ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ನಮ್ಮ ಮೆಟ್ರೋ ಮದ್ದಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ನಗರದಲ್ಲಿ 74 ಕಿ.ಮೀ ಮಾರ್ಗದಲ್ಲಿ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ. ಇದೀಗ, ಮೆಟ್ರೋ ಮಾರ್ಗ ಇನ್ನಷ್ಟು ವಿಸ್ತರಣೆಯಾಗುತ್ತಿದ್ದು, ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ರಾಜ್ಯ ಸರ್ಕಾರದಿಂದ ₹1,003.47 ಕೋಟಿ ಅನುದಾನಕ್ಕೆ ಬಿಎಂಆರ್‌ಸಿಎಲ್ ಬೇಡಿಕೆ ಇಟ್ಟಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಈಗಾಗಲೇ ಮೂರನೇ ಹಂತದ ಯೋಜನೆಗೆ ಸಿದ್ಧತೆ ನಡೆಸಿದೆ. ಮೂರನೇ ಹಂತದ ಮೆಟ್ರೋದ ಮಾರ್ಗ 44.65 ಕಿಮೀ ಉದ್ದವಿದೆ. ಈ ಪೈಕಿ ಜೆಪಿ ನಗರ 4ನೇ ಹಂತದಿಂದ ಕೆಂಪಾಪುರ ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗೆ ಎರಡು ಹೊಸ ಮಾರ್ಗ ಹೊಂದಿರಲಿದೆ. ಮೊದಲ ಮಾರ್ಗವು ಹೊರ ವರ್ತುಲ ರಸ್ತೆಯ (ಔಟರ್ ರಿಂಗ್ ರೋಡ್) ಪಶ್ಚಿಮ ಭಾಗವನ್ನು ಒಳಗೊಳ್ಳಲಿದೆ. ಎರಡನೆಯದು ಮಾಗಡಿ ರಸ್ತೆ ಮೂಲಕ ಸಾಗಲಿದೆ.
2022ರ ನವೆಂಬರ್‌ನಲ್ಲಿ ಕರ್ನಾಟಕ ಸರ್ಕಾರ ನಮ್ಮ ಮೆಟ್ರೋದ ಮೂರನೇ ಹಂತದ ಕಾಮಕಾರಿಗೆ ಅನುಮೋದನೆ ನೀಡಿದೆ. ಒಟ್ಟು 44.65 ಕಿ.ಮೀ. ಮಾರ್ಗದ 3ನೇ ಹಂತವು ಜೆಪಿ ನಗರ 4ನೇ ಹಂತ – ಕೆಂಪಾಪುರ ಸ್ಟ್ರೆಚ್ ಹೊರ ವರ್ತುಲ ರಸ್ತೆ ವೆಸ್ಟ್ (32.1 ಕಿಮೀ) ಮತ್ತು ಹೊಸಹಳ್ಳಿ-ಮಾಗಡಿ ರಸ್ತೆಯಲ್ಲಿ ಕಡಬಗೆರೆ ಮಾರ್ಗ (12.5 ಕಿ.ಮೀ) ಇರಲಿದೆ. ಆದರೆ, ಕೇಂದ್ರ ಸರ್ಕಾರದ ಮಂಜೂರಾತಿ ಬಾಕಿ ಉಳಿದಿದೆ.
ಮೂರನೇ ಹಂತಕ್ಕಾಗಿ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಅನುಮೋದನೆಗಾಗಿ 2022ರ ನವೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಕೇಂದ್ರವು ಸುಧೀರ್ಘ ಚರ್ಚೆಗಳ ನಂತರ ಮಾರ್ಚ್ ವೇಳೆಗೆ ಮೂರನೇ ಹಂತದ ಡಿಪಿಆರ್ ಅನ್ನು ಅನುಮೋದಿಸುವ ನಿರೀಕ್ಷೆ ಇದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ. ಅಲ್ಲದೇ, ಮುಂಬರುವ ಬಜೆಟ್‌ನಲ್ಲಿ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ರಾಜ್ಯ ಸರ್ಕಾರದಿಂದ ₹1,003.47 ಕೋಟಿ ಅನುದಾನ ನಿರೀಕ್ಷೆ ಮಾಡಲಾಗಿದೆ.
ಮೂರನೇ ಹಂತದ ಮೆಟ್ರೋ ಕಾಮಗಾರಿ ಆರಂಭ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ, ಸ್ಥಳಾಂತರ, ಭೂಸ್ವಾಧೀನ ಇತ್ಯಾದಿ ಚಟುವಟಿಕೆಗಳು ಸೇರಿದಂತೆ ಕಾಮಗಾರಿಗೆ ಸಿದ್ಧತೆ ಕೈಗೊಳ್ಳಲು ಬಜೆಟ್‌ನಲ್ಲಿ ₹1,003.47 ಕೋಟಿ ನಿಗದಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ ಎಂದು ತಿಳಿದುಬಂದಿದೆ.
ಎರಡು ಕಾರಿಡಾರ್‌ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಶೀಘ್ರದಲ್ಲೇ ಅನುಮೋದನೆ ದೊರೆಯುವ ನಿರೀಕ್ಷೆಯಿದೆ. ಲೋಕಸಭಾ ಚುನಾವಣೆಗೆ ಮುನ್ನ ನೀತಿ ಸಂಹಿತೆ ಜಾರಿಯಾಗುವ ಮಾರ್ಚ್ 2024ರ ಮೊದಲ ಅಥವಾ ಎರಡನೇ ವಾರದಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ.
“ಜೆಪಿ ನಗರ 4ನೇ ಹಂತ ಮತ್ತು ಮೈಸೂರು ರಸ್ತೆ ನಡುವೆ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಅಗತ್ಯವಿರುವ ಆಸ್ತಿ ಗುರುತು ಮಾಡಲಾಗಿದೆ. ಈಗ ಮಾಲೀಕರಿಂದ ಆಸ್ತಿ ಪತ್ರಗಳನ್ನು ಸಂಗ್ರಹ ಮಾಡಲಾಗುತ್ತಿದೆ. ಇನ್ನು ನಾಗರಭಾವಿ – ಕೆಂಪಾಪುರ ಮಾರ್ಗ ಮತ್ತು ಮಾಗಡಿ ರಸ್ತೆ ಮಾರ್ಗಕ್ಕಾಗಿ ಭೂಮಿ ಗುರುತಿಸುವಿಕೆ ಮತ್ತು ಸ್ವಾಧೀನ ಪಡಿಸಿಕೊಳ್ಳುವ ಕೆಲಸ ಬಾಕಿ ಇದೆ. ಸರ್ಕಾರ 3ನೇ ಹಂತಕ್ಕೆ ಅನುಮೋದನೆ ನೀಡಿದ ತಕ್ಷಣ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದ್ದು, 6-8 ತಿಂಗಳು ಬೇಕಾಗುತ್ತದೆ” ಎಂದು ಬಿಎಂಆರ್‌ಸಿಎಲ್‌ನ ಪ್ರಧಾನ ವ್ಯವಸ್ಥಾಪಕ (ಭೂಸ್ವಾಧೀನ) ಎಂಎಸ್ ಚನ್ನಪ್ಪಗೌಡರ್ ಹೇಳಿದ್ದಾರೆ.
ಬೆಂಗಳೂರು ಮೆಟ್ರೋ ನಿಗಮದ ಕೆಂಪಾಪುರ – ಜೆ. ಪಿ. ನಗರ ನಾಲ್ಕನೇ ಹಂತ ಮತ್ತು ಹೊಸ ಹಳ್ಳಿ – ಕಡಬಗೆರೆ ನಡುವಿನ ಒಟ್ಟು 44.65 ಕಿ. ಮೀ.ಗಳ 3ಎ ಹಂತದ ಯೋಜನೆಗೆ ₹16,328 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಕೆಂಪಾಪುರದಿಂದ ಜೆ.ಪಿ.ನಗರ ನಾಲ್ಕನೇ ಹಂತದವರೆಗಿನ 32.15 ಕಿ.ಮೀ.ಗಳ ಮೊದಲ ಕಾರಿಡಾರ್‌ನಲ್ಲಿ 22 ನಿಲ್ದಾಣಗಳು ಬರಲಿವೆ. 2028ಕ್ಕೆ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದ್ದು, ಪ್ರತಿ ದಿನ 4.65 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ ಎಂದು ಬಿಎಂಆರ್‌ಸಿಎಲ್ ನಿರೀಕ್ಷಿಸಿದೆ.
ಕಾರಿಡಾರ್ – 1ರಲ್ಲಿ ಜೆ.ಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ 32.15 ಕಿ. ಮೀ. ಮಾರ್ಗದಲ್ಲಿ 22 ನಿಲ್ದಾಣಗಳು ಬರಲಿವೆ. ಕಾರಿಡಾರ್ – 2ರಲ್ಲಿ ಹೊಸ ಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೂ 12. ಕಿ. ಮೀ. ಮಾರ್ಗದಲ್ಲಿ 9 ನಿಲ್ದಾಣಗಳು ಬರಲಿವೆ. ಈ ಯೋಜನೆ ಉಪ ನಗರ ರೈಲು, ಬಸ್ ಡಿಪೋಗಳೂ ಸೇರಿದಂತೆ 9 ಕಡೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸುಮನ ಹಳ್ಳಿ ಜಂಕ್ಷನ್ ಇಂಟರ್‌ಚೇಂಜ್ ನಿಲ್ದಾಣವಾಗಿ ಕಾರ್ಯ ನಿರ್ವಹಿಸಲಿದೆ.
ಹೆಬ್ಬಾಳದಲ್ಲಿ ಕೊನೆಗೊಳ್ಳುವ ಕಾರಿಡಾರ್ – 1 ಏರ್‌ಪೋರ್ಟ್ ಲೈನ್‌ನ (ನೀಲಿ ಮಾರ್ಗ) ಹಂತ – 2 ಮಾರ್ಗದೊಂದಿಗೆ ಸಂಪರ್ಕ ಬೆಸೆಯಲಿದೆ. ಇದು ಕೆ. ಆರ್. ಪುರದಿಂದ ಹೆಬ್ಬಾಳ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗಲಿದೆ. ಜೆ.ಪಿ ನಗರದ ನಿಲ್ದಾಣವು ಹಸಿರು ಮಾರ್ಗದ ಜೆ.ಪಿ ನಗರ ನಿಲ್ದಾಣ, ಕಾಮಾಕ್ಯ ಮೆಟ್ರೋ ನಿಲ್ದಾಣ ಹಾಗೂ ನೇರಳೆ ಮಾರ್ಗದ ಮೈಸೂರು ರಸ್ತೆ ನಿಲ್ದಾಣ, ಸುಮನಹಳ್ಳಿ ಕ್ರಾಸ್ ಎರಡೂ ಹೊಸ ಕಾರಿಡಾರ್‌ಗಳಿಗೆ ಸಂಪರ್ಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
ಕಾರಿಡಾರ್-1ರಲ್ಲಿನ ನಿಲ್ದಾಣಗಳು
ಜೆ. ಪಿ. ನಗರ 4ನೇ ಹಂತ, ಜೆ.ಪಿ ನಗರ 5ನೇ ಹಂತ, ಜೆ.ಪಿ ನಗರ, ಕದಿರೇನ ಹಳ್ಳಿ, ಕಾಮಾಕ್ಯ ಬಸ್ ನಿಲ್ದಾಣ, ಹೊಸಕೆರೆ ಹಳ್ಳಿ ಕ್ರಾಸ್, ಪಿಇಎಸ್ ಕಾಲೇಜು, ಮೈಸೂರು ರಸ್ತೆ ನಾಗರಬಾವಿ ವೃತ್ತ, ವಿನಾಯಕ ಲೇಔಟ್, ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್, ಬಿಡಿಎ ಕಾಂಪ್ಲೆಕ್ಸ್, ಸುಮನಹಳ್ಳಿ ಕ್ರಾಸ್, ಚೌಡೇಶ್ವರಿ ನಗರ, ಫ್ರೀಡಂ ಫೈಟರ್ ಕ್ರಾಸ್, ಕಂಠೀರವ ಸ್ಟೇಡಿಯಂ, ಪೀಣ್ಯ, ಬಾಹುಬಲಿ ನಗರ, ಬಿಇಎಲ್ ವೃತ್ತ, ಪಟೇಲಪ್ಪ ಲೇಔಟ್, ಹೆಬ್ಬಾಳ, ಕೆಂಪಾಪುರ ನಿಲ್ದಾಣಗಳಿರಲಿವೆ.
ಈ ಸುದ್ದಿ ಓದಿದ್ದೀರಾ? ಫೆ.27, 28ರಂದು ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ
ಕಾರಿಡಾರ್-2ರಲ್ಲಿನ ನಿಲ್ದಾಣಗಳು
ಹೊಸ ಹಳ್ಳಿ, ಕೆಎಚ್‌ಬಿ ಕಾಲೋನಿ, ವಿನಾಯಕ ನಗರ, ಸುಮನ ಹಳ್ಳಿ ಕ್ರಾಸ್, ಸುಂಕದ ಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ, ಫಾರೆಸ್ಟ್ ಗೇಟ್, ಕಡಬಗೆರೆ ನಿಲ್ದಾಣಗಳು ಇರಲಿವೆ.