- ಕೊಲ್ಲಂನ ತಳವೂರು ಪಂಚಾಯತ್‌ನ ಸದಸ್ಯ ಸಿ.ರೆಂಜಿತ್‌ರಿಂದ ವಿಚಿತ್ರ ಪ್ರತಿಭಟನೆ
- ಕಾಯಿನ್ ಎಣಿಸಲು ಅರ್ಧ ದಿನ ತೆಗೆದುಕೊಂಡ ಕೇರಳ ವಿದ್ಯುತ್ ಇಲಾಖೆಯ ಸಿಬ್ಬಂದಿ
ತಾನು ಪ್ರತಿನಿಧಿಸುತ್ತಿದ್ದ ವಾರ್ಡಿನಲ್ಲಿ ದಿನಕ್ಕೆ 20 ಬಾರಿ ವಿದ್ಯುತ್ ವ್ಯತ್ಯಯವಾಗುತ್ತಿದ್ದರಿಂದ ಬೇಸತ್ತ ವಾರ್ಡ್ ಸದಸ್ಯನೋರ್ವ, ಕರೆಂಟ್ ಬಿಲ್ ಕಟ್ಟುವ ವೇಳೆ ಅಧಿಕಾರಿಗಳಿಗೆ ಸುಮಾರು 10 ಸಾವಿರ ಮೌಲ್ಯದ ನಾಣ್ಯ ಎಣಿಸುವ ಕೆಲಸಕೊಟ್ಟು ವಿಚಿತ್ರ ರೀತಿಯಲ್ಲಿ ಪ್ರತೀಕಾರ ತೀರಿಸಿದ ಘಟನೆ ಕೇರಳದಲ್ಲಿ ನಡೆದಿದೆ.
ಕೊಲ್ಲಂ ಜಿಲ್ಲೆಯ ತಳವೂರು ಪಂಚಾಯತ್‌ನ ರಾಂಡಾಲುಮೂಡು ವಾರ್ಡ್ ಪ್ರದೇಶದಲ್ಲಿ ಪದೇ ಪದೇ, ಅಂದರೆ ದಿನಕ್ಕೆ 20 ಬಾರಿ ವಿದ್ಯುತ್ ವ್ಯತ್ಯಯವಾಗುತ್ತಿರುವುದರಿಂದ ಸಿಟ್ಟಿಗೆದ್ದ ವಾರ್ಡ್ ಸದಸ್ಯರೊಬ್ಬರು, ಅಧಿಕಾರಿಗಳಿಗೆ ಪಾಠ ಕಳಿಸುವ ನಿಟ್ಟಿನಲ್ಲಿ ಈ ರೀತಿ ನಡೆದುಕೊಂಡಿದ್ದಾರೆ. ಅಧಿಕಾರಿಗಳು, ಸುಸ್ತಾಗಿ ಕಾಯಿನ್ ಎಣಿಸುವ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
ರಾಂಡಾಲುಮೂಡು ವಾರ್ಡ್ ಪ್ರತಿನಿಧಿಸುವ ಸಿ.ರೆಂಜಿತ್ ಅವರು ಕಾಯಿನ್ ತುಂಬಿದ್ದ ಗೋಣಿಚೀಲ ಹಿಡಿದು ಪಟ್ಟಾಡಿಯಲ್ಲಿರುವ ಕೇರಳ ರಾಜ್ಯ ವಿದ್ಯುತ್ ಮಂಡಳಿ ಕಚೇರಿಯ(KSEB) ಬಿಲ್ ಕೌಂಟರ್‌ಗೆ ಬಂದಾಗ ಸಿಬ್ಬಂದಿ ಕಂಗಾಲಾದರು.
ತನ್ನ ವಾರ್ಡಿನ ಒಂಭತ್ತು ಕುಟುಂಬಗಳ ವಿದ್ಯುತ್ ಬಿಲ್‌ಗಳನ್ನು ಪಾವತಿಸಲು ಬಂದಿರುವುದಾಗಿ ತಿಳಿಸಿ, ಒಂದು, ಎರಡು, ಐದು ಮತ್ತು ಹತ್ತು ರೂಪಾಯಿ ನಾಣ್ಯಗಳು ಇದ್ದ ಗೋಣಿ ಚೀಲವನ್ನು ನೀಡಿದ್ದಾರೆ. ಇದನ್ನು ಸ್ವೀಕರಿಸಿದ ಸಿಬ್ಬಂದಿ, ಬೇರೆ ದಾರಿ ಕಾಣದೆ ಎಣಿಸಿ,ಎಣಿಸಿ ಕೊನೆಗೂ ಬಿಲ್ ರಶೀದಿ ನೀಡಿದ್ದಾರೆ.
ಕೇವಲ ಒಂಭತ್ತು ಮಂದಿಯ ಬಿಲ್ ಅನ್ನು ಕಾಯಿನ್ ಮೂಲಕ ನೀಡಿದ್ದರಿಂದ, ಎಲ್ಲವೂ ಮುಗಿಸಲು ಸುಮಾರು ಅರ್ಧ ದಿನವೇ ತೆಗೆದುಕೊಳ್ಳಬೇಕಾದ ಪ್ರಸಂಗ ಎದುರಾದವು. ಮಧ್ಯಾಹ್ನ ಆರಂಭಿಸಿದ ಕಾಯಿನ್ ಎಣಿಕೆ ಕಾರ್ಯವು ಕಚೇರಿಯಲ್ಲಿದ್ದ ಎಲ್ಲ ಅಧಿಕಾರಿಗಳು ಸೇರಿ ರಾತ್ರಿಯವರೆಗೂ ಎಣಿಕೆ ನಡೆಸಿ, ಕೊನೆಗೆ ರಶೀದಿ ನೀಡಿದ್ದಾರೆ. ವಾರ್ಡ್ ಸದಸ್ಯ ನೀಡಿದ ಕಾಯಿನ್‌ಗಳ ಸಂಖ್ಯೆ 9,737₹. ಸುಮಾರು 50 ಕೆಜಿಗಿಂತ ಹೆಚ್ಚು ತೂಕದ ನಾಣ್ಯಗಳು ಗೋಣಿಚೀಲದಲ್ಲಿದ್ದವು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿ.ರೆಂಜಿತ್, ‘ನನ್ನ ವಾರ್ಡಿನಲ್ಲಿ ದಿನಕ್ಕೆ 20 ಬಾರಿ ವಿದ್ಯುತ್ ವ್ಯತ್ಯಯವಾಗುತ್ತಲೇ ಇದೆ. ಸೊಳ್ಳೆಯ ಉಪಟಳದಿಂದ ರಾತ್ರಿ ಸರಿಯಾಗಿ ನನ್ನ ವಾರ್ಡಿನ ಜನರಿಗೆ ನಿದ್ದೆ ಕೂಡ ಮಾಡಲಾಗುತ್ತಿರಲಿಲ್ಲ. ಹೀಗಾಗಿ ಅಧಿಕಾರಿಗಳು ನಮ್ಮನ್ನು ಸಂಕಷ್ಟ ಈಡುಮಾಡುತ್ತಿದ್ದರು. ಅದಕ್ಕೆ ಪ್ರತಿಭಟನೆಯ ರೂಪದಲ್ಲಿ ಈ ರೀತಿ ಮಾಡಿದ್ದೇನೆ. ನಮಗೆ ಕೆಲಸ ಕೊಟ್ಟವರಿಗೆ ನಾನೂ ಕೆಲಸ ಕೊಟ್ಟಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಮಾಡಿಲ್ಲ’ ಎಂದು ತಿಳಿಸಿದ್ದಾರೆ.
‘ಆಗಾಗ್ಗೆ ವಿದ್ಯುತ್ ಕಡಿತದ ವಿರುದ್ಧ ಪ್ರತಿಭಟನೆಯ ಒಂದು ವಿಶಿಷ್ಟ ರೂಪವಷ್ಟೇ ಇದು. ನಾಣ್ಯಗಳನ್ನು ಎಣಿಸಲು ಮತ್ತು ರಶೀದಿಗಳನ್ನು ನೀಡಲು ಇಡೀ ಕಚೇರಿಯ ಸಿಬ್ಬಂದಿ ಸುಮಾರು ಅರ್ಧ ದಿನ ತೆಗೆದುಕೊಂಡರು. ವಿದ್ಯುತ್ ವ್ಯತ್ಯಯದಿಂದ ನಮ್ಮ ಜೀವನವನ್ನು ಪ್ರತಿದಿನವೂ ನರಕವಾಗಿಸಿದ್ದರು. ಒಂದು ದಿನಕ್ಕೆ ಸರಾಸರಿ ಕನಿಷ್ಠ 20 ಬಾರಿ ವಿದ್ಯುತ್ ಸ್ಥಗಿತಗೊಳ್ಳುತ್ತಿದ್ದುದರಿಂದ ವಾರ್ಡಿನ ಅನೇಕ ಮನೆಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಳಗಾಗುತ್ತಲೇ ಇರುತ್ತವೆ. ನಮ್ಮ ದೂರುಗಳನ್ನು ನೇರವಾಗಿ ಅಧಿಕಾರಿಗಳಿಗೆ ತಿಳಿಸಿದಾಗ ಉಡಾಫೆಯಿಂದ ಉತ್ತರಿಸುತ್ತಿದ್ದರು. ಅದಕ್ಕಾಗಿ ಜನರು ಅನುಭವಿಸಿದ ಕಷ್ಟಗಳನ್ನು ಅವರಿಗೂ ಗೊತ್ತಾಗಬೇಕು ಎಂದು ಬಿಲ್ ಅನ್ನು ಕಟ್ಟುವ ಸಂದರ್ಭದಲ್ಲಿ ನನ್ನ ವಾರ್ಡಿನಲ್ಲಿದ್ದ ಒಂಭತ್ತು ಮನೆಯ ಬಿಲ್‌ಗಳನ್ನು ನಾನೇ ಕಟ್ಟಲು ತೆರಳಿದೆ. ಒಟ್ಟು ಮೊತ್ತ ₹ 9,737 ಆಗಿತ್ತು. ಅವರಿಂದ ಹಣ ಪಡೆದುಕೊಂಡು ನಾನಾ ದೇವಾಲಯಗಳಿಗೆ ಭೇಟಿ ನೀಡಿ, ಅಲ್ಲಿನ ಉಸ್ತುವಾರಿಗಳ ಹತ್ತಿರ ಮಾತನಾಡಿಸಿ, ಹರಕೆಯ ಡಬ್ಬದಲ್ಲಿದ್ದ ನಾಣ್ಯಗಳನ್ನು ಸಂಗ್ರಹಿಸಿದ್ದೆ’ ಎಂದು ತಿಳಿಸಿದ್ದಾರೆ.
Tired of constant power cuts and poor service by the Kerala State Electricity Board (KSEB), this ward member from Kollam, gave a nice job to KSEB employees by collecting Electricity bill of 9 families from his ward (~Rs 10k) in coins and paid. pic.twitter.com/SbsIbeKcFI
— നചികേതസ് (@nach1keta) November 15, 2023
‘ವಿದ್ಯುತ್ ಸಮಸ್ಯೆಯ ಹಿನ್ನೆಲೆಯಲ್ಲಿ ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿದರೆ ಪೊಲೀಸ್ ಕೇಸು ಅದು ಇದು ಆಗುತ್ತದೆ. ಹಾಗಾಗಿ, ಅದನ್ನು ತಪ್ಪಿಸಲು ಈ ಉಪಾಯ ಕಂಡುಕೊಂಡೆ. ಜನರು ಅನುಭವಿಸುತ್ತಿರುವ ಕಷ್ಟ ಅಧಿಕಾರಿಗಳಿಗೂ ಗೊತ್ತಾಗಲಿ ಎಂದು ಮಾಡಿದ್ದೇನಷ್ಟೆ. ಇಷ್ಟು ಮಾಡಿಯೂ ವಿದ್ಯುತ್ ವ್ಯತ್ಯಯ ಮುಂದುವರಿದರೆ ಪ್ರತಿ ತಿಂಗಳು ಕೂಡ ಇದನ್ನು ಮುಂದುವರಿಸುತ್ತೇನೆ. ಈಗ ಕೇವಲ ಒಂಭತ್ತು ಮನೆಯ ಬಿಲ್ ಮಾತ್ರ ನೀಡಿದ್ದೇನಷ್ಟೇ ಮುಂದಿನ ದಿನಗಳಲ್ಲಿ ವಾರ್ಡಿನಲ್ಲಿರುವ ಎಲ್ಲ ಮನೆಗಳ ಬಿಲ್ ಇದೇ ರೀತಿ ಕಟ್ಟುವ ಮೂಲಕ ಅಧಿಕಾರಿಗಳಿಗೆ ಪಾಠ ಕಲಿಸಲಿದ್ದೇನೆ. ವಿದ್ಯುತ್ ಇಲಾಖೆಯ ರೀತಿಯಲ್ಲಿಯೇ ನೀರಾವರಿ ಅಧಿಕಾರಿಗಳಿಗೂ ಈ ಅನುಭವ ನೀಡುವ ಯೋಜನೆಯಲ್ಲಿದ್ದೇನೆ’ ಎಂದು ಸಿ.ರೆಂಜಿತ್ ತಿಳಿಸಿದ್ದಾರೆ.
ಈ ನಾಣ್ಯಗಳನ್ನು ತನ್ನ ಮನೆಯಲ್ಲಿ ಎಣಿಸಲು ಒಂದು ದಿವಸ ತೆಗದುಕೊಂಡಿದ್ದೆ. ಎಲ್ಲ ನಾಣ್ಯಗಳನ್ನು ದೇವಾಲಯಗಳಿಂದ ಸಂಗ್ರಹಿಸಿದ್ದೆ ಎಂದು ರೆಂಜಿತ್ ಮಾಹಿತಿ ನೀಡಿದ್ದಾರೆ. ರೆಂಜಿತ್ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
ವಾರ್ಡ್ ಸದಸ್ಯನ ಕಾರ್ಯಕ್ಕೆ ಜನರು ವ್ಯಾಪಕ ಶ್ಲಾಘನೆ ವ್ಯಕ್ತಪಡಿಸಿದರೆ, ಕೆಲವರು ಇದೊಂದು ರಾಜಕೀಯ ಪ್ರತೀಕಾರ, ಸೋಷಿಯಲ್ ಮೀಡಿಯಾಗಳಲ್ಲಿ ತನ್ನ ಹೆಸರು ಬರಲು ಈ ರೀತಿ ಮಾಡಿದ್ದಾರೆ ಎಂದು ದೂರಿದ್ದಾರೆ.