ಪಿ.ಎಂ.ಗತಿ ಶಕ್ತಿ ಹಾಗೂ ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯ ನಿಯಮಗಳ ಪ್ರಕಾರ ಗದಗ- ವಾಡಿ ರೈಲ್ವೆ ಮಾರ್ಗವನ್ನು ಹಟ್ಟಿ ಪಟ್ಟಣಕ್ಕೆ ಸಂಪರ್ಕಿಸಬೇಕು ಎಂದು ಹಟ್ಟಿ ಪಟ್ಟಣ ವೇದಿಕೆ ವತಿಯಿಂದ ಸಂಸದ ಜಿ.ಕುಮಾರ ನಾಯಕ ಅವರಿಗೆ ಮನವಿ ಸಲ್ಲಿಸಿದರು.
ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣವು ಒಂದು ದೊಡ್ಡ ನಗರ ಪ್ರದೇಶವಾಗಿದ್ದು ಹಾಗೂ ಏಷ್ಯಾದ ಚಿನ್ನ ತೆಗೆಯುವ ಗಣಿನಾಡು ಪ್ರಸಿದ್ಧವಾಗಿದೆ. ನಗರದಲ್ಲಿ ಒಟ್ಟು 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣವಾಗಿದೆ. ಸದರಿ ಪ್ರದೇಶದಿಂದ ಬೇರೆ ಕಡೆಗೆ ರೈಲ್ವೆ ಯೋಜನೆಯನ್ನು ಕಲ್ಪಿಸುವುದರಿಂದ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ಆಗ್ರಹಿಸಿದರು.
ಹಟ್ಟಿ ಚಿನ್ನದ ಗಣಿಯ ವಾರ್ಷಿಕ ರೂ. 350 ಕೋಟಿ ಹೆಚ್ಚು ತೆರಿಗೆ ಹಾಗೂ ರಾಯಲ್ಟಿ ಸರ್ಕಾರಕ್ಕೆ ಪಾವತಿಸುತ್ತಿದೆ. ಹಟ್ಟಿ ಸುತ್ತಮುತ್ತಲೂ ಚಿನ್ನದ ಗಣಿಗಾರಿಕೆಯು ಅಶೋಕನ ಕಾಲದಿಂದ ನಡೆಯುತ್ತಿರುವುದು ಇತಿಹಾಸದ ಪ್ರಕಾರ ಗೊತ್ತಾಗುತ್ತದೆ. ದೇಶದಲ್ಲಿಯೇ ಅತೀ ಹೆಚ್ಚು ಚೆನ್ನದ ನಿಕ್ಷೇಪವಿರುವ ಪ್ರದೇಶವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಹೈದರಾಬಾದ್ ನಿಜಾಮರ ಸರ್ಕಾರವು ಹಟ್ಟಿ ಚಿನ್ನದ ಗಣಿಯಿಂದ ಹೈದರಾಬಾದ್‌ಗೆ ರೈಲ್ವೆ ಯೋಜನೆ ಸಿದ್ಧಪಡಿಸಿ ಅನುಮೋದನೆ ನೀಡಿತ್ತು. 1963ರಲ್ಲಿ ಕಲಬುರಗಿ ಭಾಗದ ಶಾಸಕರಾದ ಶರಣಪ್ಪರವರು ಅಂದಿನ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹಟ್ಟಿ ಚಿನ್ನದ ಗಣಿ ಮುಖಾಂತರ ವಾಡಿಗೆ ರೈಲ್ವೆ ಮಾರ್ಗವನ್ನು ಸೂಚಿಸಿ ಮನವಿ ಮಾಡಿದ್ದರು.
ಈ ಬಗ್ಗೆ ಹೋರಾಟಗಾರ ಲಾಲ್ ಪೀರ್ ಮಾತನಾಡಿ, 1985 ರಲ್ಲಿ ಅಂದಿನ ಬಳ್ಳಾರಿ ಸಂಸದ ಬಸವರಾಜ ರಾಜೇಶ್ವರಿ ಕೇಂದ್ರ ಸರ್ಕಾರಕ್ಕೆ ಹಟ್ಟಿ ಚಿನ್ನದ ಗಣಿ ಮುಖಾಂತರ ಗದಗ-ವಾಡಿ ರೈಲ್ವೆ ಯೋಜನೆಗೆ ಅನುಮೋದನೆಗೆ ಸೂಚಿಸಿದ್ದರು. ಗದಗ-ವಾಡಿ ರೈಲ್ವೆ ಯೋಜನೆಯನ್ನು ಹಟ್ಟೆ ಮುಖಾಂತರ ಸಂಪರ್ಕಿಸಲು ಹಲವು ಪ್ರಗತಿಪರ ಸಂಘ ಸಂಸ್ಥೆಗಳು ಬಹಳ ಸುಧೀರ್ಘ ಹೋರಾಟ ನಡೆಸಿದ್ದರು. ಭಾರತ ಸರ್ಕಾರವು ಗದಗ-ವಾಡಿ ರೈಲ್ವೆ ಯೋಜನೆಯನ್ನು ಮಂಜೂರು ಮಾಡಿದ್ದು ಅದರ ಸರ್ವೇ ಕೆಲಸವು ಪ್ರಗತಿಯಲ್ಲಿದೆ. ಆ ಸರ್ವೇ ಮಾರ್ಗವು ಅವೈಜ್ಞಾನಿಕವಾಗಿದ್ದು, ಲಿಂಗಸುಗೂರು-ಹೊನ್ನಳ್ಳಿ-ಯರಡೋಣ-ಗುರುಗುಂಟಾ ಮೂಲಕ ಹಾದುಹೋಗಲು ಯೋಜನೆ ಸಿದ್ಧಪಡಿಸಲಾಗಿದೆ. ಆದರೆ ಮೂಲ ಗದಗ-ವಾಡಿ ರೈಲ್ವೆ ಯೋಜನೆಯ ಪ್ರಕಾರ ಹಟ್ಟಿ ಮಾರ್ಗವಾಗಿ ಹಾದುಹೋಗಬೇಕಾಗಿರುತ್ತದೆ ಎಂದರು.
ಹಟ್ಟಿ ಚಿನ್ನದ ಗಣಿ ಸುತ್ತಮುತ್ತಲೂ 14 ಚಿನ್ನದ ಗಣಿ ಬ್ಲಾಕ್(ನಿಕ್ಷೇಪ)ಗಳಿದ್ದು, ಭಾರತ ಸರ್ಕಾರದ ಭೂ ವಿಜ್ಞಾನ ಇಲಾಖೆಯು ಸಂಶೋಧಿಸಿದೆ. ಭವಿಷ್ಯದಲ್ಲಿ ಬೃಹತ್ ಮಟ್ಟದ ಗಣಿಗಾರಿಕೆ ಪ್ರಾರಂಭವಾಗಲಿದ್ದು ದೊಡ್ಡ ಮಟ್ಟದ ಕೈಗಾರಿಕೆ ಪ್ರದೇಶವಾಗಲಿದೆ. PM-Gathi Shakthi ಹಾಗೂ ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ(PMKKKY)ಯ ನಿಯಮಗಳು “ಬಂದರು, ಗಣಿಗಾರಿಕೆ, ಕೈಗಾರಿಕೆ, ಬೃಹತ್ ಜನಸಂಖ್ಯೆ ಹೊಂದಿರುವ ಪ್ರದೇಶಗಳಿಗೆ ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸೌಲಭ್ಯ ಕಲ್ಪಿಸಿ ಅಭಿವೃದ್ಧಿಗೆ ಉತ್ತೇಜನ ನೀಡಬೇಕೆಂದು” ಕಾನೂನು ಅನ್ವಯವಾಗಿದೆ.
ಗದಗ-ವಾಡಿ ರೈಲ್ವೆ ಮಾರ್ಗದ ಯೋಜನೆಯು ಸದ್ಯ ಇರುವ ಮಾರ್ಗವನ್ನು ರದ್ದುಪಡಿಸಿ, ಹಟ್ಟಿ ಚಿನ್ನದ ಗಣಿ ಮುಖಾಂತರ ಹಾದುಹೋಗುವಂತೆ ತನ್ನ ಮೂಲ ಮಾರ್ಗದ ನಕ್ಷೆಯಂತೆ ಅನುಮೋದಿಸಿ, ಹಟ್ಟಿ ಚಿನ್ನದ ಗಣಿಗೆ ರೈಲ್ವೆ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಕ್ತಿ ಯೋಜನೆಯಿಂದ ಮಹಿಳೆಯರ ಆರ್ಥಿಕ ಸಬಲೀಕರಣ ; ಪಾಮಯ್ಯ ಮುರಾರಿ
ಈ ಸಂದರ್ಭದಲ್ಲಿ ಹಟ್ಟಿ ನಾಗರಿಕ ಸಮಿತಿ ಅಧ್ಯಕ್ಷ ಸುರೇಶ್ ಗೌಡ ಗುರಿಕಾರ್ , ನವ ಭಾರತ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ವಿನೋದ್ ಕುಮಾರ್ ಹಾಗೂ ಬಸವರಾಜ್ ಗೌಡ ಪೊಲೀಸ್ ಪಾಟೀಲ್ ವೆಂಕಟಗಿರಿ ಉಪಸ್ಥಿತರಿದ್ದರು.

