ದೇಶದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮರುಪರಿಶೀಲಿಸುವ ಉದ್ದೇಶಕ್ಕೆ ಹೊಸದಾಗಿ ಜಾರಿಗೆ ತರಲಾಗಿದ್ದ ಮೂರು ಹೊಸ ಕಾನೂನುಗಳು 2024ರ ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಅಧಿಕೃತ ಹೇಳಿಕೆಯ ಮೂಲಕ ತಿಳಿಸಿದೆ.
ಭಾರತೀಯ ನ್ಯಾಯ (ದ್ವಿತೀಯ) ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ (ದ್ವಿತೀಯ) ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ (ದ್ವಿತೀಯ) ಕಾಯ್ದೆಗಳು ಜುಲೈನಿಂದ ಅನುಷ್ಠಾನಕ್ಕೆ ಬರಲಿವೆ ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಬ್ರಿಟೀಷರ ವಸಾಹತು ಕಾಲದ ಕಾನೂನುಗಳನ್ನು ಇವು ಬದಲಿಸಲಿದ್ದು, ಪ್ರಸ್ತುತ ಬಳಕೆಯಲ್ಲಿ ಇರುವ ಭಾರತೀಯ ದಂಡ ಸಂಹಿತೆ 1860, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) 1973 ಮತ್ತು ಭಾರತೀಯ ಪುರಾವೆ ಕಾಯ್ದೆ, 1982ಗಳ ಜಾಗದಲ್ಲಿ ಇವು ಜಾರಿಯಾಗಲಿವೆ.
Bharatiya Sakshya Adhiniyam 2023, Bharatiya Nagarik Suraksha Sanhita 2023 and Bharatiya Nyaya Sanhita 2023 to come into effect from 1st July, 2024. pic.twitter.com/Kw0F3I7A4D
— ANI (@ANI) February 24, 2024
ಈ ಮೂರು ಕಾನೂನುಗಳಿಗೆ ಕಳೆದ ವರ್ಷ ಡಿಸೆಂಬರ್ 21 ರಂದು ಸಂಸತ್ತಿನಲ್ಲಿ ಅನುಮೋದನೆ ನೀಡಲಾಗಿತ್ತು. ಡಿಸೆಂಬರ್ 25ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದರು.
ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆ ಪ್ರಕಾರ ಮೂರು ಹೊಸ ಕಾನೂನುಗಳ ನಿಬಂಧನೆಗಳು ಜುಲೈ 1 ರಿಂದ ಜಾರಿಗೆ ಬರಲಿವೆ. ಈ ಕಾನೂನುಗಳು ವಸಾಹತುಶಾಹಿ-ಯುಗದ ಕ್ರಮವಾಗಿ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು 1872ರ ಭಾರತೀಯ ಸಾಕ್ಷಿ ಕಾಯ್ದೆಯನ್ನು ಬದಲಾಯಿಸಿವೆ.
ಮೂರು ಕಾನೂನುಗಳು ವಿವಿಧ ಅಪರಾಧಗಳು ಮತ್ತು ಅವುಗಳ ಶಿಕ್ಷೆಗಳ ವ್ಯಾಖ್ಯಾನಗಳನ್ನು ನೀಡುವ ಮೂಲಕ ದೇಶದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕೂಲಂಕಷವಾಗಿ ಪರಿಶೀಲಿಸುವ ಗುರಿಯನ್ನು ಹೊಂದಿವೆ ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ಪ್ರಕರಣೆಯಲ್ಲಿ ತಿಳಿಸಿದೆ.
ಈ ಕಾನೂನಿನ ಬಗ್ಗೆ ಲೋಕಸಭೆಯಲ್ಲಿ ನಡೆದಿದ್ದ ಚರ್ಚೆಯ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, “ದೇಶದಲ್ಲಿ ವಸಾಹತುಶಾಹಿ ಯುಗದ ಕಾನೂನುಗಳನ್ನು ಕೊನೆಗೊಳಿಸಲು ಸರ್ಕಾರವು ಮೂರು ಕ್ರಿಮಿನಲ್ ಮಸೂದೆಗಳನ್ನು ತಂದಿದೆ” ಎಂದಿದ್ದರು.
ಇದನ್ನು ಓದಿದ್ದೀರಾ? ಪ್ರಶ್ನೆಪತ್ರಿಕೆ ಸೋರಿಕೆ: ಅಭ್ಯರ್ಥಿಗಳ ಪ್ರತಿಭಟನೆಗೆ ಮಣಿದು ಪೊಲೀಸ್ ಪರೀಕ್ಷೆ ಅಮಾನ್ಯಗೊಳಿಸಿದ ಯೋಗಿ ಸರ್ಕಾರ
“ಈ ಹಿಂದಿನ ಕಾನೂನಿನಲ್ಲಿ ಹಲವು ಬದಲಾವಣೆ ಮಾಡಿ, ಹೊಸ ಕಾನೂನು ಮಸೂದೆ ಮಂಡಿಸಲಾಗಿದೆ. ಐಪಿಸಿ ಸೆಕ್ಷನ್ 124 ಅಥವಾ ದೇಶದ್ರೋಹದ ಕಾನೂನನ್ನು ರದ್ದುಗೊಳಿಸಲಾಗಿದೆ. ಈಗ ಈ ಕಾನೂನಿನ ಉದ್ದೇಶ ಸರ್ಕಾರವನ್ನು ಉಳಿಸುವುದಲ್ಲ, ಆದರೆ ದೇಶವನ್ನು ಉಳಿಸುವುದು. ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ, ಪ್ರತಿಯೊಬ್ಬರಿಗೂ ಸರ್ಕಾರವನ್ನು ಟೀಕಿಸುವ ಹಕ್ಕಿದೆ. ಆದರೆ ಭಾರತದ ಬಗ್ಗೆ ಕೀಳಾಗಿ ಏನನ್ನೂ ಹೇಳಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ” ಎಂದು ಅಮಿತ್ ಶಾ ಹೇಳಿಕೆ ನೀಡಿದ್ದರು.
