ಕೆಲಸದ ಸ್ಥಳಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ಆಗುತ್ತಿರುವ ಲೈಂಗಿಕ ಕಿರುಕುಳ ಪ್ರಕರಣ ಈಗ ನ್ಯಾಯಾಂಗ ಕೂಡ ಹೊರತಾಗಿಲ್ಲ, ಅಲ್ಲಿಯೂ ಕೂಡ ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂಬ ಅಂಶ ಬಹಿರಂಗಗೊಂಡಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿದೆ.
ನ್ಯಾಯದಾನ ಮಾಡುವ ಹಾಗೂ ಆರೋಪಿಗಳಿಗೆ ಶಿಕ್ಷೆ ವಿಧಿಸುವ ನ್ಯಾಯಾಧೀಶೆಯೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿ, ದಾರಿ ಕಾಣದಾಗದೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಬಹಿರಂಗ ಪತ್ರ ಬರೆದಿರುವ ಸಂಗತಿ ವರದಿಯಾಗಿದ್ದು, “ನನಗೆ ಬದುಕಲು ಆಸಕ್ತಿ ಇಲ್ಲ, ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ನೀಡಿ” ಎಂಬ ಆಘಾತಕಾರಿ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ.
“If any of the women think that you’ll fight against the system, let me
tell you, I couldn’t. And I am JUDGE. I could not even a muster a fair
enquiry for myself, Let alone JUSTICE. I advise all women to learn to be a
toy, or a non-living thing.”State of affairs in UP judiciary pic.twitter.com/5CjEQzlaKv
— Ratna Singh (@whattalawyer) December 14, 2023
“ತಮ್ಮ ಹಿರಿಯ ನ್ಯಾಯಾಧೀಶರು ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ” ಎಂದು ಆರೋಪಿಸಿರುವ ಉತ್ತರ ಪ್ರದೇಶದ ನ್ಯಾಯಾಧೀಶೆಯೊಬ್ಬರು, ಆತ್ಮಹತ್ಯೆ ಮಾಡಿಕೊಳ್ಳಲು ನನಗೆ ಅನುಮತಿ ನೀಡುವಂತೆ ಕೋರಿ ಬರೆದಿರುವ ಬಹಿರಂಗ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಚಾರ ಮಾಧ್ಯಮಗಳಲ್ಲೂ ಕೂಡ ಭಾರೀ ಸದ್ದು ಮಾಡುತ್ತಿರುವ ನಡುವೆಯೇ, ಈ ಸಂಬಂಧ ಶೀಘ್ರವೇ ವರದಿ ನೀಡುವಂತೆ ಸಿಜೆಐ ಡಿವೈ ಚಂದ್ರಚೂಡ್ ಆದೇಶಿಸಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನಿರ್ದೇಶನದ ಮೇರೆಗೆ, ಸುಪ್ರೀಂ ಕೋರ್ಟ್ನಿಂದ ಸದ್ಯ ಪ್ರಕರಣವಿರುವ ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ಈ ಬಗ್ಗೆ ಮಾಹಿತಿ ವರದಿ ನೀಡುವಂತೆ ತಿಳಿಸಲಾಗಿದೆ. ಮಹಿಳಾ ನ್ಯಾಯಾಧೀಶೆ ಸಲ್ಲಿಸಿದ ಎಲ್ಲ ದೂರುಗಳ ಪ್ರಸ್ತುತ ಸ್ಥಿತಿಯನ್ನು ಸಿಜೆಐ ಕೋರಿದ್ದಾರೆ. ಸದ್ಯ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕೂಡ ಬಹಿರಂಗ ಪತ್ರದ ಬಗ್ಗೆ ಗಮನಹರಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ನ ಪ್ರಧಾನ ಕಾರ್ಯದರ್ಶಿ ಸುಪ್ರೀಂಕೋರ್ಟ್ ಪ್ರಧಾನ ಕಾರ್ಯದರ್ಶಿ ಅತುಲ್ ಎಂ ಕುರ್ಹೇಕರ್ ಮಾಹಿತಿ ನೀಡಿರುವುದಾಗಿ ಬಾರ್ & ಬೆಂಚ್ ವರದಿ ಮಾಡಿದೆ.
‘ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದ ನ್ಯಾಯಾಧೀಶೆ
ತಾವು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ 2023ರ ಜುಲೈ ತಿಂಗಳಿನಲ್ಲಿಯೇ ಹೈಕೋರ್ಟ್ನ ಆಂತರಿಕ ದೂರು ಸಮಿತಿಯಲ್ಲಿ ದೂರು ಸಲ್ಲಿಸಿದ್ದೆ. ಈ ಸಂಬಂಧ ತನಿಖೆಗೆ ಆರೋಪಿಸಲಾಗಿತ್ತು. ಆದರೆ ಆ ತನಿಖೆಯು ಒಂದು ಪ್ರಹಸನ ಮತ್ತು ನಟನೆಯಂತಿತ್ತು. ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ನ್ಯಾಯಾಧೀಶೆ ಸಿಜೆಐಗೆ ಬರೆದ ಪತ್ರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
“ಈ ವಿಚಾರಣೆಯಲ್ಲಿನ ಸಾಕ್ಷಿದಾರರು ಜಿಲ್ಲಾ ನ್ಯಾಯಾಧೀಶರ ಅಧೀನದಲ್ಲಿ ಕೆಲಸ ಮಾಡುವವರು. ತಮ್ಮ ಮೇಲಾಧಿಕಾರಿಗಳ ವಿರುದ್ಧ ಸಾಕ್ಷ್ಯ ಹೇಳುವುದನ್ನು ಸಮಿತಿ ಹೇಗೆ ನಿರೀಕ್ಷಿಸುತ್ತದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ” ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.
“ತುಂಬಾ ನೋವು ಅನುಭವಿಸಿದ್ದೇನೆ. ಹಾಗಾಗಿ, ಘನತೆಯುಳ್ಳ ಮಾರ್ಗದಲ್ಲಿ ನನ್ನ ಜೀವ ಅಂತ್ಯಗೊಳಿಸಲು ದಯವಿಟ್ಟು ನನಗೆ ಅನುಮತಿ ನೀಡಿ” ಎಂದು ಸಿಜೆಐ ಅವರನ್ನು ಉಲ್ಲೇಖಿಸಿ ಬಾಂದದ ಮಹಿಳಾ ನ್ಯಾಯಾಧೀಶರು ಪತ್ರ ಬರೆದಿದ್ದಾರೆ.
ಬಾರಾಬಂಕಿಯಲ್ಲಿ ಕೆಲಸದ ಮಾಡುತ್ತಿದ್ದ ವೇಳೆ ಜಿಲ್ಲಾ ನ್ಯಾಯಾಧೀಶ ಹಾಗೂ ಅವರ ಸಹವರ್ತಿಗಳು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸದ್ಯ ಬಾಂದಾದಲ್ಲಿ ಸೇವೆಯಲ್ಲಿರುವ ಜಿಲ್ಲಾ ನ್ಯಾಯಾಧೀಶೆ ಪತ್ರದಲ್ಲಿ ಆರೋಪಿಸಿದ್ದಾರೆ.
“ನಾನು ತೀವ್ರ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ನನ್ನನ್ನು ತೀರಾ ಕಸದಂತೆ ನಡೆಸಿಕೊಳ್ಳಲಾಗಿದೆ. ನಾನೊಬ್ಬಳು ಅನಗತ್ಯ ಕ್ರಿಮಿಯಂತೆ ಭಾಸವಾಗುತ್ತಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.
ಡಿಸೆಂಬರ್ 13 ರಂದು ನ್ಯಾಯಾಧೀಶೆಯು ಈ ಪ್ರಕರಣದಲ್ಲಿ ನ್ಯಾಯಯುತ ತನಿಖೆಯನ್ನು ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದಾಗ್ಯೂ, ನ್ಯಾಯಮೂರ್ತಿ ಹೃಷಿಕೇಶ್ ರಾಯ್ ನೇತೃತ್ವದ ಪೀಠವು ಆಕೆಯ ಮನವಿಯನ್ನು ವಜಾಗೊಳಿಸಿತ್ತು ಎಂದು ಬಾರ್ & ಬೆಂಚ್ ವರದಿ ಮಾಡಿದೆ.