಲ್ಡ್ ಗೋಮಾಂಸ ಊಟ ತಿನ್ನುತ್ತಿರುವುದನ್ನು ಕಾಣಬಹುದು.
ಮಾರ್ಕ್ ಅವರ ಪೋಸ್‌ನಲ್ಲಿ, “ಕೌವೈನಲ್ಲಿರುವ ಕೊಯೊಲೌ ರಾಂಚ್‌ನಲ್ಲಿ ವಾಗ್ಯು ಮತ್ತು ಆಂಗಸ್ ಎಂಬ ಜಾನುವಾರು ತಳಿಗಳನ್ನು ಸಾಕಲು ಪ್ರಾರಂಭಿಸಿದೆ. ನನ್ನ ಗುರಿ ಏನಂದ್ರೆ, ಪ್ರಪಂಚದಲ್ಲೇ ಅತ್ಯುನ್ನತ ಗುಣಮಟ್ಟದ ಗೋಮಾಂಸವನ್ನು ಉತ್ಪಾದಿಸುವುದು. ಜಾನುವಾರುಗಳಿಗೆ ಮಕಾಡಾಮಿಯಾ ಡ್ರೈ ಫ್ರೂಟ್ಸ್ ಮತ್ತು ಬಿಯರ್ ನೀಡಲಾಗುತ್ತದೆ. ಅಲ್ಲದೆ, ಪ್ರತಿ ಹಸು ಪ್ರತಿ ವರ್ಷವೂ 5,000-10,000 ಪೌಂಡ್‌ಗಳಷ್ಟು ಆಹಾರವನ್ನು ತಿನ್ನುತ್ತದೆ. ಆದ್ದರಿಂದ ಬಹಳಷ್ಟು ಎಕರೆಗಳಷ್ಟು ಮಕಾಡಾಮಿಯಾ ಮರಗಳನ್ನು ನೆಡಲು ನನ್ನ ಹೆಣ್ಣುಮಕ್ಕಳು ಸಹಾಯ ಮಾಡುತ್ತಾರೆ. ನಾವು ನಮ್ಮ ಗುರಿಯ ಆರಂಭದಲ್ಲಿದ್ದೇವೆ. ನನ್ನ ಎಲ್ಲ ಯೋಜನೆಗಳ ಪೈಕಿ, ಇದು ಅತ್ಯಂತ ವಿಶೇಷವಾದದ್ದು” ಎಂದು ಹೇಳಿಕೊಂಡಿದ್ದಾರೆ.
ಇನ್ನು ಮಾರ್ಕ್ ಪೋಸ್ಟ್‌ಗೆ ವಿದೇಶಿಗರು ಮತ್ತು ಗೋಮಾಂಸ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಭಾರತದಲ್ಲಿ ಸಂಘಪರಿವಾರ ಮತ್ತದರ ಬೆಂಬಲಿಗರು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಜುಕರ್‌ಬರ್ಗ್ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.